ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಇದೇ 10ರಂದು ಜರುಗುವ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ದೊಡ್ಡ ತೇರು ಅಲಂಕರಿಸುವ ಸಾಂಪ್ರದಾಯಿಕ ಪೂಜೆಗೆ ಷಷ್ಠಿ ಶನಿವಾರ ಅಂಕುರಾರ್ಪಣ ದೈವಿಕ ಕಾರ್ಯ ಪೂರೈಸಿ ಚಾಲನೆ ನೀಡಲಾಯಿತು.
ದೇವಾಲಯ ಸಿಬ್ಬಂದಿ ತೇರು ಕಟ್ಟುವ ಕಾಯಕಕ್ಕೆ ಚಾಲನೆ ನೀಡಿದ್ದು, ಜಾತ್ರೆಯ ಪೂರ್ವದ ಉತ್ಸವಗಳು ಸಾಂಗವಾಗಿ ನಡೆಯುತ್ತಿವೆ. ರಥ ಎತ್ತರಿಸಲು ಹಲಗೆ ಮತ್ತು ಮರದ ಕಂಬಗಳನ್ನು ಜೋಡಿಸುವ ಕೆಲಸದಲ್ಲಿ ಭಕ್ತರು ಬುಧವಾರ ಪಾಲ್ಗೊಂಡರು. ಮುಂದಿನ ಮೂರು ದಿನಗಳಲ್ಲಿ ತೇರು ಅಣಿಗೊಂಡು ಭಕ್ತರಿಗೆ ಮುಕ್ತವಾಗಲಿದೆ. ರಥದ ಬೀದಿ ಸಿಂಗರಿಸುವ ಮತ್ತು ಮಂಟಪದ ಸುತ್ತ ಸುಣ್ಣ ಬಣ್ಣ ಬಳಿಯುವ ಕೆಲಸಗಳು ಜೋರು ಪಡೆದಿದೆ.
ಪ್ರಾಣಿಬಲಿ ನಿಷೇಧ: ಬೆಟ್ಟದ ಸುತ್ತಮುತ್ತ ಪ್ರಾಣಿ ಬಲಿ ಹಾಗೂ ಪ್ಲಾಸ್ಟಿಕ್ ಮಾರಾಟವನ್ನು ನಿಷೇಧಿಸಲಾಗಿದೆ. ಭಕ್ತರು ಜಾತ್ರೆಯ ದಿನ ದ್ವಿಚಕ್ರ ವಾಹನಗಳನ್ನು ಗುಂಬಳ್ಳಿ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿ, ಬಸ್ ಮೂಲಕ ತೆರಳಲು ವ್ಯವಸ್ಥೆ ಮಾಡಲಾಗಿದೆ. ಸುವ್ಯವಸ್ಥಿತ ಸಂಚಾರಕ್ಕೆ 80 ಬಸ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಮೋಹನ್ ಕುಮಾರ್ ಹೇಳಿದರು.
ಸಾವಿರಾರು ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿದ್ದು, ಶುದ್ಧ ನೀರು ಮತ್ತು ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರಸ್ತೆ ದುರಸ್ತಿ, ಬಸ್ ನಿಲ್ದಾಣ ಸಿದ್ಧತೆ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಜೂ.11ರಂದು ನಡೆಯುವ ರಂಗಪ್ಪ ತೆಪ್ಪೋತ್ಸವ ಹಾಗೂ ಜೂ.18 ರಂದು ಗಂಗಾಧರೇಶ್ವರ ತೆಪ್ಪೋತ್ಸವ ಮುಕ್ತಾಯದೊಂದಿಗೆ ಜಾತ್ರೋತ್ಸವದ ಕಾರ್ಯಗಳಿಗೆ ತೆರೆ ಬೀಳಲಿದೆ.
ಮೇ.10ಕ್ಕೆ ಬ್ರಹ್ಮರಥೋತ್ಸವ
ಇದೇ 10ರಂದು ಶನಿವಾರ ಶುಭ ದಿನವಾಗಿದ್ದು ಮುಂಜಾನೆ 4 ಗಂಟೆಯಿಂದ ಪೂಜಾ ಕಾರ್ಯ ಆರಂಭವಾಗಲಿದೆ. ಬೆಳಗಿನ 6 ಗಂಟೆಗೆ ಪ್ರಸ್ಥಾನ ಮಂಟಪೋತ್ಸವ ಬೆಳಿಗ್ಗೆ 11.02 ರಿಂದ 11.15 ಸಮಯದಲ್ಲಿ ಶುಭ ಮುಹೂರ್ತದಲ್ಲಿ ರಂಗಪ್ಪನ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ ಎಂದು ದೇವಾಲಯದ ಪಾರುಪತ್ತೆಗಾರ ರಾಜು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.