ADVERTISEMENT

ಬಂಡಿಪುರ ಅರಣ್ಯ: ಹಸಿರುಸುಂಕ ವಸೂಲಿಗೆ ಫಾಸ್ಟ್‌ಟ್ಯಾಗ್

ಪ್ರಾಯೋಗಿಕ ವ್ಯವಸ್ಥೆ ಯಶಸ್ವಿ: ಶೀಘ್ರ ಅನುಷ್ಠಾನ: ಡಿಸಿಎಫ್ ಪ್ರಭಾಕರನ್

ಮಲ್ಲೇಶ ಎಂ.
Published 13 ಡಿಸೆಂಬರ್ 2024, 5:34 IST
Last Updated 13 ಡಿಸೆಂಬರ್ 2024, 5:34 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಫಾಸ್ಟ್‌ಟ್ಯಾಗ್ ಕೇಂದ್ರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಫಾಸ್ಟ್‌ಟ್ಯಾಗ್ ಕೇಂದ್ರ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಮೂಲಕ ಸಾರ್ವಜನಿಕರ ವಾಹನಗಳಿಂದ ಹಸಿರು ಸುಂಕ ವಸೂಲಾತಿಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರ ವ್ಯಾಪ್ತಿಗೊಳಪಡುವ ಮೇಲುಕಾಮನಹಳ್ಳಿ, ಕೆಕ್ಕನಹಳ್ಳ ಮತ್ತು ಮದ್ದೂರಿನ ಚೆಕ್‌ಪೋಸ್ಟ್‌ ಬಳಿ ಕಳೆದ 20 ದಿನಗಳಿಂದ ಪ್ರಾಯೋಗಿಕವಾಗಿ ಫಾಸ್ಟ್‌ಟ್ಯಾಗ್ ಮೂಲಕ ಸುಂಕ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು ವ್ಯವಸ್ಥೆಯ ಮೇಲೆ ನಿಗಾ ಇರಿಸಲಾಗಿದೆ.

ಸುಂಕ ವಸೂಲಾತಿ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದೆಯೇ ಎಂಬ ಪರೀಕ್ಷೆ ನಡೆಸಲಾಗಿದ್ದು ಯಾವುದೇ ಸಮಸ್ಯೆ ಕಂಡುಬರದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಅನುಷ್ಠಾನಕ್ಕೆ ತರಲು ಅರಣ್ಯ ಇಲಾಖೆ ಮುಂದಾಗಿದೆ.

ADVERTISEMENT

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬಂಡೀಪುರ ಸಿಎಫ್ ಕಚೇರಿ ಉದ್ಘಾಟನೆ ಆಗಮಿಸಲಿದ್ದು, ಇದೇ ಸಂದರ್ಭ ಫಾಸ್ಟ್‌ಟ್ಯಾಗ್ ಕೇಂದ್ರಗಳಿಗೂ ಚಾಲನೆ ನೀಡಲಾಗುತ್ತದೆ ಎಂದು ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಪ್ರಭಾಕರನ್ ಮಾಹಿತಿ ನೀಡಿದರು.

ರಜಾ ದಿನಗಳು ಹಾಗೂ ವಾರಾಂತ್ಯದಲ್ಲಿ ಊಟಿ ಹಾಗೂ ಕೇರಳದ ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರವಾಸಿಗರು ಬಂಡೀಪುರದ ಮೇಲೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೆರಳುತ್ತಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಡಿಯಲ್ಲಿ ಹಸಿರು ಸುಂಕ ವಸೂಲಿ ಮಾಡುವಾಗ ವಾಹನಗಳು ಕಿ.ಮೀ.ವರೆಗೆ ಸಾಲುಗಟ್ಟಿ ನಿಲ್ಲುತ್ತಿದ್ದವು.

