ADVERTISEMENT

ರಾಜಕೀಯ ಲೇಪದ ಬಂದ್‌: ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 15:29 IST
Last Updated 8 ಜನವರಿ 2020, 15:29 IST
ಎಸ್‌.ಸುರೇಶ್‌ ಕುಮಾರ್‌
ಎಸ್‌.ಸುರೇಶ್‌ ಕುಮಾರ್‌   

ಚಾಮರಾಜನಗರ: ‘ನರೇಂದ್ರ ಮೋದಿ, ಎನ್‌ಡಿಎ ಸರ್ಕಾರ ಹಾಗೂ ಬಿಜೆಪಿಯನ್ನು ವಿರೋಧಿಸುವವರೇ ಬಂದ್‌ನಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಇದು, ಕಾರ್ಮಿಕ ಸಂಘಟನೆಗಳ ನ್ಯಾಯಯುತ ಬೇಡಿಕೆಗಳ ಬಂದ್‌ಗಿಂತಲೂ, ರಾಜಕೀಯ ಲೇಪದಬೇಡಿಕೆಗಳ ಬಂದ್‌’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಮಿಕ ಸಂಘಟನೆಗಳ ನ್ಯಾಯಯುತ ಬೇಡಿಕೆಗಳ ಬಗ್ಗೆ ಚರ್ಚಿಸಲು, ಪರಿಹರಿಸಲು ಕೇಂದ್ರ ಸರ್ಕಾರ, ಅದರ ತಂಡ ಸಿದ್ಧವಿದೆ. ಆದರೆ, ಸಿಪಿಎಂ ಮುಖಂಡ ರಾಜಾ ಅವರು ದಿಢೀರ್‌ ಆಗಿ, ಜನವರಿ 8ರಂದು ಬಂದ್‌ ಮಾಡುವ ಘೋಷಣೆ ಮಾಡಿದ್ದರು’ ಎಂದು ಅವರು ಹೇಳಿದರು.

‘ಬಂದ್ ಎನ್ನುವುದು ಒಂದು ರೀತಿಯ ಜನವಿರೋಧಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದರಿಂದಾಗುವ ಅನಾಹುತಗಳಿಗೆ ಅವರೇ ಹೊಣೆ ಎಂದು ಹೇಳಿದೆ. ಬಂದ್‌ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಂದ್‌ಗೆ ಕರೆ ನೀಡುವಾಗ ಯೋಚನೆ ಮಾಡಬೇಕು. ಆದರೆ,ನ್ಯಾಯಯುತ ಬೇಡಿಕೆಗಿಂತ ಬೇರೆಯದೇ ಉದ್ದೇಶ ಇದ್ದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ರಾಜಕೀಯಕ್ಕಾಗಿ ಅಲ್ಲ, ಹಕ್ಕಿಗಾಗಿ: ಸುರೇಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುಜಾತಾ ಅವರು, 'ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಕಾರಣಕ್ಕೆ ಅಲ್ಲ' ಎಂದು ಹೇಳಿದರು.

ಮಾರ್ಚ್ ಒಳಗೆ ಶಿಕ್ಷಣ ಸಹಾಯವಾಣಿ

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ದೂರುಗಳನ್ನು ಸ್ವೀಕರಿಸಲು ಮಾರ್ಚ್ 31ರ ಒಳಗಾಗಿ ಸಹಾಯವಾಣಿ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

'ಈ ಸಹಾಯವಾಣಿ ಮಕ್ಕಳಿಗೆ ಮಾತ್ರ ಅಲ್ಲ. ಇಡೀ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದು. ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರೂ ಇದನ್ನು ಬಳಸಬಹುದು' ಎಂದರು.

'ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸಹಾಯವಾಣಿಗೆ ಕರೆ ಮಾಡಿ ನೀಡಬಹುದು. ಬಂದಿರುವ ದೂರುಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸುವುದು ನಮ್ಮ ಉದ್ದೇಶ' ಎಂದು ಹೇಳಿದರು.

ಅಲೆಮಾರಿಗಳಿಗೆ ಶಿಕ್ಷಣ: 'ಅಲೆಮಾರಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಕೆಲವು ಕಡೆ ಟೆಂಟ್ ಶಾಲೆಗಳ ಮೂಲಕ ಮಾಡಲಾಗುತ್ತಿದೆ. ಅಲೆಮಾರಿಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಒಂದು‌ ಮಗುವೂ ಶಿಕ್ಷಣ ವಂಚಿತ ಆಗಬಾರದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.