ADVERTISEMENT

ಮಲೆ ಮಹದೇಶ್ವರ ಬೆಟ್ಟದ ಅರಣ್ಯದೊಳಗೆ ಫೆ.1, 2ರಂದು ಪಕ್ಷಿ ಗಣತಿ

ಫೆ.1, 2ರಂದು ಗಣತಿ ಕಾರ್ಯ: ಭಾಗವಹಿಸಲಿದ್ದಾರೆ 150 ಮಂದಿ ಪಕ್ಷಿ ತಜ್ಞರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 5:23 IST
Last Updated 24 ಜನವರಿ 2025, 5:23 IST
ಪಕ್ಷಿ ಗಣತಿಯ ಮಾಹಿತಿ
ಪಕ್ಷಿ ಗಣತಿಯ ಮಾಹಿತಿ   

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಗೊಳಪಡುವ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಫೆ.1 ಹಾಗೂ 2 ರಂದು ‘ಪಕ್ಷಿ ಗಣತಿ’ ಕಾರ್ಯಕ್ರಮ ನಡೆಯುತ್ತಿದ್ದು ಪಕ್ಷಿತಜ್ಞರು ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿ ಧಾಮವು ವಿಸ್ಮಯಗಳ ಆಗರವಾಗಿದ್ದು ಜೀವ ವೈವಿಧ್ಯಗಳ ತಾಣವಾಗಿದೆ. ಅಪರೂಪದ ಸಸ್ಯ, ಪ್ರಾಣಿ ಹಾಗೂ ಪಕ್ಷಿ ಸಂಕುಲಗಳಿಗೆ ಆಶ್ರಯ ನೀಡಿದೆ. ಇದೇ ಮೊದಲ ಬಾರಿಗೆ ಮಹದೇಶ್ವರ ಬೆಟ್ಟದ ಅರಣ್ಯದೊಳಗೆ ಪಕ್ಷಿ ಗಣತಿ ನಡೆಯುತ್ತಿದ್ದು ಅಪರೂಪದ ಪಕ್ಷಿ ಪ್ರಬೇಧಗಳನ್ನು ಗುರುತಿಸಿ ದಾಖಲೀಕರಣ ಮಾಡಲು ಸಹಾಯವಾಗಲಿದೆ.

ಅರಣ್ಯ ಇಲಾಖೆ, ಕರ್ಣಾಟಕ ಎಕೋ ಟೂರಿಸಂ, ಜಂಗಲ್ ಲಾಡ್ಜಸ್‌ ಹಾಗೂ ರೆಸಾರ್ಟ್‌ ಸಹಯೋಗದಲ್ಲಿ ಹೊಳೆಮತ್ತಿ ನೇಚರ್ ಫೌಂಡೇಷನ್‌ ನೆರವಿನೊಂದಿಗೆ ಪಕ್ಷಿ ಗಣತಿ ನಡೆಯುತ್ತಿದೆ. ವೆಬ್‌ಸೈಟ್‌ https://aranya.gov.in/ ಮೂಲಕ ಹಾಗೂ ಕ್ಯೂಆರ್ ಕೋಡ್ ಸ್ಕ್ಯಾನ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ADVERTISEMENT

ಇದುವರೆಗೂ ರಾಜ್ಯದ ಎಲ್ಲ ಭಾಗಗಳಿಂದ 500ಕ್ಕೂ ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಅರಣ್ಯದೊಳಗೆ ವಾಸ್ತವ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ 150 ಮಂದಿಗೆ ಮಾತ್ರ ಗಣತಿ ಕಾರ್ಯದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ನಡೆಯಲಿದೆ ಗಣತಿ:

ಫೆ.1 ಹಾಗೂ 2ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4 ರಿಂದ 6ರವರೆಗೆ ಎಂಎಂ ಹಿಲ್ಸ್ ಅರಣ್ಯದೊಳಗೆ ಪಕ್ಷಿ ಗಣತಿ ನಡೆಯಲಿದ್ದು ನೋದಾಯಿಸಿಕೊಂಡಿರುವ 150 ಮಂದಿ ಭಾಗವಹಿಸಲಿದ್ದಾರೆ. ಎರಡೂ ದಿನ ಕಾಡಿನೊಳಗೆ 5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಿ ಕಣ್ಣಿಗೆ ಬೀಳುವ ಪಕ್ಷಿ ಪ್ರಬೇಧಗಳ ಸಂಪೂರ್ಣ ವಿವರವನ್ನು ಫೋಟೊ ಸಹಿತ ದಾಖಲಿಸಿಕೊಳ್ಳಲಿದ್ದಾರೆ.

