ADVERTISEMENT

ಮಹದೇಶ್ವರ ಬೆಟ್ಟ: 12 ಸಾವಿರ ಭಕ್ತರಿಂದ ದರ್ಶನ

ಪ್ರವೇಶಕ್ಕೆ ಮುಕ್ತವಾದ ನಂತರ ಅತಿ ಹೆಚ್ಚು ಜನರ ಭೇಟಿ

ಸೂರ್ಯನಾರಾಯಣ ವಿ
Published 24 ಜೂನ್ 2020, 4:04 IST
Last Updated 24 ಜೂನ್ 2020, 4:04 IST
ಮಾದಪ್ಪನ ದರ್ಶನಕ್ಕಾಗಿ ಮಂಗಳವಾರ ಮಹದೇಶ್ವರ ಬೆಟ್ಟದಲ್ಲಿ ಅಂತರ ಕಾಯ್ದುಕೊಂಡು ಸಾಲಿನಲ್ಲಿ ಭಕ್ತರು ನಿಂತಿದ್ದರು
ಮಾದಪ್ಪನ ದರ್ಶನಕ್ಕಾಗಿ ಮಂಗಳವಾರ ಮಹದೇಶ್ವರ ಬೆಟ್ಟದಲ್ಲಿ ಅಂತರ ಕಾಯ್ದುಕೊಂಡು ಸಾಲಿನಲ್ಲಿ ಭಕ್ತರು ನಿಂತಿದ್ದರು   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ 12 ಸಾವಿರದಷ್ಟು ಭಕ್ತರು ಮಾದಪ್ಪನ ದರ್ಶನ ಮಾಡಿದ್ದಾರೆ.

ಲಾಕ್‌ಡೌನ್‌ ಪೂರ್ಣವಾಗಿ ಸಡಿಲಿಕೆಗೊಂಡು ನಂತರ ದೇವಸ್ಥಾನ ಪುನರಾರಂಭವಾದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಬರುತ್ತಿರುವುದು ಇದೇ ಮೊದಲು.

ಎಣ್ಣೆ ಮಜ್ಜನ ಹಾಗೂ ಅಮಾವಾಸ್ಯೆ ವಿಶೇಷ ಪೂಜೆ‌ಗಳ ಸಂದರ್ಭದಲ್ಲಿ ಹೆಚ್ಚು ಭಕ್ತರು ಬಂದರೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಜೂನ್‌ 19ರಿಂದ 21ರವರೆಗೆ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು.

ADVERTISEMENT

ಸೋಮವಾರ ಮತ್ತೆ ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ಮೊದಲ ದಿನ ಐದು ಸಾವಿರದಷ್ಟು ಭಕ್ತರು ಮಹದೇಶ್ವರಸ್ವಾಮಿಯ ದರ್ಶನ ಮಾಡಿದ್ದರು. ಮಂಗಳವಾರ ಇದರ ದುಪ್ಪಟ್ಟು ಭಕ್ತರು ಬಂದಿದ್ದಾರೆ.

‘ಅಂದಾಜು 10 ಸಾವಿರದಿಂದ 12 ಸಾವಿರದಷ್ಟು ಭಕ್ತರು ಮಂಗಳವಾರ ಬಂದಿದ್ದಾರೆ. ಕೋವಿಡ್‌ –19 ತಡೆಗಾಗಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ದರ್ಶನಕ್ಕೆ ಅವಕಾಶ ನೀಡಿದ್ದೇವೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್‌ 8ರಂದುದೇವಾಲಯವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಿದ ನಂತರ ಇಷ್ಟು ಪ್ರಮಾಣದ ಭಕ್ತರು ಬಂದಿರುವುದು ಇದೇ ಮೊದಲು. ಮಂಗಳವಾರ ಒಂದೇ ದಿನ 15 ಸಾವಿರ ಲಾಡು ಪ್ರಸಾದ ಮಾರಾಟವಾಗಿದೆ. ವಿಶೇಷ ದಾಸೋಹದಲ್ಲಿ (ಉಪಾಹಾರ)ಏಳು ಸಾವಿರ ಮಂದಿ ಪ್ರಸಾದ ಸೇವಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಕಟ್ಟು ನಿಟ್ಟಿನ ಪಾಲನೆ: ಕೋವಿಡ್‌–19 ತಡೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ.

ಬಂದಿರುವ ಭಕ್ತರನ್ನು ರಂಗ ಮಂದಿರದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಕೂರಿಸಲಾಗುತ್ತದೆ. ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಸ್ಯಾನಿಟೈಸರ್‌ ನೀಡುವ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಲ್ಲಿಸಲಾಗುತ್ತದೆ. ಒಮ್ಮೆಗೆ 180 ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ.

‘ಮಕ್ಕಳು, ಬಾಣಂತಿಯರು, ಚಿಕ್ಕ ಮಕ್ಕಳೊಂದಿಗೆ ಬಂದಿರುವ ತಾಯಂದಿರು ಹಾಗೂ ಹಿರಿಯ ನಾಗರಿಕರನ್ನು ದೇವಸ್ಥಾನದ ಒಳಕ್ಕೆ ಬಿಡುತ್ತಿಲ್ಲ. ಹೊರಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ’ ಎಂದು ಜಯವಿಭವಸ್ವಾಮಿ ಹೇಳಿದರು.

30 ಸಾವಿರ ಭಕ್ತರ ನಿರ್ವಹಣೆ ಸಾಮರ್ಥ್ಯ

‘ಸದ್ಯ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು 25 ಸಾವಿರದಿಂದ 30 ಸಾವಿರದಷ್ಟು ಭಕ್ತರನ್ನು ನಿರ್ವಹಿಸುವ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ಅದಕ್ಕಿಂತ ಹೆಚ್ಚು ಭಕ್ತರು ಬಂದರೆ ನಿರ್ವಹಿಸುವುದು ಕಷ್ಟ. ಅಮಾವಾಸ್ಯೆ ವಿಶೇಷ ಪೂಜೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಬರುತ್ತಾರೆ. ನಮ್ಮ ಮಿತಿಗಿಂತ ಹೆಚ್ಚು ಬಂದರೆ ಅವರಿಗೆ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಿಲ್ಲ. ಈ ಕಾರಣದಿಂದಾಗಿ ಮೂರು ದಿನಗಳ ಕಾಲ ಭಕ್ತರಿಗೆ ನಿರ್ಬಂಧ ವಿಧಿಸುವ ತೀರ್ಮಾನಕ್ಕೆ ಬಂದೆವು’ ಎಂದು ಜಯ ವಿಭವಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.