ಚಾಮರಾಜನಗರ: ಜಿಲ್ಲೆಯ ನಗರ ಪ್ರದೇಶದಲ್ಲಿ ಒಟ್ಟು 8,660 ನಕಲಿ ಪಡಿತರ ಚೀಟಿ ರದ್ದುಪಡಿಸಲಾಗಿದೆ.
ರಾಜ್ಯ ಸರ್ಕಾರದ ಸೂಚನೆ ಅನ್ವಯ ಪಂಚತಂತ್ರ ಯೋಜನೆ ಮೂಲಕ ಅಕ್ರಮ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿತ್ತು. ಗ್ರಾಮ ಪಂಚಾಯಿತಿ ಸೇರಿದಂತೆ ನಗರ ಪ್ರದೇಶದಲ್ಲಿ ಮನೆಯ ಕಂದಾಯ ಸಂಖ್ಯೆ, ವಿದ್ಯುತ್ ಬಿಲ್‌ನ ಆರ್‌ಆರ್ ನಂಬರ್ ಹೊಂದಾಣಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಜಿಲ್ಲೆಯ ನಗರ ಪ್ರದೇಶದ ವ್ಯಾಪ್ತಿಯಲ್ಲಿ ನಕಲಿ ಪಡಿತರ ಚೀಟಿಗಳನ್ನು ಮಾತ್ರ ರದ್ದುಪಡಿಸಲಾಗಿದೆ.
ಗ್ರಾಮೀಣ ಪ್ರದೇಶದ 41 ಸಾವಿರ ಪಡಿತರ ಚೀಟಿಗಳನ್ನು ರದ್ದುಪಡಿಸುವ ಸಂಬಂಧ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪರಿಶೀಲನಾ ಕಾರ್ಯವೂ ನಡೆಯುತ್ತಿದೆ. ಸರ್ಕಾರ ಸೂಚಿಸಿದ್ದ ನಿರ್ದಿಷ್ಟ ದಾಖಲೆಗಳು ಇಲ್ಲದ ಪಡಿತರ ಚೀಟಿಗಳು ರದ್ದಾಗಲಿವೆ. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ 2,33,089 ಪಡಿತರ ಚೀಟಿ ವಿತರಿಸಲಾಗಿದೆ. ನಗರ ಪ್ರದೇಶದಲ್ಲಿ 42 ಸಾವಿರ ಕಾರ್ಡ್ ಹಂಚಿಕೆ ಮಾಡಲಾಗಿದೆ.
ಆನ್‌ಲೈನ್ ವ್ಯವಸ್ಥೆ
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲೂ ಆನ್‌ಲೈನ್ ಮೂಲಕ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಇಲ್ಲಿಯವರೆಗೆ 24 ಸಾವಿರ ಅರ್ಜಿ ಸ್ವೀಕರಿಸಲಾಗಿದೆ.
ಸಮರ್ಪಕವಾಗಿ ಪರಿಶೀಲನೆ ನಡೆಸಿ ಅರ್ಹರಿಗೆ ಕಾರ್ಡ್ ವಿತರಿಸಲು ಜಿಲ್ಲಾ ಆಹಾರ ಇಲಾಖೆ ನಿರ್ಧರಿಸಿದೆ. ಹೊಸದಾಗಿ ಪಡಿತರ ಚೀಟಿ ಪಡೆಯುವ ಗ್ರಾಮೀಣ ಪ್ರದೇಶದವರಿಗೆ 12 ಸಾವಿರ ರೂ ವಾರ್ಷಿಕ ವರಮಾನ ನಿಗದಿಪಡಿಸಲಾಗಿದೆ. ನಗರ ಪ್ರದೇಶದವರಿಗೆ 17 ಸಾವಿರ ರೂ ನಿಗದಿಯಾಗಿದೆ. ಆಹಾರ ನಿರೀಕ್ಷಕರೇ ಖುದ್ದಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ವಿದ್ಯುತ್ ಬಿಲ್‌ನ ಆರ್‌ಆರ್ ನಂಬರ್ ಸೇರಿದಂತೆ ಈಗಾಗಲೇ ಫಲಾನುಭವಿಯ ಕುಟುಂಬ ಪಡಿತರ ಚೀಟಿ ಪಡೆದಿದೆಯೇ? ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಿದ್ದಾರೆ.
