ADVERTISEMENT

ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

ಬಾಲಚಂದ್ರ ಎಚ್.
Published 2 ಫೆಬ್ರುವರಿ 2026, 1:39 IST
Last Updated 2 ಫೆಬ್ರುವರಿ 2026, 1:39 IST
ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಜಲಮೂಲ (ಸಂಗ್ರಹ ಚಿತ್ರ)
ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಜಲಮೂಲ (ಸಂಗ್ರಹ ಚಿತ್ರ)   

ಚಾಮರಾಜನಗರ: ಕೇರಳ ಹಾಗೂ ಕರ್ನಾಟಕ ನಡುವೆ ಹಾದು ಹೋಗಿರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪರ್ಯಾಯ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂಬಂಧ ಕಾರ್ಯಸಾಧ್ಯತಾ ವರದಿ ತಯಾರಿಸಲು ಕೇಂದ್ರ ಹೆದ್ದಾರಿ ಸಚಿವಾಲಯ ತಜ್ಞರ ಸಮಿತಿ ನೇಮಿಸಲು ಮುಂದಾಗಿರುವ ಕ್ರಮಕ್ಕೆ ಪರಿಸರವಾದಿಗಳು, ವನ್ಯಜೀವಿ ತಜ್ಞರು, ರೈತರು ಹಾಗೂ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಕೇರಳದ ಉದ್ಯಮಿಗಳ ಲಾಭಿಗೆ ಮಣಿದು ಪರಿಸರ ಸೂಕ್ಷ್ಮ ವಲಯವಾದ ಬಂಡೀಪುರ ಅರಣ್ಯದೊಳಗೆ ಸುರಂಗ ಮಾರ್ಗ ನಿರ್ಮಿಸಲು ಚಿಂತನೆ ನಡೆಸಿರುವುದು ಅತ್ಯಂತ ಅಪಾಯಕಾರಿ ಹಾಗೂ ವಿನಾಶಕಾರಿ ನಿಲುವು ಎಂಬ ಆತಂಕ ವ್ಯಕ್ತವಾಗಿದೆ.

ಕೇರಳ ಹಾಗೂ ಕರ್ನಾಟಕದ ನಡುವೆ ಕೇವಲ ರಾತ್ರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು, ಉಭಯ ರಾಜ್ಯಗಳ ನಡುವೆ ರಸ್ತೆಯ ಅಂತರ ತಗ್ಗಿಸಲು ಅಮೂಲ್ಯ ಜೀವವೈವಿಧ್ಯವನ್ನು ಬಲಿಕೊಟ್ಟು ವನ್ಯಜೀವಿ ಹಾಗೂ ಅರಣ್ಯ ಸಂಪತ್ತು ನಾಶಮಾಡುವ ಯೋಜನೆ ಅವೈಜ್ಞಾನಿಕ. ಕೇಂದ್ರ ಸರ್ಕಾರ ಸುರಂಗ ಮಾರ್ಗ ಯೋಜನೆ ಜಾರಿಗೆ ಮುಂದಾದರೆ ಜನಾಂದೋಲನ ಶುರುವಾಗಲಿದೆ ಎಂದು ಪರಿಸರವಾದಿಗಳು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಕೇರಳದ ಶತ ಪ್ರಯತ್ನ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಾದ 67 ಹಾಗೂ 212ರಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಿಂದಿನಿಂದಲೂ ಕೇರಳ ಸರ್ಕಾರ ಲಾಭಿ ನಡೆಸಿಕೊಂಡು ಬಂದಿದೆ. ಆದರೆ, ಇದುವರೆಗೂ ಯಶಸ್ಸು ಸಿಕ್ಕಿಲ್ಲ.

ಇಲ್ಲಿಯವರೆಗೂ ಆಗಿದ್ದೇನು ?

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿಯ ಹೊತ್ತು ವಾಹನಗಳ ಸಂಚಾರದಿಂದ ಪ್ರಾಣಿಗಳ ಜೀವಹಾನಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಚಾಮರಾಜನಗರ ಜಿಲ್ಲಾಡಳಿತ 2009ರಲ್ಲಿ ಅರಣ್ಯದೊಳಗೆ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ಜಿಲ್ಲಾಡಳಿತದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು 2010ರ ಮಾರ್ಚ್‌ನಲ್ಲಿ ವಜಾಗೊಳಿಸಿದ ರಾಜ್ಯ ಹೈಕೋರ್ಟ್‌ ಬಂಡೀಪುರ ಅರಣ್ಯದೊಳಗೆ ರಾತ್ರಿ ಹೊತ್ತು ವಾಹನಗಳ ಸಂಚಾರ ನಿರ್ಬಂಧಿಸಿರುವ ಆದೇಶ ಸರಿ ಇದೆ ಎಂದು ಅಭಿಪ್ರಾಯಪಟ್ಟಿತ್ತು. ಆದರೆ, ಕೇರಳ ಸರ್ಕಾರ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು.