ಚೆಕ್‌ಪೋಸ್ಟ್‌ನಲ್ಲಿ ಹಸಿರು ಸುಂಕ ಪಾವತಿಸಿ ಹೊರಡಲು ಹೆಚ್ಚು ಸಮಯ ವ್ಯಯವಾಗುತ್ತಿತ್ತು. ಮುಖ್ಯವಾಗಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ವಾಹನಗಳು ಸಾಲುಗಟ್ಟಿ ನಿಲ್ಲುವುದು ಪ್ರಾಣಿಗಳ ಜೀವಕ್ಕೆ ಸಂಚಕಾರವಾಗುವ ಅಪಾಯವೂ ಇತ್ತು. ಕೆಲವು ಪ್ರಯಾಣಿಕರು ವಾಹನಗಳಿಂದ ಕೆಳಗಿಳಿದು ಪ್ರಾಣಿಗಳ ಫೋಟೊ ತೆಗೆಯುವುದು, ಆಹಾರ ನೀಡುವುದನ್ನು ಮಾಡುತ್ತಿದ್ದರು.

ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸುವ ಮಾದರಿಯಲ್ಲಿಯೇ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲೂ ಸ್ವಯಂಚಾಲಿತವಾಗಿ ಫಾಸ್ಟ್‌ಟ್ಯಾಗ್ ಮೂಲಕ ಹಸಿರು ಸುಂಕ ಸಂಗ್ರಹವಾಗಲಿದೆ. ವಾಹನಗಳ ದಟ್ಟಣೆ ಸಮಸ್ಯೆಯೂ ನೀಗಲಿದೆ.

ಪ್ರವಾಸಿ ವಾಹನಗಳ ದಟ್ಟಣೆಯಿಂದ ಹೊರ ರಾಜ್ಯಗಳಿಗೆ ತುರ್ತಾಗಿ ಹೋಗಬೇಕಾಗಿರುವ ತರಕಾರಿ ಹಾಗೂ ಹಾಲು ಸಾಗಾಟ ವಾಹನಗಳಿಗೆ ತೊಂದರೆಯಾಗುತ್ತಿತ್ತು. ಸ್ಥಳೀಯ ವಾಹನ ಸವಾರಿರಿಗೂ ಅನಾನುಕೂಲವಾಗಿತ್ತು ಎಂದು ಪ್ರಭಾಕರನ್‌ ತಿಳಿಸಿದರು.

ಫಾಸ್ಟ್‌ಟ್ಯಾಗ್ ವ್ಯವಸ್ಥೆ ಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಸ್ಥಳೀಯ ವಾಹನಗಳಿಗೆ ಪರ್ಯಾಯ ಗೇಟ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ವಾರಾಂತ್ಯದಲ್ಲಿ 3 ಸಾವಿರದಿಂದ 4 ಸಾವಿರ ವಾಹನಗಳು ಸಂಚಾರ ಮಾಡುತ್ತಿದ್ದರಿಂದ ದಟ್ಟಣೆ ಎದುರಾಗುತ್ತಿತ್ತು. ಫಾಸ್ಟ್‌ಟ್ಯಾಗ್ ವ್ಯವಸ್ಥೆಯಿಂದ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದೆ
ಪ್ರಭಾಕರನ್ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್

‘ಸ್ಥಳೀಯರಿಗೆ ವಿನಾಯಿತಿ ಬೇಕು’

ಹಸಿರು ಸುಂಕ ವಸೂಲಿಗೆ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಆರಂಭಿಸುತ್ತಿರುವುದಕ್ಕೆ ಸ್ವಾಗತವಿದೆ. ಆದರೆ ಸ್ಥಳೀಯ ವಾಹನಗಳಿಗೆ ಸುಂಕ ವಿಧಿಸದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಫಾಸ್ಟ್‌ಟ್ಯಾಗ್‌ ಸ್ಕ್ಯಾನರ್ ಅಡಿ ಹೋಗುವ ಎಲ್ಲ ವಾಹನಗಳ ಮಾಲೀಕರ ಖಾತೆಯಿಂದ ಹಣ ಕಟ್ ಆಗುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅನುಷ್ಠಾನಕ್ಕೆ ತರಬೇಕು ಎಂದು ಮಂಗಲ ಗ್ರಾಮದ ಮುಖಂಡ ಉಮೇಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.