ಚಾಮರಾಜನಗರ: ಜ.30ರಿಂದ ಫೆ.13ರವರೆಗೆ ಜಿಲ್ಲೆಯಾದ್ಯಂತ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ’ ನಡೆಯಲಿದ್ದು ರೋಗ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಕಾಯಿಲೆ ಬಂದ ಬಳಿಕ ಪಡೆಯಬೇಕಾದ ಚಿಕಿತ್ಸಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶವನ್ನು ಕುಷ್ಠರೋಗದಿಂದ ಮುಕ್ತವಾಗಿಸುವುದು ಮಹಾತ್ಮಾಗಾಂಧೀಜಿ ಅವರ ಕನಸಾಗಿತ್ತು. ಗಾಂಧೀಜಿ ಹುತಾತ್ಮರಾದ ದಿನದಿಂದಲೇ ಜ.30 ರಿಂದ 15 ದಿನ ಜಿಲ್ಲೆಯಾದ್ಯತ ಕುಷ್ಠರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಕುಷ್ಠರೋಗವು ಲಿಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯಾಗಿದ್ದು, ಪ್ರಾಥಮಿಕ ಹಂತದಲ್ಲಿಯೇ ರೋಗದ ಗುಣಲಕ್ಷಣ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ. ಕಾಯಿಲೆ ನಿರ್ಮೂಲನೆಗಾಗಿ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಕುಷ್ಠರೋಗದ ನಿರ್ಮೂಲನೆ ಕುರಿತು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಇರುವ ತಂಡ ರಚಿಸಲಾಗಿದ್ದು, ಐಇಸಿ ಚಟುವಟಿಕೆಗಳ ಬಗ್ಗೆ ವ್ಯಾಪಕವಾಗಿ ಜನಜಾಗೃತಿ ಮೂಡಿಸಿ ಕುಷ್ಠರೋಗದ ಬಗ್ಗೆ ಇರುವ ಕೀಳರಿಮೆ ಹೋಗಲಾಡಿಸಬೇಕಿದೆ. ಕುಷ್ಠರೋಗಕ್ಕೆ ತುರ್ತು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವಂತೆ ರೋಗಿಗಳ ಮನವೊಲಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂನಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ, ‘2024ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 38 ಪುರುಷರು ಹಾಗೂ 12 ಮಹಿಳೆಯರಲ್ಲಿ ಸೇರಿ 50 ಮಂದಿಯಲ್ಲಿ ಕುಷ್ಠರೋಗ ಪತ್ತೆಹಚ್ಚಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ತಾಮ್ರ ವರ್ಣದ ಕೆಂಪುಮಿಶ್ರಿತ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಇದ್ದರೆ ಕುಷ್ಠರೋಗದ ಲಕ್ಷಣವಾಗಿರಬಹುದು. ರೋಗ ಲಕ್ಷಣ ಇದ್ದವರು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಬೇಕು. ಅಗತ್ಯವಿದ್ದರೆ ಚಿಕಿತ್ಸೆ ಪಡೆಯಬೇಕು ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಕುಷ್ಠರೋಗ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನದ ಭಿತ್ತಿಪತ್ರ ಬಿಡುಗಡೆ ಮಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ. ಸುಧಾ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಘಟಕದ ಅಧಿಕಾರಿ ಡಾ.ರವಿಕುಮಾರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಅಂಕಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ತಾಲ್ಲೂಕು ವೈದ್ಯಾಧಿಕಾರಿಗಳು ಸಭೆಯಲ್ಲಿ ಇದ್ದರು.
ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿ
ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಬೆಳಗಿನ ಪ್ರಾರ್ಥನೆಯ ಸಂದರ್ಭ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ರೋಗದ ಬಗ್ಗೆ ತಿಳಿವಳಿಕೆ ನೀಡಬೇಕು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಕಾರ್ಯಕರ್ತೆಯರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಜೊತೆ ಸಮನ್ವಯ ಸಾಧಿಸಿ ಕುಷ್ಠರೋಗ ಅರಿವು ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕುಷ್ಠರೋಗದ ಗುಣಲಕ್ಷಣಗಳು ಹಾಗೂ ಅದರ ನಿಯಂತ್ರಣ ವಿಧಾನಗಳ ಕುರಿತು ಸಂಪೂರ್ಣ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ಇದೇ ವೇಳೆ ಕುಷ್ಠರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾದವರ ಜೊತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆತ್ಮೀಯವಾಗಿ ಬೆರೆತು ಮಾತನಾಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿ ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.