ADVERTISEMENT

ಚಾಮರಾಜನಗರ | ಆದರ್ಶ ವಿದ್ಯಾಲಯ: ದಾಖಲಾತಿ ಹೆಚ್ಚಳ

ಬಾಲಚಂದ್ರ ಎಚ್.
Published 17 ಜೂನ್ 2025, 5:57 IST
Last Updated 17 ಜೂನ್ 2025, 5:57 IST
ಪಿಯು ಕಾಲೇಜು ವಿಭಾಗವಾಗಿ ಉನ್ನತೀಕರಣಗೊಂಡಿರುವ ಯಳಂದೂರು ತಾಲ್ಲೂಕಿನ ಆದರ್ಶ ವಿದ್ಯಾಲಯ
ಪಿಯು ಕಾಲೇಜು ವಿಭಾಗವಾಗಿ ಉನ್ನತೀಕರಣಗೊಂಡಿರುವ ಯಳಂದೂರು ತಾಲ್ಲೂಕಿನ ಆದರ್ಶ ವಿದ್ಯಾಲಯ   

ಚಾಮರಾಜನಗರ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿರುವ ಆದರ್ಶ ವಿದ್ಯಾಲಯಗಳು ಮೇಲ್ದರ್ಜೆಗೇರಿದ್ದು, ಪದವಿಪೂರ್ವ ಶಿಕ್ಷಣ ವಿಭಾಗ ಆರಂಭವಾಗಿದೆ. ಮೊದಲ ವರ್ಷವೇ ಪ್ರಥಮ ಪಿಯುಸಿಗೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರ, ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತುಪ್ಪೂರು, ಕೊಳ್ಳೇಗಾಲ ತಾಲ್ಲೂಕಿನ ಮುಂಡಿಗುಂಡ ಹಾಗೂ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿಯಲ್ಲಿ ಆದರ್ಶ ವಿದ್ಯಾಲಯಗಳಿವೆ. ಚಿಕ್ಕತುಪ್ಪೂರು ವಿದ್ಯಾಲಯದಲ್ಲಿ ಗರಿಷ್ಠ 95 ವಿದ್ಯಾರ್ಥಿಗಳು, ಮುಂಡಿಗುಂಡದಲ್ಲಿ 78, ಮೆಲ್ಲಹಳ್ಳಿಯಲ್ಲಿ 64 ಹಾಗೂ ಮಲ್ಲಯ್ಯನಪುರದಲ್ಲಿ 63 ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಾರೆ.

ಜೂನ್ 10ರಿಂದ ಆದರ್ಶ ಪದವಿಪೂರ್ವ ಕಾಲೇಜು ವಿಭಾಗ ಆರಂಭವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿಎಸ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಇಬಿಎಸಿಎಸ್‌ ಕೋರ್ಸ್‌ಗಳ ಕಲಿಕೆಗೆ ಅವಕಾಶ ನೀಡಲಾಗಿದೆ. ನಾಲ್ಕು ಕೋರ್ ವಿಷಯಗಳ ಜೊತೆಗೆ ಎರಡು ಭಾಷಾ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ.

ADVERTISEMENT

ದಾಖಲಾತಿ ಹೆಚ್ಚಳಕ್ಕೆ ಕಾರಣ: ಆದರ್ಶ ಶಾಲೆಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ, ಶಿಸ್ತುಬದ್ಧ ಕಲಿಕೆ, ಅತ್ಯುತ್ತಮ ಫಲಿತಾಂಶದಿಂದ ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಪದವಿಪೂರ್ವ ಶಿಕ್ಷಣ ವಿಭಾಗ ಆರಂಭವಾದ ಮೊದಲ ವರ್ಷವೇ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಪ್ರವೇಶಾತಿ ಪ್ರಕ್ರಿಯೆ ಇನ್ನೂ ಮುಂದುವರಿದಿದೆ ಎನ್ನುತ್ತಾರೆ ಮೆಲ್ಲಹಳ್ಳಿ ಆದರ್ಶ ಶಾಲೆಯ ಪ್ರಾಂಶುಪಾಲರಾದ ತಿಮ್ಮರಾಜು.

