ಗುಂಡ್ಲುಪೇಟೆ: ಕಾಡಿನಿಂದ ದಾರಿ ತಪ್ಪಿ ಗ್ರಾಮೀಣ ಪ್ರದೇಶಕ್ಕೆ ಬಂದಿರುವ ಗಂಡಾನೆಯೊಂದು ಶಿವಪುರ ಹಾಗೂ ಹಂಗಳ ಗ್ರಾಮದ ಇಬ್ಬರು ವ್ಯಕ್ತಿಗಳು ಮತ್ತು ಮೂರು ಹಸುಗಳ ಮೇಲೆ ಮಂಗಳವಾರ ದಾಳಿ ಮಾಡಿದೆ.
ಶಿವಪುರ ಗ್ರಾಮದ ಸಿದ್ದಯ್ಯ (65) ಹಾಗೂ ಹಂಗಳದ ಯುವಕ ಸ್ವಾಮಿ (30) ಗಾಯಗೊಂಡವರು. ಆನೆ ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಫೋಟೊ ತೆಗೆಯಲು ಹೋಗಿ ಯುವಕ ಆನೆಯ ದಾಳಿಗೆ ಸಿಲುಕಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಬ್ಬರಿಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿದೆ.
ಆಗಿದ್ದೇನು?: ತಾಲ್ಲೂಕಿನ ಶಿವಪುರ ಬಳಿಯ ಕಲ್ಕಟ್ಟ ಅಣೆಕಟ್ಟೆ ಬಳಿ ಆನೆ ಕಾಣಿಸಿಕೊಂಡ ತಕ್ಷಣ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಆನೆಯನ್ನು ಓಡಿಸಲು ಕಾರ್ಯಾಚರಣೆ ಆರಂಭಿಸಿದರು.
ಜಮೀನಿನ ಮೂಲಕ ಓಡಿಸಿಕೊಂಡು ಹೋಗುತ್ತಿದ್ದಾಗ ಆನೆಯು ಶಿವಪುರ ಗ್ರಾಮದ ಎಲ್ಲೆಯ ಜಮೀನೊಂದಕ್ಕೆ ನುಗ್ಗಿತು. ಅಲ್ಲಿ ಮೇಯುತ್ತಿದ್ದ ಹಸುವೊಂದನ್ನು ತಿವಿದು ಗಾಯಗೊಳಿಸಿತು. ಬಳಿಕ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ಸಿದ್ದಯ್ಯ ಅವರ ಮೇಲೆ ದಾಳಿ ಮಾಡಿದೆ.
ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಆನೆ ಅಲ್ಲಿಂದ ಓಡಿ ಹೋಯಿತು. ತೀವ್ರವಾಗಿ ಗಾಯಗೊಂಡಿದ್ದ ಸಿದ್ದಯ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾರ್ವಜನಿಕರ ಚೀರಾಟ ಹೆಚ್ಚಾಗಿದ್ದರಿಂದ ಬೆದರಿದ ಆನೆ, ಬಾಳೆ ಮತ್ತು ಕಬ್ಬಿನ ಜಮೀನಿಗೆ ಹೋಗಿ ಸೇರಿಕೊಂಡಿತು. ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಲು ಆರಂಭಿಸುತ್ತಿದ್ದಂತೆಯೇಹಂಗಳಪುರದ ಮೂಲಕ ಹಂಗಳ ಗ್ರಾಮದ ದೊಡ್ಡಕೆರೆ ಬಳಿ ಬಂತು. ಸುದ್ದಿ ಕೇಳಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಗದ್ದಲ ಮಾಡುತ್ತಿದ್ದರಿಂದ ಆನೆ ಕಾಡಿನತ್ತ ಸಾಗದೆ ಅಲ್ಲೇ ನಿಂತಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.
