ADVERTISEMENT

ಎಫ್‌ಆರ್‌ಎಸ್ ರದ್ದುಗೊಳಿಸಿ: ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಅಂಗನವಾಡಿ ನೌಕರರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:30 IST
Last Updated 22 ಆಗಸ್ಟ್ 2025, 2:30 IST
ಮುಖಚರ್ಯೆ ಗುರುತಿಸುವ ನಿಯಮ ನಿಲ್ಲಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ತಾಲ್ಲೂಕು ಸಮಿತಿ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು
ಮುಖಚರ್ಯೆ ಗುರುತಿಸುವ ನಿಯಮ ನಿಲ್ಲಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ತಾಲ್ಲೂಕು ಸಮಿತಿ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು   

ಚಾಮರಾಜನಗರ:  ಮುಖಚರ್ಯೆ ಗುರುತಿಸುವ ಎಫ್ಆರ್‌ಎಸ್ ನಿಯಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಗುರುವಾರ ನಗರದ ಜಿಡಬ್ಲ್ಯೂಡಿ ಕಾಲೋನಿಯಲ್ಲಿ  ಶಿಶು ಅಭಿವೃದ್ಧಿ  ಯೋಜನಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.

ತಾಲೂಕು ಸಮಿತಿ ಪದಾಧಿಕಾರಿಗಳು, ಸದಸ್ಯರು ಕಪ್ಪುಪಟ್ಟಿ ಧರಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗೇಶ್ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷೆ ಎ.ನಾಗಮಣಿ  ಮಾತನಾಡಿ, ದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ಬಲಪಡಿಸಲು ಮಹತ್ವದ ಪಾತ್ರ ವಹಿಸುವ ಐಸಿಡಿಎಸ್‌ ಯೋಜನೆ ಜಾರಿಯಾಗಿ 50 ವರ್ಷಗಳು ತುಂಬುತ್ತಿವೆ.

ಯೋಜನೆಯನ್ನು ಸರಳೀಕರಿಸಿ ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರಗಳು  ಮುಂದಾಗುವ ಬದಲು ಯೋಜನೆಯನ್ನು ಸಂಕೀರ್ಣಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಸೌಲಭ್ಯ ಕೊಡದೆ ಮುಖಚರ್ಯೆ ಗುರುತಿಸುವ ಎಫ್‌ಆರ್‌ಎಸ್ ಅಳವಡಿಸಿದ್ದು ಕ್ಷೇತ್ರಮಟ್ಟದಲ್ಲಿ ತಾಂತ್ರಿಕ ಸಮಸ್ಯೆ ಅನುಭವಿಸುವಂತಾಗಿದೆ ಎಂದರು.

ADVERTISEMENT

2013ರಲ್ಲಿ ಜಾರಿಯಾದ ಆಹಾರ ಭದ್ರತಾ ಕಾಯ್ದೆಯ ಆಶಯದಂತೆ ದೇಶದಲ್ಲಿ ಯಾರೂ ಹಸಿವಿನಿಂದ ನರಳಬಾರದು ಎಂಬುದಾಗಿದ್ದು ಆಧಾರ್‌ ಕಾರ್ಡ್ ಇಲ್ಲ ಎಂಬ ನೆಪದಲ್ಲಿ ಸಬ್ಸಿಡಿ ಹಾಗೂ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳಿಗೆ ವಂಚನೆಯಾಗಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಆಶಯಗಳನ್ನು ಸಂರಕ್ಷಣೆ ಮಾಡಬೇಕಾದ ಸರ್ಕಾರ ಎಫ್‌ಆರ್‌ಎಸ್ ಕಡ್ಡಾಯಗೊಳಿಸುವ ಮೂಲಕ ಫಲಾನುಭವಿಗಳ ಹಕ್ಕು ಕಸಿಯುತ್ತಿದೆ ಎಂದರು.

ಎಫ್‌ಆರ್‌ಎಸ್ ಮುಖಾಂತರ ಸಂಗ್ರಹಿಸುವ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಅಪಾಯವಿದ್ದು ಸೈಬರ್ ವಂಚನೆಗಳು ಹೆಚ್ಚಾಗುವ ಭೀತಿ ಇದೆ. ಐಸಿಡಿಎಸ್ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ಎಫ್‌ಆರ್‌ಎಸ್‌ನಂತಹ ನಿರ್ಬಂಧ ಹೇರಲು ಮುಂದಾಗಿರುವುದು ಖಂಡನೀಯ ಎಂದರು.

ಚಟುವಟಿಕೆಗಳ ಆಧಾರದಲ್ಲಿ ಹಣ ಬಿಡುಗಡೆ ಮಾಡುವ ವಿಧಾನ, ಐಸಿಡಿಎಸ್ ಫಲಾನುಭವಿಗಳ ಸಂಖ್ಯೆ ಕಡಿಮೆ ತೋರಿಸಿ ಹಣ ಕಡಿತ ಮಾಡುವ ಕ್ರಮಗಳು ದೇಶವನ್ನು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮತ್ತಷ್ಟು ಕುಸಿಯಲಿದೆ. ಎಫ್‌ಆರ್‌ಎಸ್ ರದ್ದು ಮಾಡಿ ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ‘ಸಿ’ ಮತ್ತು ‘ಡಿ’ ಗುಂಪಿನ ನೌಕರರು ಎಂದು ಪರಿಗಣಿಸಬೇಕು.  2018ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸಿ, ಫಲಾನುಭವಿಗಳ ಘಟಕ ವೆಚ್ಚವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಲಾಯಿತು.

ಬೇಡಿಕೆಗಳನ್ನು ಈಡೇರಿಸದಿದ್ದರೆ ಕೇಂದ್ರ ಸಚಿವರ ನಿವಾಸದ ಎದುರು ಅನಿರ್ಧಿಷ್ಟಾವಧಿ ಧರಣಿ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಎ.ನಾಗಮಣಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಸಂಘದ ಕಾರ್ಯದರ್ಶಿ ಶಾಹಿದಾ ಭಾನು, ಖಜಾಂಚಿ ಎನ್.ಎಸ್.ಗುರುಲಿಂಗಮ್ಮ, ಉಪಾಧ್ಯಕ್ಷೆ, ಚಿಕ್ಕತಾಯಮ್ಮ, ನಾಗಮ್ಮ, ಶಹನಾಜ್ ಬೇಗಂ, ರಾಣಿ, ನಂದಿನಿ, ಪುಷ್ಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.