ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಅನಧಿಕೃತ ಕಟ್ಟಡಗಳ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು 70ರ ದಶಕದಲ್ಲಿ ನಿರ್ಮಾಣವಾಗಿದ್ದ ಆರೋಗ್ಯ ಕೇಂದ್ರವನ್ನು ನೆಲಸಮಗೊಳಿಸಿದ್ದು, ಸೋಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆಯು ಈಚೆಗೆ ಹುಲಿ ಅಭಯಾರಣ್ಯದಲ್ಲಿ ಒತ್ತುವರಿಯಾದ ಸ್ಥಳಗಳನ್ನು ಪಟ್ಟಿಮಾಡಿ ತೆರವುಗೊಳಿಸಲು ಮುಂದಾಗಿದ್ದು ಅದರ ಭಾಗವಾಗಿ ಶನಿವಾರ ಬಿಆರ್‌ಟಿ ವಲಯಕ್ಕೆ ಸೇರಿದ ಜಾಗದಲ್ಲಿದ್ದ ಆರೋಗ್ಯ ಕೇಂದ್ರವನ್ನು ತೆರವು ಮಾಡಿತು. ಅರಣ್ಯ ಇಲಾಖೆಯ ಕ್ರಮವನ್ನು ಆದಿವಾಸಿ ಮುಖಂಡರು ತೀವ್ರವಾಗಿ ಖಂಡಿಸಿದರು.
ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಮಾತನಾಡಿ, ‘ನೀಲಗಿರಿ ಆದಿವಾಸಿ ವೆಲ್ಫೇರ್ ಅಸೋಸಿಯೇಶನ್ 1975ರ ಸಮಯದಲ್ಲಿ ಬಿಳಿಗಿರಿ ಬೆಟ್ಟದ ಆದಿವಾಸಿಗಳ ಆರೋಗ್ಯ ಸುಧಾರಣೆಗಾಗಿ ನಿರ್ಮಾಣವಾಗಿದೆ. ಇಲ್ಲಿ ಆಸ್ಪತ್ರೆ ಸ್ಥಾಪಿಸಿ ಸ್ಥಳೀಯರಿಗೆ ಔಷಧಿಗಳನ್ನು ನೀಡುವ, ಆರೋಗ್ಯ ಸಲಹೆ ಕೊಡುವ ಮೂಲಕ ಜನ ಸಮೂಹದ ಸ್ವಾಸ್ಥ್ಯ ಸಂರಕ್ಷಣೆಗೆ ನೆರವಾಗುತ್ತ ಬಂದಿದೆ. ಆದರೆ, ಅರಣ್ಯ ಇಲಾಖೆ ಆದಿವಾಸಿಗಳಿಗೆ ಯಾವುದೇ ಸೂಚನೆ ನೀಡದೆ ಕಟ್ಟಡವನ್ನು ಏಕಾಏಕಿ ನೆಲಸಮಗೊಳಿಸಿದ್ದು, ಆದಿವಾಸಿಗಳ ಮೇಲಿನ ದೌರ್ಜನ್ಯ ಮುಂದುವರಿಸಿದೆ ಎಂದರು.
ಆಸ್ಪತ್ರೆಯ ಸ್ಥಳ ಒತ್ತುವರಿ ನಡೆದಿದ್ದರೆ, ಅರಣ್ಯ ಇಲಾಖೆ ವಶಕ್ಕೆ ಪಡೆಯಲಿ, ಇದಕ್ಕೆ ಯಾರ ಅಡ್ಡಿಯೂ ಇಲ್ಲ. ಆದರೆ, 50 ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿರುವ ಕಟ್ಟಡವನ್ನು ಉರುಳಿಸಿರುವುದು ಖಂಡನೀಯ. ಅರಣ್ಯ ಇಲಾಖೆಯಿಂದ ಬುಡಕಟ್ಟು ಸಮುದಾಯಗಳಲಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವಿದೆಯೇ ಎಂದು ಮಾದೇಗೌಡ ಪ್ರಶ್ನಿಸಿದರು.
ಹಳೆಯ ಆಸ್ಪತ್ರೆ ಕೆಡವಿದ ಜಾಗದಲ್ಲಿ ಅರಣ್ಯ ಇಲಾಖೆ ಹೊಸದಾಗಿ ಆಸ್ಪತ್ರೆಯನ್ನು ಮರು ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಸೋಲಿಗ ಮುಖಂಡ ಸಣ್ಣ ರಂಗೇಗೌಡ ಎಚ್ಚರಿಕೆ ನೀಡಿದರು.
ಅಮ್ಮನ ಆಸ್ಪತ್ರೆ ಎಂದೇ ಖ್ಯಾತಿ
ಅಮ್ಮ ಎಂದೇ ಖ್ಯಾತರಾಗಿದ್ದ ಅಮೆರಿಕದ ನೀಲಂ ಆರ್ಮಸ್ಟ್ರಾಂಗ್ ಎಂಬ ಮಹಿಳೆ ಬುಡಕಟ್ಟು ಜನರ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ತೋತಗಿರಿ ಪ್ರದೇಶದಲ್ಲಿ ನೀಲಗಿರಿ ಆದಿವಾಸಿ ವೆಲ್ಫೇರ್ ಅಸೋಸಿಯೇಶನ್ ಸ್ಥಾಪಿಸಿದ್ದರು. ಅಸೋಸಿಯೇಷನ್‌ನ ಆರೋಗ್ಯ ಶಾಖೆಯೊಂದು 1970ರಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲೂ ನಿರ್ಮಾಣವಾಯಿತು. ಅಂದಿನಿಂದ ಬೆಟ್ಟದ ನಿವಾಸಿಗಳಿಗೆ ಆರೋಗ್ಯ ಸೇವೆ ದೊರೆಯುತ್ತಿದೆ ಎಂದು ಪೋಡಿನ ಆದಿವಾಸಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.