ADVERTISEMENT

ಅಭಿಮಾನಿಗಳ ಕೆಲಸದಿಂದ ಅಪ್ಪು ಧ್ಯೇಯ ಸಾಕಾರ: ನಟ ವಿಜಯ ರಾಘವೇಂದ್ರ

ಪುನೀತ್‌ ಸ್ಮರಣಾರ್ಥ ರಕ್ತದಾನ, ನೇತ್ರದಾನ ನೋಂದಣಿ ಶಿಬಿರ; ರಕ್ತದಾನ ಮಾಡಿದ ವಿಜಯ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:19 IST
Last Updated 25 ನವೆಂಬರ್ 2021, 16:19 IST
ಚಾಮರಾಜನಗರದ ರೋಟರಿ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಪುನೀತ್‌ ರಾಜ್‌ಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನಟ ವಿಜಯ ರಾಘವೇಂದ್ರ ರಕ್ತದಾನ ಮಾಡಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಇದ್ದಾರೆ
ಚಾಮರಾಜನಗರದ ರೋಟರಿ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಪುನೀತ್‌ ರಾಜ್‌ಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನಟ ವಿಜಯ ರಾಘವೇಂದ್ರ ರಕ್ತದಾನ ಮಾಡಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಇದ್ದಾರೆ   

ಚಾಮರಾಜನಗರ: ‘ತಾನು ಮಾತ್ರ ಅಲ್ಲ, ಎಲ್ಲರೂ ಬೆಳೆಯಬೇಕು ಎಂದು ಪುನೀತ್‌ ರಾಜ್‌ಕುಮಾರ್‌ ಬಯಸಿದ್ದರು. ಬದುಕಿನಲ್ಲಿ ಏನೇನು ಮಾಡಬೇಕು ಎಂದು ಅವರು ನೀಲ ನಕ್ಷೆ ಹಾಕಿ ಹೋಗಿದ್ದಾರೆ. ಅವರ ಜೀವನದ ಉದ್ದೇಶ, ಧ್ಯೇಯಗಳು ಅಭಿಮಾನಿಗಳು, ಹಿತೈಷಿಗಳು ಮಾಡುವ ಒಳ್ಳೆಯ ಕೆಲಸಗಳ ಮೂಲಕ ಸಾಕಾರವಾಗುತ್ತಿದೆ’ ಎಂದು ನಟ ವಿಜಯ ರಾಘವೇಂದ್ರ ಗುರುವಾರ ಇಲ್ಲಿ ಹೇಳಿದರು.

ಯಡಬೆಟ್ಟದ ಹೊಸ ಬೋಧನಾ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ,ರೋಟರಿ ಸಿಲ್ಕ್‌ಸಿಟಿ, ವೈದ್ಯಕೀಯ ಶಿಕ್ಷಣ ಸಂಸ್ಥೆಯ ರಕ್ತನಿಧಿ ಕೇಂದ್ರ, ರೆಡ್‌ಕ್ರಾಸ್‌ ಸೊಸೈಟಿಗಳ ಸಹಯೋಗದಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ನಡೆದ ರಕ್ತದಾನ, ನೇತ್ರದಾನ ಶಿಬಿರ ಉದ್ಘಾಟಿಸಿದ ಅವರು ಮಾತನಾಡಿದರು.

‘ಬೇರೆ ಸಮಯದಲ್ಲಾಗಿದ್ದರೆ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರಗಳಲ್ಲಿ ಭಾಗವಹಿಸುವುದು ಖುಷಿ ಪಡುವ ಸಂದರ್ಭ. ಎಲ್ಲರೂ ಒಂದು ಉದ್ದೇಶದಿಂದ ಸೇರಿದ್ದೇವೆ. ಆದರೆ, ಈಗ ನನಗೆ ವೈಯಕ್ತಿಕವಾಗಿ ಖುಷಿ ಪಡಲು ಆಗುತ್ತಿಲ್ಲ. ದೊಡ್ಡ ನಟ, ದೊಡ್ಡ ನಟನ ಮಗ ಎಂದು ಅನ್ನಿಸಿಕೊಳ್ಳದೇ, ಎಲ್ಲರಿಂದಲೂ ಪ್ರೀತಿ ಪಡೆದಿರುವಂತಹ ವ್ಯಕ್ತಿತ್ವ ಅಪ್ಪು ಅವರದ್ದು. ಅವರ ಜೊತೆಗೆ ಆಡಿದ್ದೇವೆ. ಬೆಳೆದಿದ್ದೇವೆ. ಆದರೆ ಅವರಿಂದ ಏನು ಕಲಿತಿದ್ದೇವೆ ಎಂಬುದು ಇವತ್ತು ಈ ವೇದಿಕೆಯಲ್ಲಿ ನನಗೆ ಅರ್ಥವಾಗುತ್ತಿದೆ’ ಎಂದರು.