ಗುಂಡ್ಲುಪೇಟೆಯಿಂದ ಸುಲ್ತಾನ್ ಬತ್ತೇರಿಗೆ ಹಾಗೂ ಗುಂಡ್ಲುಪೇಟೆಯಿಂದ ಊಟಿಗೆ ಸಂಪರ್ಕ ಕಲ್ಪಿಸುವ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸುಪ್ರಿಂಕೋರ್ಟ್‌ ಮುಂದೆ ವಾದ ಮಂಡಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸಾರಿಗೆ ಸಚಿವಾಲಯದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು, ಕರ್ನಾಟಕ, ತಮಿಳುನಾಡು, ಕೇರಳದ ಸಾರಿಗೆ ಇಲಾಖೆಗಳ ಅಧಿಕಾರಿಗಳನ್ನು ಹೊಂದಿದ್ದ ಸಮಿತಿ ರಚಿಸುವಂತೆ ನಿರ್ದೇಶನ ನೀಡಿತ್ತು.

ಅದರಂತೆ ವಸ್ತುಸ್ಥಿತಿಯನ್ನು ಅಧ್ಯಯನ ಮಾಡಿದ ಸಮಿತಿಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸರಿಯಾಗಿದ್ದು ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಹುಲಿ, ಆನೆ, ಕಾಡೆಮ್ಮೆ, ಕಾಡುಕೋಣ ಮತ್ತಿತರ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ದೃಷ್ಟಿಯಿಂದ ರಾತ್ರಿ ವಾಹನಗಳ ಸಂಚಾರ ನಿರ್ಬಂಧ ನಿರ್ಧಾರ ಸರಿಯಾಗಿದೆ ಎಂದು ಅಧ್ಯಯನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು.

ಬಂಡೀಪುರಕ್ಕೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿ– 90ರ ಮೂಲಕವೂ ಹುಣಸೂರು, ಗೊಂಡಿಕೊಪ್ಪ, ಕುಟ್ಟ ಮತ್ತು ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಮಾರ್ಗವನ್ನು ಕೇರಳ ಬಳಸಬಹುದಾಗಿದೆ. ಈಗಾಗಲೇ ಕರ್ನಾಟಕ ಮತ್ತು ಕೇರಳದ ಸರಕು ಸಾಗಣೆ ವಾಹನಗಳು ಹಾಗೂ ಸಾರ್ವಜನಿಕ ವಾಹನಗಳೂ ಇದೇ ಮಾರ್ಗವನ್ನು ರಾತ್ರಿ ಸಂಚಾರಕ್ಕೆ ಬಳಕೆ ಮಾಡುತ್ತಿರುವ ವಿಚಾರವನ್ನು ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹುಲಿಗಳ ಆವಾಸಸ್ಥಾನವಾಗಿದ್ದು, ಅರಣ್ಯದೊಳಗೆ ರಾತ್ರಿ ವಾಹನಗಳ ನಿರ್ಬಂಧವಾದ ಬಳಿಕೆ ಪ್ರಾಣಿಗಳ ಸಾವಿನ ಸಂಖ್ಯೆ ಇಳಿಕೆಯಾಗಿದೆ. ನಿರ್ಬಂಧಿತ ಅವಧಿಯಲ್ಲೂ ಸರ್ಕಾರದ ಸಾರಿಗೆ ಸಂಸ್ಥೆಗಳ ಕೆಲವು ಬಸ್‌ಗಳ ಸಂಚಾರಕ್ಕೆ ಅವಕಾಶ ಇದೆ. ಕೇರಳ ಸರ್ಕಾರದ ಮನವಿ ಮೇರೆಗೆ 30 ಕಿ.ಮೀ. ಹೆಚ್ಚುವರಿ ಅಂತರದ ಪರ್ಯಾಯ ಮಾರ್ಗವನ್ನು ₹ 75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು 9 ವರ್ಷಗಳಿಂದ ವಾಹನಗಳು ಚಂಚಾರ ಮಾಡುತ್ತಿರುವ ವಿಚಾರವನ್ನೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿತ್ತು.

