ADVERTISEMENT

ತಮಿಳುನಾಡಿಗೆ ನೀರು: ಚಾಮರಾಜನಗರದಲ್ಲಿ ಖಾಲಿ ಕೊಡ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 10:57 IST
Last Updated 19 ಸೆಪ್ಟೆಂಬರ್ 2023, 10:57 IST
   

ಚಾಮರಾಜನಗರ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಗೇಟ್‌ ಮುಭಾಗ ಸೇರಿದ ಪ್ರತಿಭಟನಕಾರರು ಖಾಲಿ ಕೊಡಗಳನ್ನು ಪ್ರದರ್ಶಿಸಿದರಲ್ಲದೆ, ತಮಿಳುನಾಡು ಸರ್ಕಾರ, ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ಕನ್ನಡಿಗರು, ರೈತರ ವಿರೋಧದ ನಡುವೆಯೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಪ್ರತಿದಿನ ₹5000 ಕ್ಯೂಸೆಕ್‌ ನೀರು ಬಿಡುವಂತೆ ಆದೇಶಿಸಿರುವುದು ಖಂಡನೀಯ’ ಎಂದು ಕಿಡಿಕಾರಿದರು. 

ADVERTISEMENT

‘ಈಗಾಗಲೇ ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.  ಪ್ರತಿ ದಿನ ತಮಿಳುನಾಡಿಗೆ ನೀರು ಹರಿಸಿದರೆ ಕಾವೇರಿ ಕೊಳ್ಳ ಬರಿದಾಗುತ್ತದೆ. ರಾಜ್ಯದ ಜನತೆಗೆ ತೊಂದರೆಯಾಗಲಿದೆ. ತಮಿಳುನಾಡಿಗೆ ಹರಿಸುವ ನೀರನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ತಮಿಳುನಾಡು ಸರ್ಕಾರ ಕಾವೇರಿ ವಿಚಾರದಲ್ಲಿ ಕ್ಯಾತೆ ಮುಂದುವರಿಸುತ್ತಿದ್ದರೆ ಗಡಿ ಬಂದ್ ಮಾಡಿ, ತಮಿಳುನಾಡು ವಾಹನಗಳು ರಾಜ್ಯ ಪ್ರವೇಶಕ್ಕೆ ಅಡ್ಡಿ ಪಡಿಸುತ್ತೇವೆ’ ಎಂದು ಎಚ್ಚರಿಸಿದರು.

ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿರಾಜು, ಚಾ.ರಾ.ಕುಮಾರ್, ಅರುಣ್ ಕುಮಾರ್, ಮಹೇಶ್ ಗೌಡ, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ನಂಜುಂಡಸ್ವಾಮಿ, ಚಾ.ಹ.ರಾಮು, ವೀರಭದ್ರ, ತಾಂಡವಮೂರ್ತಿ, ದೊರೆ, ಆಟೊ ಸುರೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.