ದಾಖಲೀಖರಣ ಕಾರ್ಯಕ್ಕೆ ಅರಣ್ಯ ಇಲಾಖೆಯಿಂದ ಪ್ರತಿಯೊಬ್ಬರಿಗೂ ಚೆಕ್‌ಲಿಸ್ಟ್ ನೀಡಲಾಗುತ್ತಿದ್ದು ಅದರಲ್ಲಿ ವೀಕ್ಷಣೆ ಮಾಡಿರುವ ಪಕ್ಷಿಗಳ ವಿವರ ದಾಖಲಿಸಲು ಸೂಚಿಸಲಾಗಿದೆ. ಎರಡು ದಿನಗಳ ಬಳಿಕ ಪ್ರತಿಯೊಬ್ಬರಿಂದಲೂ ಚೆಕ್‌ಲಿಸ್ಟ್ ಪಡೆದುಕೊಳ್ಳಲಾಗುವುದು. ಇದರಿಂದ ಮಲೆ ಮಹದೇಶ್ವರ ಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿರುವ ಪಕ್ಷಿ ಪ್ರಬೇಧಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿ ದಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸಂತೋಷ್ ಕುಮಾರ್ ಮಾಹಿತಿ ನೀಡಿದರು.

ಪಕ್ಷಿ ಗಣತಿಯಲ್ಲಿ ಭಾಗವಹಿಸುವವರಿಗೆ ಅರಣ್ಯದೊಳಗಿರುವ 50 ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಹಾಗೂ ಪ್ರವಾಸಿ ಮಂದಿರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ನೀಡಲಾಗಿದೆ. ಗಣತಿ ವೇಳೆ ಭದ್ರತೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವಾಚರ್‌ಗಳನ್ನು ನಿಯೋಜಿಸಲಾಗಿದೆ.

ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಜೊತೆಗೆ ಪಕ್ಷಿಗಳ ಅತ್ಯುತ್ತಮ ಛಾಯಾಚಿತ್ರ ಸೆರೆಹಿಡಿದವರಿಗೆ ಹಾಗೂ ಅತಿ ಹೆಚ್ಚು ಪಕ್ಷಿ ಪ್ರಬೇಧಗಳನ್ನು ಗುರುತಿಸುವವರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಲೆ ಮಹದೇಶ್ವರ ವನ್ಯಧಾಮ

949 ಚದರ ಕಿ.ಮೀ ವಿಸ್ತಾರವಾದ ಅರಣ್ಯ ಪ್ರದೇಶವನ್ನು ಹೊಂದಿದ್ದು ಪಕ್ಷಿ ಗಣತಿಯಿಂದ ವಿದೇಶಗಳಿಂದ ಕಾಡಿಗೆ ವಲಸೆ ಹಕ್ಕಿಗಳು ಬರುತ್ತಿವೆಯೇ ಎಷ್ಟು ಪ್ರಬೇಧಗಳ ಪಕ್ಷಿಗಳು ಅರಣ್ಯದೊಳಗಿವೆ ಎಂಬ ಮಾಹಿತಿ ಲಭ್ಯವಾಗಲಿದೆ. ಪಕ್ಷಿಗಳ ಸಂಶೋಧನೆ ಹಾಗೂ ದಾಖಲೀಕರಣ ಪ್ರಕ್ರಿಯೆಗೂ ನೆರವಾಗಲಿದೆ. ಎಂಎಂ ಹಿಲ್ಸ್‌ನಲ್ಲಿ ಪ್ರಾಣಿಗಳ ಗಣತಿ ಹಲವು ಬಾರಿ ನಡೆದಿದ್ದು ಮೊದಲ ಬಾರಿಗೆ ಪಕ್ಷಿಗಳ ಗಣತಿ ನಡೆಯುತ್ತಿದೆ. –ಡಾ.ಕೆ.ಸಂತೋಷ್ ಕುಮಾರ್ ಮಲೆ ಮಹದೇಶ್ವರ ವನ್ಯಜೀವಿದಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.