ಸಮಿತಿಯ ವರದಿಯನ್ನು ಪುರಸ್ಕರಿಸಿದ ಸುಪ್ರಿಂಕೋರ್ಟ್‌ 2019, ಆಗಸ್ಟ್‌ 7ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ನಿಷೇಧ ಮುಂದುವರಿಸುವಂತೆ ಆದೇಶ ನೀಡಿತ್ತು. 

ಬಂಡೀಪುರ ಅರಣ್ಯದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ

ಇದೀಗ ಮತ್ತೆ ಕೇರಳ ಪರ್ಯಾಯ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಆರಂಭಿಸಿದೆ. ವಯನಾಡು ಕ್ಷೇತ್ರದ ಸಂಸದೆ ಪ್ರಿಯಾಂಕಾ ವಾದ್ರಾ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಮಾಡಿ ಕೇರಳ ಹಾಗೂ ಕರ್ನಾಟಕ ಮಧ್ಯೆ ಸುರಂಗ ಮಾರ್ಗ ನಿರ್ಮಾಣ ಕುರಿತು ಮನವಿ ಮಾಡಿದ ಬೆನ್ನಲ್ಲೇ ಕಾರ್ಯಸಾಧ್ಯತಾ ವರದಿ ತಯಾರಿಕೆಗೆ ಮುಂದಾಗಿರುವುದು ಆತಂಕಕಾರಿ ವಿಚಾರ ಎಂದು ಪರಿಸರವಾದಿ ನಾಗಾರ್ಜುನ ಕುಮಾರ್ ತಿಳಿಸಿದ್ದಾರೆ.

ಬಂಡೀಪುರ ಅರಣ್ಯದೊಳಗೆ ಸುರಂಗ ಮಾರ್ಗ ನಿರ್ಮಾಣ ಮಾಡುವ ಕುರಿತು ಕಾರ್ಯಸಾಧ್ಯತಾ ವರದಿ ಸಲ್ಲಿಸಲು ತಜ್ಞರ ಸಮಿತಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅಧಿಕೃತ ಆದೇಶ ಮಾಡಿರುವುದು ಗಮನಕ್ಕೆ ಬಂದಿಲ್ಲ. ಕಚೇರಿಗೆ ಯಾವುದೇ ಮಾಹಿತಿ ಬಂದಿಲ್ಲ
ಎಸ್‌.ಪ್ರಭಾಕರನ್‌ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುವ ಭಾಗವಾಗಿ ಕೇರಳ ಸರ್ಕಾರ ಬಂಡೀಪುರ ಅರಣ್ಯದೊಳಗೆ ಸುರಂಗ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಈಗಾಗಲೇ ಕರ್ನಾಟಕದಿಂದ ಕರಿಕಲ್ಲು ಮರಳು ಸಹಿತ ನೈಸರ್ಗಿಕ ಸಂಪತ್ತು ಹಗಲಿನಲ್ಲೇ ಕೇರಳಕ್ಕೆ ಸಾಗಾಟವಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳ ಕುಮ್ಮಕ್ಕೂ ಇದೆ. ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಚಾಮರಾಜನಗರ ಜಿಲ್ಲೆಯ ಸಂಪತ್ತು ಲೂಟಿ ಹೊಡೆಯುವುದರಲ್ಲಿ ಸಂಶಯವಿಲ್ಲ.
ಹೊನ್ನೂರು ಪ್ರಕಾಶ್ ರೈತ ಮುಖಂಡ
ಬಂಡೀಪುರ ಅರಣ್ಯದೊಳಗೆ ಸುರಂಗ ಮಾರ್ಗ ನಿರ್ಮಾಣ ಮಾಡಬೇಕು ಎಂದು ಪ್ರಸ್ತಾವ ಮುಂದಿಟ್ಟಿರುವ ಮೂರ್ಖರಿಗೆ ಜೀವವೈವಿಧ್ಯ ಪರಿಸರ ವನ್ಯಜೀವಿ ಹಾಗೂ ಅರಣ್ಯ ಸಂ‍ಪತ್ತಿನ ಮಹತ್ವದ ಬಗ್ಗೆ ಅರಿವಿಲ್ಲ. ಈಗಾಗಲೇ ಪರಿಸರದ ಮೇಲಿನ ದೌರ್ಜನ್ಯದ ಫಲವಾಗಿ ಅತಿವೃಷ್ಟಿ ಅನಾವೃಷ್ಟಿಗಳು ಸಂಭವಿಸುತ್ತಿದ್ದರೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಬೆಳಗಿನ ವಾಹನ ಸಂಚಾರ ಮುಕ್ತವಾಗಿರುವಾಗ ರಾತ್ರಿ ಸಂಚಾರದ ಅಗತ್ಯವೇನಿದೆ. ಸುರಂಗ ಮಾರ್ಗ ನಿರ್ಮಾಣದಿಂದ ಹುಲಿ ಅಭಯಾರಣ್ಯ ನಾಶವಾಗಲಿದೆ ಮಾನವ ಪ್ರಾಣಿ ಸಂಘರ್ಷ ಮಿತಿಮೀರದಲಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಯೋಜನೆ ವಿರೋಧಿಸಬೇಕು. ಈ ಬಗ್ಗೆ ಶೀಘ್ರ ಜನಾಂದೋಲನ ರೂಪಿಸಲಾಗುವುದು.
–ಜೋಸೆಫ್ ಹೂವರ್ ಪರಿಸರವಾದಿ
ಚಾಮರಾಜನಗರ ಜಿಲ್ಲೆ ಮಳೆ ನೆರಳಿನ ಪ್ರದೇಶವಾಗಿರುವುದರಿಂದ ಮಳೆ ಕೊರತೆಯ ಪರಿಣಾಮ ಅಂತರ್ಜಲ ಮಟ್ಟ ಪಾತಾಳಕ್ಕೆ ‌ಕುಸಿದಿದೆ. ಸುರಂಗ ಮಾರ್ಗ ನಿರ್ಮಾಣವಾದರೆ ಭೂಮಿಯೊಳಗಿನ ನೀರಿನ ಹರಿವಿನ ದಿಕ್ಕು ಬದಲಾಗಲಿದೆ ನೀರಿನ ಒರತೆ ಬತ್ತಿಹೋಗಿ ಸಂಪೂರ್ಣ ಬರಪೀಡಿತ ಪ್ರದೇಶವಾಗಲಿದೆ. ಕೃಷಿ ಕ್ಷೇತ್ರ ಸಂಪೂರ್ಣ ನಾಶವಾಗಲಿದೆ. ಜೀವವೈವಿಧ್ಯ ಬಲಿಯಾಗಲಿದ್ದು ಸಾವಿರಾರು ಎಕರೆ ಪರಿಸರ ಸೂಕ್ಷ್ಮ ಪ್ರದೇಶ ನಾಶವಾಗಲಿದೆ. ಈಗಾಗಲೇ ಕೇರಳ ಹಾಗೂ ಕರ್ನಾಟಕದ ಮಧ್ಯೆ 15 ಗಂಟೆ ವಾಹನಗಳ ಸಂಚಾರಕ್ಕೆ ಅವಕಾಶ ಇರುವಾಗ ರಾತ್ರಿ ಹೊತ್ತು ವಾಹನಗಳ ಸಂಚಾರದ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಜಾರಿಗೆ ಮುಂದಾದರೆ ಕಾನೂನು ಹೋರಾಟದ ಜೊತೆಗೆ ಜನಾಂದೋಲನ ರೂಪಿಸಲಾಗುವುದು.
–ನಾಗಾರ್ಜುನ ಕುಮಾರ್ ಪರಿಸರವಾದಿ

