
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಸ್ ನಿಲ್ದಾಣ ಹಾಗೂ ದಾಸೋಹ ಭವನದ ಸುತ್ತಮುತ್ತ ಹಂದಿ ಮತ್ತು ದನಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಪ್ರವಾಸಿಗರು ಮತ್ತು ಭಕ್ತರಿಂದ ಬಿಳಿಗಿರಿಬೆಟ್ಟ ಗಿಜಿಗುಡುತ್ತದೆ. ವಿಶೇಷ ದಿನಗಳಂದು ಮಹಿಳೆಯರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಮಕ್ಕಳು ಭೇಟಿ ನೀಡುತ್ತಾರೆ. ಆದರೆ, ದೇವಾಲಯದ ಕಮರಿ ಬಳಿ ಹಂದಿಗಳು ದಾಂಗುಡಿ ಇಡುತ್ತವೆ. ಸಾರ್ವಜನಿಕರನ್ನು ಕಾಡುತ್ತವೆ. ತೇರಿನ ಬೀದಿಯಲ್ಲಿ ದನಗಳ ಹಾವಳಿಯೂ ಹೆಚ್ಚಿದ್ದು ಭಕ್ತರ ನಡುವೆ ಸಂಚರಿಸಿ ಭಯ ಮೂಡಿಸುತ್ತವೆ.
‘ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲುವುದು ಹಾಗೂ ಭಕ್ತರು ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಅವು ಜನ ಸಮೂಹದ ನಡುವೆ ಸುತ್ತುತ್ತವೆ. ವಿದ್ಯಾರ್ಥಿಗಳು ಹಾಗೂ ವೃದ್ಧರು ಇವುಗಳ ಕಾಟದಿಂದ ಸಮಸ್ಯೆ ಎದುರಿಸಬೇಕಿದೆ. ಹಸಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಪೊಟ್ಟಣಗಳನ್ನು ಹುಡುಕಿಕೊಂಡು ಹೋಗುವ ಹಂದಿಗಳು ಒಮ್ಮೊಮ್ಮೆ ಜನರ ನಡುವೆ ನುಗ್ಗಿ ಬರುತ್ತವೆ. ಹಾಗಾಗಿ, ಇವುಗಳನ್ನು ನಿಯಂತ್ರಿಸಲು ಸಂಬಂಧಪಟ್ಟವರು ಆಸ್ಥೆ ವಹಿಸಬೇಕು’ ಎಂದು ದೂರುತ್ತಾರೆ ಮದ್ದೂರು ಮಹೇಶ್.
ದೇವಾಲಯದ ಸುತ್ತಲೂ ಮಂಗಗಳ ಹಾವಳಿ ಮಿತಿ ಮೀರಿದೆ. ಭಕ್ತರ ವಸ್ತುಗಳನ್ನು ಸೆಳೆದುಕೊಂಡು ಹೋಗುತ್ತವೆ. ಸಾಮಾನ್ಯವಾಗಿ ಕಾಡಿನಲ್ಲಿ ಜೀವಿಸುವ ಸಿಂಗಳೀಕ ಜನ ವಸತಿಯಿಂದ ದೂರ ಇರುತ್ತವೆ. ಕಾಡಿನ ಹಣ್ಣುಗಳನ್ನು ಸೇವಿಸುತ್ತವೆ. ಆದರೆ, ಈಚಿನ ವರ್ಷಗಳಲ್ಲಿ ಬೆಟ್ಟದ ಹೊರ ಭಾಗಗಳಿಂದ ಕೋತಿಗಳನ್ನು ಹಿಡಿದು ಬೆಟ್ಟದ ಸುತ್ತಮುತ್ತ ಬಿಡುವವರ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಸ್ಥಳೀಯರು.
‘ಈ ಬಗ್ಗೆ ಶೀಘ್ರದಲ್ಲಿಯೇ ಸಭೆ ಕರೆದು ಹಂದಿ ಮತ್ತು ದನಗಳ ಸಮಸ್ಯೆ ನಿವಾರಿಸುವ ದಿಸೆಯಲ್ಲಿ ಕ್ರಮ ವಹಿಸಲಾಗುವುದು, ದಾಸೋಹದ ಸುತ್ತಮುತ್ತ ಹಂದಿ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು’ ಎಂದು ದೇವಾಲಯ ಆಡಳಿತಾಧಿಕಾರಿ ಎನ್.ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.