ಪ್ರಥಮ ಪಿಯುಸಿಗೆ ಗರಿಷ್ಠ 80 ಮಕ್ಕಳಿಗೆ ಪ್ರವೇಶಾತಿ ನೀಡಬೇಕು ಎಂಬ ನಿಯಮವಿದ್ದರೂ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ನಿರಾಕರಿಸುವಂತಿಲ್ಲ ಎಂಬ ಕಾರಣಕ್ಕೆ ಪ್ರವೇಶಾತಿಗೆ ನಿರ್ಬಂಧ ಹಾಕಿಲ್ಲ. ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿ ಹೆಚ್ಚಿಸುವ ನಿರ್ಧಾರವನ್ನು ಮುಂದೆ ತೆಗೆದುಕೊಳ್ಳಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟಗೌರಮ್ಮ ಹೇಳಿದರು. 

ಆದರ್ಶ ವಿದ್ಯಾಲಯಗಳ ಪದವಿಪೂರ್ವ ವಿಭಾಗಕ್ಕೆ ಸರ್ಕಾರದಿಂದ ನೇಮಕಾತಿ ನಡೆದಿಲ್ಲ. ಕಾರ್ಯಭಾರ ಕಡಿಮೆ ಇರುವ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ನಂತರ ಅಗತ್ಯ ಬೋಧಕ ಸಿಬ್ಬಂದಿಯನ್ನು ನೀಡಲಾಗುವುದು ಎಂದರು.

ವಿಷಯವಾರು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವಂತೆಯೂ ಸರ್ಕಾರ ಸೂಚನೆ ನೀಡಿದ್ದು, ಮೆರಿಟ್‌ ಹಾಗೂ ಅನುಭವದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಂತೆ ಆಯಾ ಆದರ್ಶ ವಿದ್ಯಾಲಯಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ. ಜೂನ್ ಮೊದಲ ವಾರದಿಂದ ಪಿಯುಸಿ ತರಗತಿಗಳು ಆರಂಭವಾಗಿದ್ದು ದಾಖಲಾತಿ ಪ್ರಕ್ರಿಯೆಯೂ ಮುಂದುವರಿದಿದೆ ಎಂದು ಪುಟ್ಟಗೌರಮ್ಮ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ಸಮಸ್ಯೆಯಾಗದಂತೆ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಶೀಘ್ರ ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದ್ದು ಉಪನ್ಯಾಸಕರ ಕೊರತೆ ನೀಗಲಿದೆ
ಪುಟ್ಟಗೌರಮ್ಮ ಡಿಡಿಪಿಯು
ಉಪನ್ಯಾಸಕರ ಕೊರತೆ
ಆದರ್ಶ ವಿದ್ಯಾಲಯಗಳ ಪದವಿಪೂರ್ವ ವಿಭಾಗಕ್ಕೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದ್ದರೂ ಬೋಧಿಸಲು ಉಪನ್ಯಾಸಕರ ಕೊರತೆ ಕಾಡುತ್ತಿದೆ. ಒಂದು ವಿದ್ಯಾಲಯಕ್ಕೆ 9 ಮಂದಿ ಕಾಯಂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಗತ್ಯವಿದೆ. ಪ್ರಸ್ತುತ ಒಬ್ಬ ಕಾಯಂ ಸಿಬ್ಬಂದಿಯನ್ನೂ ನೇಮಕಾತಿ ಮಾಡಿಲ್ಲ. ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಆದರ್ಶ ವಿದ್ಯಾಲಯದ ಕಾಲೇಜು ವಿಭಾಗಕ್ಕೆ ನಿಯೋಜಿಸಲಾಗಿದೆ. ಪರಿಣಾಮ ಕಾಲೇಜು ಆರಂಭವಾಗಿ 15 ದಿನ ಕಳೆದರೂ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.
ಶುಲ್ಕದ ವಿವರ
ಆದರ್ಶ ವಿದ್ಯಾಲಯದ ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿ ಪಡೆಯಲು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಕೆಟಗರಿ 1ಕ್ಕೆ ಸೇರಿದ ವಿದ್ಯಾರ್ಥಿಗಳು 255 ಶುಲ್ಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ₹ 790 ಶುಲ್ಕ ನಿಗದಿಪಡಿಸಲಾಗಿದೆ. ಯೂನಿಫಾರಂ ಪ್ರವೇಶಾತಿ ಶುಲ್ಕ ಸೇರಿದಂತೆ ₹ 1530 ದರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.