ADVERTISEMENT

ಚಾಮರಾಜನಗರ: ಭೂಮಾಪನ ಇಲಾಖೆಯ ಸೂಪರ್‌ವೈಸರ್‌ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 11:12 IST
Last Updated 9 ಡಿಸೆಂಬರ್ 2020, 11:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಪೋಡಿ ಮಾಡಿಕೊಡಲು ಅರ್ಜಿದಾರರಿಂದ ₹2,000 ಲಂಚ ಪಡೆಯುತ್ತಿದ್ದ ಇಲ್ಲಿನ ತಾಲ್ಲೂಕು ಕಚೇರಿಯ ಭೂ ಮಾಪನಾ ಇಲಾಖೆಯ ಸೂಪರ್‌ವೈಸರ್‌ ಒಬ್ಬರು ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ನಾಗರಾಜು ಅವರು ಲಂಚ ಪಡೆದ ಸೂಪರ್‌ವೈಸರ್‌. ಎಸಿಬಿ ಪೊಲೀಸರು ಅವರನ್ನು ಬಂಧಿಸಿದ್ದು, ₹2,000 ನಗದನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಚಿಕ್ಕಮೋಳೆ ಗ್ರಾಮದ ಮಹೇಶ್‌ ಅವರ ತಂದೆ ತಮ್ಮ 1 ಎಕರೆ 22 ಗುಂಟೆ ಜಮೀನಿನ ಪೈಕಿ 31 ಗುಂಟೆ ಜಮೀನಿನ ಪೋಡಿ ಮಾಡಿಕೊಡಲು ನವೆಂಬರ್‌ 12ರಂದು ಹರದನಹಳ್ಳಿಯ ಉಪತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮಹೇಶ್‌ ಅವರು ಇದೇ 5ರಂದು ತಾಲ್ಲೂಕು ಕಚೇರಿಯಲ್ಲಿ ಸೂಪರ್‌ ವೈಸರ್‌ ನಾಗರಾಜು ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ, ಕೆಲಸ ಮಾಡಿಕೊಡಲು ₹2,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ADVERTISEMENT

ಈ ಸಂಬಂಧ, ಮಹೇಶ್‌ ಅವರು ಬುಧವಾರ ಬೆಳಿಗ್ಗೆ ಎಸಿಬಿ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳ ತಂಡ, ತಾಲ್ಲೂಕು ಕಚೇರಿ ಆವರಣದಲ್ಲಿ ಮಹೇಶ್‌ ಅವರಿಂದ ನಾಗರಾಜು ಅವರು ಹಣ ಪಡೆಯುತ್ತಿದ್ದಾಗ ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿಎಸಿಬಿ ಡಿವೈಎಸ್‌ಪಿ ಸದಾನಂದ ತಪ್ಪಣ್ಣವರ್‌, ಇನ್‌ಸ್ಪೆಕ್ಟರ್‌ಗಳಾದ ಕಿರಣ್‌ಕುಮಾರ್‌, ಎಲ್‌ ದೀಪಕ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.