ADVERTISEMENT

ಬಿಳಿಗಿರಿರಂಗನಬೆಟ್ಟ: ರಂಗನಾಥಸ್ವಾಮಿಯ ವೈಭವದ ರಥೋತ್ಸವ

ಸಾವಿರಾರು ಭಕ್ತರು ಭಾಗಿ, ಸ್ವಾಮಿಯ ಬ್ರಹ್ಮರಥಕ್ಕೆ ಹಣ್ಣು ಧವನ ತೂರಿದ ಭಕ್ತಗಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 15:33 IST
Last Updated 16 ಏಪ್ರಿಲ್ 2022, 15:33 IST
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬಿಳಿಗಿರಿರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಆರು ವರ್ಷಗಳ ನಂತರ ಬೆಟ್ಟದಲ್ಲಿ ರಥೋತ್ಸವ ನಡೆದಿದೆ.  – ಪ್ರಜಾವಾಣಿ ಚಿತ್ರ/ ಸಿ.ಆರ್‌.ವೆಂಕಟರಾಮು
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬಿಳಿಗಿರಿರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಆರು ವರ್ಷಗಳ ನಂತರ ಬೆಟ್ಟದಲ್ಲಿ ರಥೋತ್ಸವ ನಡೆದಿದೆ. – ಪ್ರಜಾವಾಣಿ ಚಿತ್ರ/ ಸಿ.ಆರ್‌.ವೆಂಕಟರಾಮು   

ಯಳಂದೂರು:ಅಪಾರಭಕ್ತಸಾಗರದ ನಡುವೆ ಶನಿವಾರ ಮಧ್ಯಾಹ್ನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಜಿಲ್ಲೆ, ಹೊರ ಜಿಲ್ಲೆಗಳು, ನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದ ಬಂದಿದ್ದಸಾವಿರಾರು ಭಕ್ತಾಧಿಗಳು ರಂಗಪ್ಪನ ತೇರನ್ನು ಎಳೆದು ಪುಳಕಿತರಾದರು.ಸ್ತ್ರೀಯರು ಮತ್ತು ಮಕ್ಕಳು ದೇವಳದಲ್ಲಿ ಭಕ್ತಿ ಸಮರ್ಪಿಸಿದರು.

ಆರು ವರ್ಷಗಳ ನಂತರ ರಥೋತ್ಸವ ನಡೆಯುತ್ತಿರುವುದರಿಂದ ಹಾಗೂ ಈ ಬಾರಿ ಹೊಸ ರಥದಲ್ಲಿ ಸ್ವಾಮಿಯ ಉತ್ಸವವನ್ನು ಮಾಡುತ್ತಿರುವುದರಿಂದ ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಅಂದಾಜು 20 ಸಾವಿರಕ್ಕೂ ಹೆಚ್ಚು ಭಕ್ತರು ದೊಡ್ಡ ತೇರಿನ ಉತ್ಸವಕ್ಕೆ ಸಾಕ್ಷಿಯಾದರು. ರಥದ ಬೀದಿಯ ಇಕ್ಕೆಲಗಳಲ್ಲಿರುವ ಕಟ್ಟಡಗಳ ಮೇಲ್ಭಾಗದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ADVERTISEMENT

ಶನಿವಾರ ಮುಂಜಾನೆ ದೊಡ್ಡರಥವನ್ನು ಕಬ್ಬು, ಬಾಳೆ ಮತ್ತು ಗುಡುಮೆ ಕಾಯಿ, ಮಲ್ಲಿಗೆ, ಚೆಂಡು ಹೂ, ಜಾಜಿ, ಗುಲಾಬಿ,ಕಾಡು ಫಲ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರಥದ ಗೋಪುರ ಏರಿದ ದಾಳ ಮತ್ತು ಬಾವುಟಗಳ ಶೃಂಗಾರ ಬ್ರಹ್ಮರಥದ ವೈಭವವನ್ನು ಸಾರುವಂತೆ ಸೋಲಿಗರು ಸಿದ್ಧತೆ ಮಾಡಿದ್ದರು.

ಚೈತ್ರಶುಕ್ಲ ಪೂರ್ಣಿಮಾ ಚಿತ್ತಾ ನಕ್ಷತ್ರದಲ್ಲಿ ಮಧ್ಯಾಹ್ನ 12.10 ರಿಂದ 12.22ರೊಳಗೆ ಸಲ್ಲುವ ಕರ್ಕಾಟಕ ಲಗ್ನದ, ಚಂದ್ರ ನವಾಂಶ ಶುಭ ಮುಹೂರ್ತದಲ್ಲಿ ಭೂದೇವಿ ಮತ್ತು ಶ್ರೀದೇವಿ ಸಮೇತ ಬಿಳಿಗಿರಿ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥಾರೋಹಣ
ಮಾಡಲಾಯಿತು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗರುಡಾಗಮ:ಅಲಂಕೃತ ಸ್ವಾಮಿಯನ್ನು ಹೊತ್ತ ರಥ ಚಲಿಸುತ್ತಿದ್ದಂತೆ ಭಕ್ತಾಧಿಗಳು ಜಯಘೋಷಮೊಳಗಿಸಿದರು. ಪೂರ್ವ ದಿಕ್ಕಿನತ್ತ ತೇರು ಸಂಚರಿಸುತ್ತಿದ್ದಂತೆ ದಾಸರು ಎಡಬಿಡದೆಜಾಗಟೆ ಬಾರಿಸಿ, ಶಂಖನಾದ ಮಾಡಿದರು. ಮಂಗಳವಾದ್ಯದ ಸದ್ದು ಬನದಲ್ಲಿ ಅನುರಣಿಸಿತು.ರಥದ ಮುಂಭಾಗ ಅರ್ಚಕರು ತೆಂಗಿನಕಾಯಿ, ಕರ್ಪೂರದ ಆರತಿ ಮಾಡಿ, ತೇರನ್ನು ಬೆಳಗಿದರು.

