ADVERTISEMENT

ಕನಕಗಿರಿ: ಅತಿಶಯ ಮಹೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 16:25 IST
Last Updated 5 ಮೇ 2022, 16:25 IST
ಚಾಮರಾಜನಗರ ತಾಲ್ಲೂಕಿನ ಕನಕಗಿರಿ ಕ್ಷೇತ್ರದಲ್ಲಿ ಅತಿಶಯ ಮಹೋತ್ಸವದ ಕೊನೆ ದಿನವಾದ ಗುರುವಾರ ಮುನಿಶ್ರೀಗಳಾದ 108 ಅಮೋಘಕೀರ್ತಿ ಹಾಗೂ ಅಮರಕೀರ್ತಿ ಮಹಾರಾಜರು, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಬಾಹುಬಲಿ ಸ್ವಾಮಿಗೆ ಅಭಿಷೇಕ ನೆರವೇರಿಸುವುದರ ಮೂಲಕ ಮಹಾಮಸ್ತಕಾಭಿಷೇಕಕ್ಕೆ ಮಂಗಳ ಹಾಡಿದರು
ಚಾಮರಾಜನಗರ ತಾಲ್ಲೂಕಿನ ಕನಕಗಿರಿ ಕ್ಷೇತ್ರದಲ್ಲಿ ಅತಿಶಯ ಮಹೋತ್ಸವದ ಕೊನೆ ದಿನವಾದ ಗುರುವಾರ ಮುನಿಶ್ರೀಗಳಾದ 108 ಅಮೋಘಕೀರ್ತಿ ಹಾಗೂ ಅಮರಕೀರ್ತಿ ಮಹಾರಾಜರು, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಬಾಹುಬಲಿ ಸ್ವಾಮಿಗೆ ಅಭಿಷೇಕ ನೆರವೇರಿಸುವುದರ ಮೂಲಕ ಮಹಾಮಸ್ತಕಾಭಿಷೇಕಕ್ಕೆ ಮಂಗಳ ಹಾಡಿದರು   

ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಪ್ರಸಿದ್ಧ ಜೈನಕ್ಷೇತ್ರ ಕನಕಗಿರಿಯಲ್ಲಿ ಒಂಬತ್ತು ದಿನಗಳಿಂದ ನಡೆಯುತ್ತಿದ್ದ ಅತಿಶಯ ಮಹೋತ್ಸವಕ್ಕೆ ಗುರುವಾರ ತೆರೆ ಬಿದ್ದಿದೆ.

ಬೆಟ್ಟದಲ್ಲಿ ಪ್ರತಿಷ್ಠಾಪಿಸಲಾಗಿರುವ ಭಗವಾನ್‌ ಬಾಹುಬಲಿಗೆ ಮುನಿಶ್ರೀಗಳಾದ 108 ಅಮೋಘಕೀರ್ತಿ ಮಹಾರಾಜರು, 108 ಅಮರಕೀರ್ತಿ ಮಹಾರಾಜರು ಹಾಗೂ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಹಾಭಿಷೇಕ ನಡೆಸುವುದರ ಮೂಲಕ ಮಹೋತ್ಸವಕ್ಕೆ ತೆರೆ ಎಳೆದರು.

ಬೆಳಿಗ್ಗೆ ಮೂಲಸ್ವಾಮಿಗೆ ನಿತ್ಯಪೂಜೆ, ಪಂಚಾಮೃತ ಅಭಿಷೇಕ ನಡೆಯಿತು. ಬಳಿಕ ಕೇತು ಮಹಾಗ್ರಹಾಆದಿ ನವಗ್ರಹ ಶಾಂತಿ ಹವನ ನೆರವೇರಿತು. ಬೆಳಿಗ್ಗೆ 10.30ರಿಂದ ಮಂಡ್ಯ ಜೈನ ಸಮಾಜದ ವತಿಯಿಂದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ನಡೆಯಿತು.

ADVERTISEMENT

108 ಮಂಗಲ ಕಳಶಗಳ ಅಭಿಷೇಕ, ಎಳನೀರು, ಕಬ್ಬಿನಹಾಲು, ಕಷಾಯ, ಕಲ್ಪಚೂರ್ಣ, ಶ್ರೀಗಂಧ, ರಕ್ತಚಂದನ, ಅಷ್ಟಗಂಧ ಸೇರಿದಂತೆ ವಿವಿಧ ದ್ರವ್ಯಗಳಿಂದ ಬಾಹುಬಲಿಗೆ ಅಭಿಷೇಕ ನೆರವೇರಿಸಲಾಯಿತು.

ಕೊನೆಯದಾಗಿ ಇಬ್ಬರೂ ಮುನಿಗಳು ಅಭಿಷೇಕ ನೆರವೇರಿಸಿದರು. ಬಳಿಕಬಾಹುಬಲಿಗೆ ಪೂರ್ಣಕುಂಭ ಮಹಾ ಶಾಂತಿ ದಾರ ಹಾಕಿ, ಮಹಾಮಸ್ತಕಾಭಿಷೇಕಕ್ಕೆ ಕೊನೆ ಹಾಡಲಾಯಿತು.

ಮುನಿಗಳ ಹುಟ್ಟುಹಬ್ಬ: ಅತಿಶಯ ಮಹೋತ್ಸವ ಆರಂಭಕ್ಕೂ ಮುನ್ನ ಕ್ಷೇತ್ರಕ್ಕೆ ಬಂದು ವಾಸ್ತವ್ಯ ಹೂಡಿರುವ ಇಬ್ಬರು ಮುನಿಗಳಲ್ಲಿ 108 ಅಮರಕೀರ್ತಿ ಮಹಾರಾಜರ ಹುಟ್ಟುಹಬ್ಬ ಗುರುವಾರ ಇದ್ದುದರಿಂದ ಪಾರ್ಶ್ವನಾಥ ತೀರ್ಥಂಕರ ಬಸದಿಯಲ್ಲಿ ಭಕ್ತಾಂಬರ ಆರಾಧನೆಯನ್ನು ಸಮ್ಮತಿ ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.

ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪ್ರವಚನ, ಪಾದಪೂಜೆ ನಡೆಯಿತು. ಮುನಿಗಳ ಪೂರ್ವಾಶ್ರಮದ ತಂದೆ–ತಾಯಿಗಳು ಉಪಸ್ಥಿತರಿದ್ದರು. ಪಾದ ಪೂಜೆಯನ್ನೂ ಮಾಡಿದರು.

ಸ್ವಾಮೀಜಿ ಕೃತಜ್ಞತೆ: ಒಂಬತ್ತು ದಿನ ನಡೆದ ಅತಿಶಯ ಮಹೋತ್ಸವದ ಯಶಸ್ಸಿಗೆ ದುಡಿದಿರುವ ಎಲ್ಲರಿಗೂ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.