ADVERTISEMENT

ರಕ್ತದಾನ ಮಾಡಿ: ‘ರಕ್ತದಾನ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ, ಅವರಿಂದ ಇನ್ನೊಂದು ಜೀವ ಉಳಿಯುತ್ತದಲ್ಲಾ ಅದು ದೊಡ್ಡ ಸಂಗತಿ. ಎಲ್ಲರೂ ರಕ್ತದಾನ ಮಾಡಬೇಕು. ಯಾವುದೇ ಭಯ, ಆತಂಕ ಬೇಡ. ರಕ್ತದಾನ ಮಾಡಿದರೆ ನಮ್ಮ ದೇಹಕ್ಕೇ ಒಳ್ಳೆಯದು. ಇನ್ನೊಬ್ಬರ ದೇಹಕ್ಕೂ ಒಳ್ಳೆಯದು’ ಎಂದು ಹೇಳಿದರು.

ಸ್ವಾವಲಂಬಿಗಳಾಗೋಣ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರತಿ ದಿನ 35 ಯುನಿಟ್‌ಗಳಷ್ಟು ರಕ್ತ ಅಗತ್ಯವಿದೆ. ಆದರೆ, ನಮ್ಮಲ್ಲಿ 25 ಯುನಿಟ್‌ಗಳಷ್ಟು ಮಾತ್ರ ಸಂಗ್ರಹವಾಗುತ್ತದೆ. ಅಗತ್ಯ ಬಿದ್ದಾಗ ಬೇರೆ ಜಿಲ್ಲೆಯಿಂದ ತರುವ ಪರಿಸ್ಥಿತಿ ಇದೆ. ಇದು ತಪ್ಪಬೇಕು’ ಎಂದರು.

‘ನಮ್ಮಲ್ಲಿ ಜನಸಂಖ್ಯೆ ಸಾಕಷ್ಟು ಇದೆ. ಜನರು ರಕ್ತದಾನಕ್ಕೆ ಮುಂದಾಗಬೇಕು. ರಕ್ತದ ಲಭ್ಯತೆಯಲ್ಲಿ ಜಿಲ್ಲೆ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ. ವೈದ್ಯಕೀಯ ಶಿಕ್ಷಣ ಸಂಸ್ಥೆಯ ರಕ್ತನಿಧಿ ಕೇಂದ್ರಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

ರೋಟರಿಯ ಮಾಜಿ ಜಿಲ್ಲಾ ಗವರ್ನರ್‌ ಡಾ.ಆರ್.ಎಸ್.ನಾಗಾರ್ಜುನ್‌, ಜಿಲ್ಲಾ ರೆಡ್‌ಕ್ರಾಸ್‌ ಸೊಸೈಟಿಯ ಕಾರ್ಯದರ್ಶಿ ಡಾ.ಮಹೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ, ಜಿಲ್ಲಾ ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್, ರೋಟರಿ ಅಧ್ಯ್ಯಕ್ಷ ಎ.ಶ್ರೀನಿವಾಸನ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರವಿ ಪ್ರಣವ್, ರಕ್ತನಿಧಿ ಘಟಕ ಅಧಿಕಾರಿ ಡಾ.ದಿವ್ಯಾ, ರೋಟರಿ ಸಿಲ್ಕ್‌ಸಿಟಿ ಕಾರ್ಯದರ್ಶಿ ಅಕ್ಷಯ್, ವಲಯ ಪ್ರತಿನಿಧಿ ರವಿಶಂಕರ್, ದೊಡ್ಡರಾಯಪೇಟೆ ಗಿರೀಶ್, ಚೈತನ್ಯ ಹೆಗಡೆ, ಆಲೂರು ಪ್ರದೀಪ್ ಉಪಸ್ಥಿತರಿದ್ದರು.

92 ಮಂದಿಯಿಂದ ರಕ್ತದಾನ

ಶಿಬಿರದಲ್ಲಿ ವಿಜಯ ರಾಘವೇಂದ್ರ ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು. 92 ಮಂದಿ ರಕ್ತದಾನ ಮಾಡಿದರೆ, 106 ಮಂದಿ ನೇತ್ರದಾನಕ್ಕಾಗಿ ಹೆಸರು ನೋಂದಾಯಿಸಿಕೊಂಡರು.

ರಕ್ತದಾನ ಶಿಬಿರದಲ್ಲಿ ಈ ಪ್ರಮಾಣದಲ್ಲಿ ಜನರು ರಕ್ತದಾನ ಮಾಡಿರುವುದು ಇದೇ ಮೊದಲು ಎಂದು ರೋಟರಿ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

***

ಪುನೀತ್‌ ನೇತ್ರದಾನ ಮಾಡಿದ್ದಾರೆ. ಇಲ್ಲೂ ನೋಂದಣಿ ನಡೆಯುತ್ತಿದೆ. ಇದು ಸಾರ್ಥಕತೆ ಕೊಡುವ ಕೆಲಸ. ಅಂಗಾಂಗ ದಾನ ಮಾಡುವ ಮನಸ್ಸು ಎಲ್ಲರಿಗೂ ಬರಬೇಕು

-ವಿಜಯ ರಾಘವೇಂದ್ರ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.