ಈ ಸಂದರ್ಭ ಮೂರು ಗರುಡ ಪಕ್ಷಿಗಳು ತೇರನ್ನು ಪ್ರದಕ್ಷಿಣೆ ಹಾಕಿತೆರಳುತ್ತಿದ್ದಂತೆ, ರಂಗನಾಥನ ಭಕ್ತರ ಗೋವಿಂದ.., ಗೋವಿಂದ.. ಎಂಬ ಉದ್ಘೋಷ ಮುಗಿಲು ಮುಟ್ಟಿತು.

ಕೃಷಿಕರು ಹೊಸ ಫಸಲಿನ ಧವಸ, ಧಾನ್ಯವನ್ನು ತೂರಿದರೆ, ಹರಕೆಹೊತ್ತ ಮಹಿಳೆಯರು ನಾಣ್ಯಗಳನ್ನು ತೇರಿಗೆ ಚಲ್ಲಿ ಸಂಭ್ರಮಿಸಿದರು. ನವ ದಂಪತಿ ಬಾಳೆಹಣ್ಣಿಗೆ ಧವನವನ್ನು ಸಿಕ್ಕಿಸಿ, ರಥಕ್ಕೆ ಎಸೆದು ಹರಕೆ ಒಪ್ಪಿಸಿದರು.

ದಾಸ ಪಡೆ:ತೇರು ಸಾಗುವ ಹಾದಿಯಲ್ಲಿ ಬ್ಯಾಟೆಮನೆ ಉತ್ಸವ ಕಳೆಗಟ್ಟಿತು. ಭಕ್ತರು ನೆನೆಸಿದ ಅಕ್ಕಿ,ಕಜ್ಜಾಯ, ಪುರಿ, ಬೆಲ್ಲ ಸೇರಿಸಿ, 'ಆಪರಾಕ್, ಗೋಪಾರಕ್' ಆಚರಣೆ ನೆರವೇರಿಸಿದರು.

ದಾಸರು ಶಂಖ, ಜಾಗಟೆಯ ಸದ್ದು ಮೊಳಗಿಸಿ ವೆಂಕಟರಮಣನ ಗುಣಗಾನ ಮಾಡಿದರು.ಮಳೆ, ಬೆಳೆ ಸಮೃದ್ಧಿಗಾಗಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ಹರಕೆ ಹೊತ್ತ ಭಕ್ತರು ರಥದ ಬೀದಿಯಲ್ಲಿ ಭಕ್ತರಿಗೆ ಬೇಲದ ಹಣ್ಣಿನ ಪಾನಕ, ನೀರು ಮಜ್ಜಿಗೆ, ಕೋಸಂಬರಿ ವಿತರಿಸಿದರು. ಅರವಟ್ಟಿಗೆ ಹಾಗೂ ದಾಸೋಹಗಳಲ್ಲಿ ಮೊಸರನ್ನ, ಹುಳಿಯನ್ನ ಹಾಗೂ ತರಕಾರಿ ಪಕ್ವಾನ್ನಗಳನ್ನು ವಿತರಿಸಲಾಯಿತು. ನೂರಾರು ಪೊಲೀಸರು ರಥದಗಾಲಿಗಳ ಬಳಿ ನಿಂತು ವಸಂತ ರಥ ಸಾಂಗವಾಗಿ ಸಾಗಲು ಅನುವು ಮಾಡಿಕೊಟ್ಟರು. 1.15ಕ್ಕೆತೇರು ಪಶ್ಚಿಮಾಭಿಮುಖವಾಗಿ ಸಾಗಿ ಸ್ವಸ್ಥಾನ ಸೇರಿತು. ದೇವರ ಹೂ, ತೀರ್ಥಗಳನ್ನು ಚಿಮುಕಿಸಿ, ಪ್ರಸಾದ ವಿತರಿಸಲಾಯಿತು. ರಥವನ್ನು ಭಕ್ತರು ಶ್ರದ್ಧಾ ಭಕ್ತಿಗಳಿಂದನಮಿಸಿ, ಉದ್ದಂಡ ನಮಸ್ಕಾರ ಮಾಡಿದರು.

ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ತಹಶೀಲ್ದಾರ್ ಕೆ.ಬಿ.ಆನಂದಪ್ಪನಾಯಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ ಇದ್ದರು.

ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯ

ರಥೋತ್ಸವದ ಅಂಗವಾಗಿ ಶನಿವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ರಂಗನಾಥನಿಗೆ ಕಲ್ಯಾಣೋತ್ಸವ ಮತ್ತು ಪ್ರಸ್ಥಾನ ಮಂಟಪೋತ್ಸವ ಧಾರ್ಮಿಕ ಕೈಂಕರ್ಯ ನೆರವೇರಿಸಲಾಗಿತ್ತು. ದೇವಾಲಯ ಮಹಾದ್ವಾರವನ್ನು ತಳಿರು ತೋರಣಗಳಿಂದಸಿಂಗರಿಸಲಾಗಿತ್ತು. ಪ್ರಾಂಗಣದಲ್ಲಿ ಇಳಿಬಿಟ್ಟ ತರಹೇವಾರಿ ಹೂಮಾಲೆಗಳ ತೋರಣ ಸುಗಂಧಪಸರಿಸಿತ್ತು. ಗರ್ಭಗುಡಿಯ ಮಂದಾರತಿ, ಅರ್ಚಕರ ಮಂತ್ರ ಘೋಷಗಳು, ಕರ್ಪೂರ ಸುಗಂಧ ಕಡ್ಡಿಗಳ ಪರಿಮಳ ಬನದ ಸುತ್ತಮುತ್ತ ಆವರಿಸಿತ್ತು. ನಸುಕಿನಿಂದಲೇ ದೇವಸ್ಥಾನದಪ್ರಾಂಗಣದಲ್ಲಿ ಭಕ್ತರ ಓಡಾಟ ಹೆಚ್ಚಾಗಿತ್ತು. ಅಂಗಳ ತುಂಬಿದ ದೇವರ ರಂಗೋಲಿಗಳು ಗಮನಸೆಳೆದವು.

ದಾಖಲೆಯ ಭಕ್ತರು

ರಥೋತ್ಸವ ಮುಗಿದ ಬಳಿಕ ಭಕ್ತರು ಮೆಟ್ಟಿಲುಗಳ ಮೂಲಕ ದೇವಾಲಯಕ್ಕೆ ತೆರಳಿ, ಸರತಿ ಸಾಲಿನಲ್ಲಿ ನಿಂತು ರಂಗನಾಥನ ದರ್ಶನ ಪಡೆದರು.

ಈಸಮಯದಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಸರದಿ ಸಾಲಿನಲ್ಲಿ ನಿಂತು ಚಿನ್ನದ ಆಭರಣಗಳಿಂದಕಂಗೊಳಿಸುತ್ತಿದ್ದ ಸರ್ವಾಲಂಕೃತ ಸ್ವಾಮಿಯ ದರ್ಶನ ಪಡೆದರು. ಅಮ್ಮನವರ ಆಲಯದಲ್ಲಿಕುಂಕುಮಾರ್ಚನೆ ನೆರವೇರಿಸಿದರು. ನಂತರ ಸ್ವಾಮಿಯ ಪಾದುಕೆಗಳಿಂದ ಶಿರಕ್ಕೆಸ್ಪರ್ಶಿಸಿಕೊಂಡು ಧನ್ಯತೆ ಮೆರೆದರು.

ಸಂತೆಯಲ್ಲಿ ಮಕ್ಕಳ ಆಟಿಕೆ, ಕಜ್ಜಾಯ, ಖಾರದಪುರಿ ಕೊಳ್ಳಲು ಜನರು ಮುಗಿಬಿದ್ದರು.

‘ಆರು ವರ್ಷಗಳ ನಂತರ ರಂಗಪ್ಪನ ದೊಡ್ಡ ಜಾತ್ರೆ ನಡೆದಿದ್ದು, ಭಕ್ತರುಸಡಗರ ಸಂಭ್ರಮಗಳ ನಡುವೆ ಪಾಲ್ಗೊಂಡರು. ನವೀಕೃತ ದೇವಳ, ಹೊಸರಥ ಈ ಬಾರಿಯ ಪ್ರಧಾನ ಆಕರ್ಷಣೆ ಆಗಿತ್ತು. ಕೋವಿಡ್ ನಂತರ ಸರ್ಕಾರಎಲ್ಲ ನಿರ್ಬಂಧ ತೆರವುಗೊಳಿಸಿದ್ದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಮೋಹನ್ ಕುಮಾರ್ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ಪುನೀತ್‌ ಭಾವಚಿತ್ರ ಪ್ರದರ್ಶನ

ರಥೋತ್ಸವದ ಸಂದರ್ಭದಲ್ಲಿ ಕೆಲವು ಯುವಕರು ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದು ಗಮನ ಸೆಳೆಯಿತು. ಪುನೀತ್‌ ರಾಜ್‌ಕುಮಾರ್‌ ಪರ ಘೋಷಣೆಗಳನ್ನು ಕೂಗುತ್ತಾ ನೆಚ್ಚಿನ ನಟನನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.