ಆ ವೇಳೆಗಾಗಲೇ ಆನೆ ನೀರು ಕುಡಿಯುವುದಕ್ಕಾಗಿ ಕೆರೆಗೆ ಇಳಿಯಿತು. ಈ ಸಂದರ್ಭದಲ್ಲಿ ಜನರು ಫೋಟೊ ತೆಗೆಯಲು ಮುಗಿಬಿದ್ದರು. ಜನರ ಕೂಗಾಟದಿಂದ ಕೆರಳಿದ ಸಲಗ ಜನರತ್ತ ಮುನ್ನುಗ್ಗಿ ಬಂತು. ಭಯದಿಂದ ಜನರು ಓಡುವ ಸಂದರ್ಭದಲ್ಲಿ ಸ್ವಾಮಿ ಎಂಬ ಯುವಕ ಜಾರಿ ಬಿದ್ದು ಆನೆಯ ಕಾಲಿಗೆ ಸಿಲುಕಿದ. ಅದೃಷ್ಟವಶಾತ್ ಅದು ಆತನನ್ನು ತುಳಿಯಲಿಲ್ಲ.
ಅಲ್ಲಿಂದ ಆನೆ ಹಂಗಳಪುರ ಗ್ರಾಮದ ಕಡೆಗೆ ಹೋಗುವಾಗ ಹಂಗಳ ಗ್ರಾಮದ ಬಸವೇಶ ಅವರ ಹಸುವಿನ ಮೇಲೂ ದಾಳಿ ಮಾಡಿತು. ಸಂಜೆಯವರೆಗೂ ಅಲ್ಲೇ ಇತ್ತು.
‘ಆನೆಯನ್ನು ಕಾಡಿಗೆ ಓಡಿಸಲು ಯೋಜನೆ ಮಾಡಿದ್ದೆವು. ಆದರೆ, ಜನರು ಗದ್ದಲ ಮಾಡುತ್ತಿದ್ದುದರಿಂದ ಆನೆಗೆ ಗೊಂದಲವಾಯಿತು. ನಿಶಬ್ದವಾಗಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಮಿಳುನಾಡಿನಲ್ಲಿ ಸೆರೆಯಾಗಿದ್ದ ಆನೆ
ರೇಡಿಯೊ ಕಾಲರ್ ಹೊಂದಿದ್ದ ಈ ಆನೆಯನ್ನು ತಮಿಳುನಾಡಿನ ಹೊಸೂರಿನಲ್ಲಿ ಈ ಹಿಂದೆ ಅಲ್ಲಿನ ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅಲ್ಲಿ ಹಲವರನ್ನು ಆನೆಯು ಕೊಂದಿದೆ ಎಂದು ಹೇಳಲಾಗುತ್ತಿದೆ.
ಆನೆಯ ಚಲನವಲನದ ಮೇಲೆ ನಿಗಾ ಇಡುವುದಕ್ಕಾಗಿ ಅದಕ್ಕೆ ರೇಡಿಯೊ ಕಾಲರ್ ಅಳವಡಿಸಿ ಮಧುಮಲೆ ಸಂರಕ್ಷಿತಾರಣ್ಯದಲ್ಲಿ ಬಿಡಲಾಗಿತ್ತು.
ಒಂದು ತಿಂಗಳಿನಿಂದ ಈ ಆನೆ ಮೇಲುಕಾಮನಹಳ್ಳಿ ಹಾಗೂ ಬಂಡೀಪುರದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿತ್ತು. ಮಧುಮಲೆ ಸಂರಕ್ಷಿತಾರಣ್ಯದ ಸಿಬ್ಬಂದಿ ಈ ಆನೆಗಾಗಿ ಹುಡುಕಾಟ ನಡೆಸುತ್ತಿದ್ದರು. ರೇಡಿಯೊ ಕಾಲರ್‌ನಲ್ಲಿ ಅಳವಡಿಸಿದ್ದ ಜಿಪಿಎಸ್ ಸಾಧನವನ್ನು ಆನೆ ಬೀಳಿಸಿದ್ದರಿಂದ ಅದರ ಚಲನವಲನದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ಆನೆಯು ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಂಚಾರ ಮಾಡುವವರಿಗೂ ತೊಂದರೆ ಕೊಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.