3 ಹೆಕ್ಷೇರ್‌ಗಿಂತಲೂ ಹೆಚ್ಚಿಗೆ ಒಣಭೂಮಿ ಅಥವಾ ನೀರಾವರಿ ಪ್ರದೇಶ ಹೊಂದಿದವರು, ಸ್ಥಿರ ದೂರವಾಣಿ ಹೊಂದಿರುವವರು ಲೂನಾ, ಟಿವಿಎಸ್ ಮೊಪೆಡ್ ಹೊರತುಪಡಿಸಿ ಸ್ವಂತವಾಗಿ ಯಾವುದೇ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಬಳಸುವ ವಾಹನ ಹೊಂದಿರುವ ಕುಟುಂಬಗಳಿಗೆ ಪಡಿತರ ಚೀಟಿ ನೀಡುವುದಿಲ್ಲ. ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ರೂ 1 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿರುವವರು ಹಾಗೂ ಕೊಳವೆಬಾವಿಯ ನೀರಾವರಿ ಸೌಲಭ್ಯ ಇರುವವರಿಗೆ ಕಾರ್ಡ್ ವಿತರಿಸುವುದಿಲ್ಲ.
ತಿಂಗಳಿಗೆ ರೂ 1 ಸಾವಿರಕ್ಕೂ ಅಧಿಕ ವೇತನ ಪಡೆಯುತ್ತಿರುವ ಸರ್ಕಾರಿ, ಸರ್ಕಾರೇತರ ಮತ್ತು ಖಾಸಗಿ ಸಿಬ್ಬಂದಿ, ಆದಾಯ ತೆರಿಗೆ ಪಾವತಿಸುವವರು, ರಿಜಿಸ್ಟರ್ಡ್ ಗುತ್ತಿಗೆದಾರರು, ಎಪಿಎಂಸಿ ವ್ಯಾಪಾರಸ್ಥರು, ಕಮಿಶನ್ ಏಜೆಂಟರು, ಬಿತ್ತನೆಬೀಜ, ರಸಗೊಬ್ಬರ ವಿತರಕರಿಗೆ ಕಾರ್ಡ್ ನೀಡುವುದಿಲ್ಲ. ಆಹಾರ ನಿರೀಕ್ಷಕರ ಸಮೀಕ್ಷೆ ವೇಳೆ ಕುಟುಂಬದ ಜೀವನಮಟ್ಟವನ್ನು ಪರಿಶೀಲಿಸಲಾಗುತ್ತದೆ ಎಂಬುದು ಅಧಿಕಾರಿಗಳ ವಿವರಣೆ.
`ಪ್ರಸ್ತುತ ಆನ್‌ಲೈನ್ ಮೂಲಕ ಸ್ವೀಕರಿಸಿರುವ ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ನಂತರ, ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಗ್ರಾಮೀಣರಿಗೆ ಗ್ರಾ.ಪಂ. ಕಚೇರಿಗಳಲ್ಲಿ ಹಾಗೂ ನಗರ ಪ್ರದೇಶದವರಿಗೆ ನಿಗದಿತ ಸ್ಥಳದಲ್ಲಿ ಭಾವಚಿತ್ರ ಮತ್ತು ಬೆರಳಚ್ಚು ತೆಗೆಯಲಾಗುವುದು. ಫಲಾನುಭವಿ ಹೊಂದಿರುವ ಜೀವನಮಟ್ಟದ ಆಧಾರದ ಮೇಲೆ ನಿರ್ದಿಷ್ಟಪಡಿಸಿದ ಪಡಿತರ ಚೀಟಿ ವಿತರಿಸ ಲಾಗುವುದು~ ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ಇ. ಮಹದೇವಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
`ಸಮರ್ಪಕ ದಾಖಲೆ ಸಲ್ಲಿಸದ ಹಾಗೂ ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಪಡೆದಿರುವ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತದೆ. ಈಗ ನಗರ ಪ್ರದೇಶದ ವ್ಯಾಪ್ತಿಯ ನಕಲಿ ಕಾರ್ಡ್ ರದ್ದುಪಡಿಸಲಾಗಿದೆ. ಗ್ರಾಮೀಣ ಪ್ರದೇಶದ ಪಡಿತರ ಚೀಟಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಸೂಕ್ತ ದಾಖಲೆ ಇಲ್ಲದ ಕಾರ್ಡ್‌ಗಳು ರದ್ದಾಗಲಿವೆ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.