
ಸಂತೇಮರಹಳ್ಳಿ: ಸಮೀಪದ ಕಾವುದವಾಡಿ ಗ್ರಾಮದಲ್ಲಿ ಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷ ಶಿವರಾತ್ರಿ ಹಬ್ಬದ ಮಾರನೆಯ ದಿವಸ ಜಾತ್ರಾ ಮಹೋತ್ಸವ ನಡೆಯಲಿದ್ದು, ಹಿಂದಿನ ದಿನ ಶಿವರಾತ್ರಿ ಹಬ್ಬದಂದು ದೇವಸ್ಥಾನದ ಪೂಜಾರಿಯೊಂದಿಗೆ ಗ್ರಾಮಸ್ಥರು ಸತ್ತಿಗೆ ಸೂರಿಪಾನಿ, ದೇವಸ್ಥಾನದ ಬಸವನೊಂದಿಗೆ ಮಾಲಂಗಿ ಬಳಿ ಹರಿಯುವ ಕಾವೇರಿ ನದಿಗೆ ಹೋಗಿ ಪೂಜೆ ಸಲ್ಲಿಸುವರು. ಮಾರನೆಯ ದಿನ ಗ್ರಾಮಕ್ಕೆ ಬರುವಾಗ ಕಜ್ಜಿಹುಂಡಿ, ಆಲಹಳ್ಳಿ ಹಾಗೂ ಟಗರಪುರ ಗ್ರಾಮಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಗ್ರಾಮಕ್ಕೆ ಆಗಮಿಸಿ ಮಂಟೇಸ್ವಾಮಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ಬೀರೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸತ್ತಿಗೆ ಸೂರಿಪಾನಿ, ಛತ್ರಿ, ನಂದಿಕಂಬ ಹಾಗೂ ವಾದ್ಯ ಮೇಳಗಳ ಮೂಲಕ ದೇವಸ್ಥಾನದ ಬಸವನನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಹರಕೆ ಹೊತ್ತ ಭಕ್ತರು ದಾರಿಯುದ್ದಕ್ಕೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಲಗಿ ದಾಟಿಸಿಕೊಂಡು ತಮ್ಮ ಹರಕೆ ತೀರಿಸಿದರು.
ಅಕ್ಕಪಕ್ಕದ ತಾಲ್ಲೂಕುಗಳಲ್ಲದೆ ನೆರೆಯ ಜಿಲ್ಲೆಗಳು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವಕ್ಕೆ ಬಂದಿದ್ದು, ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿದು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ಅಂಗವಾಗಿ ತಳಿರು ತೋರಣ ಹಾಗೂ ಧ್ವನಿವರ್ಧಕಗಳನ್ನು ಅಳವಡಿಸಿ ಸಡಗರದಿಂದ ಹಬ್ಬ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.