ಹಿಂದೆಯೂ ನಡೆದಿತ್ತು

ಪ್ರಯತ್ನ ‌ಬಂಡೀಪುರ ಅಭಯಾರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212ರಲ್ಲಿ ಪ್ರಾಣಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವುದಕ್ಕಾಗಿ ಐದು ಕಡೆ ಎಲೆವೇಟೆಡ್‌ ಕಾರಿಡಾರ್‌ ಅಭಿವೃದ್ಧಿಪಡಿಸಿದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಹುದು ಎಂದು ಹಿಂದೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲಹೆ ನೀಡಿತ್ತು. ಹೆದ್ದಾರಿಯ 34.60 ಕಿ.ಮೀ ಅಂತರದಲ್ಲಿ ಐದು ಕಡೆ ಎತ್ತರದ ರಸ್ತೆ ಅಭಿವೃದ್ಧಿಪಡಿಸಿದಲ್ಲಿ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿ ಉಂಟಾಗುವುದಿಲ್ಲ ಎಂದು ಕೇಂದ್ರದ ರಸ್ತೆ ಸಾರಿಗೆ ಸಚಿವಾಲಯ ತಿಳಿಸಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿದ್ದರಿಂದ ಕೇರಳ ಜನತೆಗೆ ಎದುರಾಗಿರುವ ಸಮಸ್ಯೆಗಳ ನಿವಾರಣೆ ಕುರಿತು ಅಂದಿನ ವಯನಾಡು ಸಂಸದ ರಾಹುಲ್‌ ಗಾಂಧಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜೊತೆಗೆ ಚರ್ಚೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.