
ಚಾಮರಾಜನಗರ: ‘ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಫೆ.14ರಿಂದ 18ರವರೆಗೆ ಮಹಾ ಶಿವರಾತ್ರಿ ಮಹೋತ್ಸವ ನಡೆಯಲಿದ್ದು, ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಭಕ್ತರ ಸುರಕ್ಷತೆಗೆ ಅಗತ್ಯ ಭದ್ರತೆ ಕೈಗೊಳ್ಳಲಾಗಿದ್ದು , ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಹೇಳಿದರು.
ನಗರದಲ್ಲಿ ಬುಧವಾರ ಮಾತನಾಡಿ, ‘ಫೆ.9ರಿಂದಲೇ ಭಕ್ತರು ಕಾಲ್ನಡಿಗೆಯಲ್ಲಿ ನಿರಂತರವಾಗಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 6 ರಿಂದ 7ಲಕ್ಷ ಭಕ್ತರು ಮಾದಪ್ಪನ ಸನ್ನಿಗೆ ಬರುವ ನಿರೀಕ್ಷೆ ಇದೆ. ಶಿವರಾತ್ರಿ ಜಾತ್ರೆಗೆ ಬರುವ ಭಕ್ತರ ಪೈಕಿ ಪಾದಯಾತ್ರೆ ಮೂಲಕ ಬರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಈಗಾಗಲೇ ಸಾವಿರಾರು ಮಂದಿ ಸಂಗಮ ಸ್ಥಳದಿಂದ ಕಾವೇರಿ ನದಿ ದಾಟಿ ಕ್ಷೇತ್ರದತ್ತ ಸಾಗುತಿದ್ದಾರೆ. ಇವರಿಗೆ ಅಗತ್ಯ ಭದ್ರತೆ ಒದಗಿಸಲಾಗಿದೆ. ವೃದ್ಧರು, ಮಹಿಳೆಯರು, ಮಕ್ಕಳು ನದಿ ದಾಟಿ ಬರಲು ಎಸ್‌ಡಿಆರ್‌ಎಫ್ ಸಿಬ್ಬಂದಿ ನೆರವು ನೀಡುತ್ತಿದ್ದಾರೆ. ಪೊಲೀಸ್, ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಮಾದಪ್ಪನ ಕ್ಷೇತ್ರ ತಲುಪಲು ಭಕ್ತರು ಅರಣ್ಯದೊಳಗೆ ಪಾದಯಾತ್ರೆ ಮಾಡಬೇಕಾಗಿರುವುದರಿಂದ ವನ್ಯಜೀವಿಗಳ ದಾಳಿ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಸವನಕಣದಿಂದ ಎಲ್ಲೆಮಾಳದವರೆಗೆ 18 ತಂಡಗಳನ್ನು ನಿಯೋಜಿಸಲಾಗಿದೆ, ಪ್ರತಿ ತಂಡದಲ್ಲಿ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ,ಒಬ್ಬರು ಪೊಲೀಸ್ ಹಾಗೂಒಬ್ಬರು ಹೋಂಗಾರ್ಡ್ಸ್ ಸಿಬ್ಬಂದಿ ಸೇರಿದಂತೆ ನಾಲ್ವರು ಇರಲಿದ್ದಾರೆ’ ಎಂದು ಎಸ್‌ಪಿ ತಿಳಿಸಿದರು.
‘ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇರಿಸಲು ಥರ್ಮಲ್ ಡ್ರೋನ್ ಕ್ಯಾಮೆರಾ, ಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಪಟಾಕಿ, ಬಂದೂಕುಗಳನ್ನು ನೀಡಲಾಗಿದೆ. ಒಂದು ಕಿ.ಮೀ.ಗೆ ಒಂದರಂತೆ ತಂಡವನ್ನು ನಿಯೋಜಿಸಲಾಗಿದ್ದು , ಪ್ರಾಣಿಗಳು ಪತ್ತೆಯಾದರೆ ಭಕ್ತರಿಗೆ ಭದ್ರತೆ ಒದಗಿಸುವುದರ ಜೊತೆಗೆ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಅರಣ್ಯ ಪ್ರದೇಶದೊಳಗಿರುವ ಕಿರಿದಾದ ರಸ್ತೆಗಳಲ್ಲಿ ಪಾದಯಾತ್ರಿಗಳು ಎಚ್ಚರಿಕೆಯಿಂದ ನಡೆಯಬೇಕು. ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆಯ ಎಡಬದಿಯಲ್ಲಿ ಮಾತ್ರ ಸಂಚರಿಸಬೇಕು, ಗುಂಪಾಗಿ ಮಾತ್ರ ಸಂಚರಿಸಬೇಕು, ಏಕಾಂಗಿಯಾಗಿ ಕಾಡಿನೊಳಗೆ ಪಾದಯಾತ್ರೆ ಸುರಕ್ಷಿತವಲ್ಲ, ರಾತ್ರಿಯ ಹೊತ್ತು ಪಾದಯಾತ್ರೆ ಸ್ಥಗಿತಗೊಳಿಸಿ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡಬೇಕು. ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಮಕ್ಕಳನ್ನು ಪಾದಯಾತ್ರೆಗೆ ಕರೆತರಬಾರದು’ ಎಂದು ಎಸ್‌ಪಿ ಮುತ್ತುರಾಜ್ ಮಾಹಿತಿ ನೀಡಿದರು.
‘ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ವಾಹನಗಳ ದಟ್ಟಣೆ ತಡೆಗೆ ತಾಳುಬೆಟ್ಟದಿಂದ ಮಲೆ ಮಹದೇಶ್ವರನ ದೇವಸ್ಥಾನದವರೆಗೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೈಕ್ ಹಾಗೂ ತ್ರಿಚಕ್ರವಾಹನಗಳಲ್ಲಿ ಬರುವ ಭಕ್ತರು ತಾಳುಬೆಟ್ಟದ ಬಳಿ ವಾಹನಗಳನ್ನು ನಿಲುಗಡೆ ಮಾಡಿ ಬಸ್‌ಗಳಲ್ಲಿ ಬೆಟ್ಟಕ್ಕೆ ತೆರಳಬೇಕು. ಎಲ್ಲೆಮಾಳದಿಂದ ತಾಳಬೆಟ್ಟದವರೆಗೂ ರಸ್ತೆಯಲ್ಲಿ ಪಾದಯಾತ್ರಿಗಳು ಸಾಗುವುದರಿಂದ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕು. ವೇಗ ತಡೆಗೆ ಜಿಗ್ ಜಾಗ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು ಸವಾರರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.