ADVERTISEMENT

ಚಾಮರಾಜನಗರ: ಜವಾಬ್ದಾರಿ ಮರೆತ ಸರ್ಕಾರಕ್ಕೆ ಕಲಾವಿದರ ಸೆಡ್ಡು

ಜಿಲ್ಲಾ ಯುವ ಕಲಾವಿದರ ಬಳಗದಿಂದ ಎರಡು ದಿನಗಳ ಸಾಂಸ್ಕೃತಿಕ ದಸರಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:16 IST
Last Updated 30 ಸೆಪ್ಟೆಂಬರ್ 2025, 2:16 IST
ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ಹಮ್ಮಿಕೊಂಡಿರುವ ಸಾಂಸ್ಕೃತಿ ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದ ಎದುರು ಕಲಾವಿದರು ಪ್ರದರ್ಶನ ನೀಡಿದರು
ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ಹಮ್ಮಿಕೊಂಡಿರುವ ಸಾಂಸ್ಕೃತಿ ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದ ಎದುರು ಕಲಾವಿದರು ಪ್ರದರ್ಶನ ನೀಡಿದರು   

ಚಾಮರಾಜನಗರ: ಚಾಮರಾಜನಗರದಲ್ಲಿ ಈ ಬಾರಿ ಕಲಾವಿದರೇ ಸಾಂಸ್ಕೃತಿಕ ದಸರಾ ಆಯೋಜನೆ ಮಾಡಿರುವುದು ಅಭಿನಂದನೀಯ, ಮುಂದಿನ ವರ್ಷ ಸರ್ಕಾರದಿಂದ ಜಿಲ್ಲಾ ದಸರಾ ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್‌.ಕೃಷ್ಣಮೂರ್ತಿ ಹೇಳಿದರು.

ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ಹಮ್ಮಿಕೊಂಡಿರುವ ದಸರಾ ಮಹೋತ್ಸವ ಮೆರವಣಿಗೆಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಚಾಲನೆ ನೀಡಿ ಮಾತನಾಡಿದ ಶಾಸಕರು ‘2013ರಿಂದ ರಾಜ್ಯ ಸರ್ಕಾರದ ವತಿಯಿಂದ ಚಾಮರಾಜನಗರ ಜಿಲ್ಲಾ ದಸರಾ ನಡೆಯುತ್ತಿತ್ತು. ಈ ಬಾರಿಯೂ ದಸರಾ ಆಚರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರೂ ಒಲವು ತೋರಲಿಲ್ಲ. 

ಆದರೂ ಜಿಲ್ಲೆಯ ಕಲಾವಿದರು ಸ್ವಯಂಪ್ರೇರಿತವಾಗಿ ದಸರಾ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಬೆಂಬಲ ಇದೆ. ಜಿಲ್ಲೆಯ ಜಾನಪದ ಕಲಾವಿದರಿಗೆ ಬೆಂಬಲ ನೀಡಿ ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಮುಂದಿನ ವರ್ಷ ಅದ್ಧೂರಿಯಾಗಿ ಜಿಲ್ಲಾ ದಸರಾ ಕಾರ್ಯಕ್ರಮಗಳನ್ನು ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಮೆರವಣಿಗೆಯಲ್ಲಿ ಡೊಳ್ಳುಕುಣಿತ, ವೀರಗಾಸೆ, ನಾದಸ್ವರ, ಬೀಸು ಕಂಸಾಳೆ, ಸೋಬಾನೆ ಕಲಾವಿದರ ತಂಡಗಳು, ಮಂಟೇಸ್ವಾಮಿ ಕಂಡಾಯ, ನೀಲಗಾರರು, ತತ್ವಪದಕಾರರು ಭಾಗವಹಿಸಿ ಪ್ರದರ್ಶನ ನೀಡಿದರು. ಕಲಾವಿದರ ಜೊತೆ ಶಾಸಕ ಕೃಷ್ಣಮೂರ್ತಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಭುವನೇಶ್ವರಿ ವೃತ್ತದ ಮಾರ್ಗವಾಗಿ ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ಆವರಣ ತಲುಪಿತು. ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ‌ಕಲಾವಿದರು ಸಭಿಕರೆಲ್ಲರೂ ಒಟ್ಟಾಗಿ ಹಾಡು ಹಾಡುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ,  2013ರಿಂದ ಆರಂಭವಾದ ಚಾಮರಾಜನಗರ ದಸರಾ 2024ರವರೆಗೆ ಅದ್ಧೂರಿಯಾಗಿ ನಡೆದು ಏಕಾಏಕಿ ರದ್ದುಗೊಳಿಸಿದ್ದು ಸರಿಯಲ್ಲ. ಇಂತಹ ನಿರ್ಧಾರಗಳು ಆಡಳಿತ ಚುಕ್ಕಾಣಿ ಹಿಡಿದಿರುವವರಿಗೆ ಚಾಮರಾಜನಗರ ಜಿಲ್ಲೆಯ ಇತಿಹಾಸದ ಕುರಿತು ಸ್ಪಷ್ಟವಾದ ಅರಿವು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಟೀಕಿಸಿದರು.

1774ರಲ್ಲಿ ಅರಿಕುಠಾರವನ್ನು ಚಾಮರಾಜನಗರ ಎಂದು ನಾಮಕರಣ ಮಾಡಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್‌. ಚಾಮರಾಜೇಶ್ವರನ ದೇವಾಲಯ ನಿರ್ಮಾಣ ಮಾಡಿದ್ದು ಕೂಡ ಮೈಸೂರು ಅರಸರು. ರಾಜ ಮಹಾರಾಜರು ಆಳ್ವಿಕೆ ನಡೆಸಿದ ಕುರುಕುಗಳನ್ನು ಜಿಲ್ಲೆಯ ಹಲವೆಡೆ ಕಾಣಬಹುದು. ಇಂತಹ ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳದಲ್ಲಿ ದಸರಾ ಆಚರಿಸಬೇಕಾಗಿದ್ದು ಸರ್ಕಾರದ ಜವಾಬ್ದಾರಿಯಾಗಬೇಕಿತ್ತು. ಇತಿಹಾಸದ ಅರಿವಿಲ್ಲದವರು ನಾಯಕರಾಗಿರುವುದು ವಿಪರ್ಯಾಸ ಎಂದರು.

ಸರ್ಕಾರ ದಸರಾ ಆಚರಿಸದಿದ್ದರೂ ಕಲಾವಿದರೆಲ್ಲರೂ ಸೇರಿ ದಸರಾ ಆಚರಿಸುತ್ತಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು. ಚಾಮರಾಜನಗರ ಜಿಲ್ಲಾ ಯುವಕಲಾವಿದರ ಬಳಗದ ಅಧ್ಯಕ್ಷ ಶಿವಶಂಕರ್ ಎನ್.ಚಟ್ಟು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮಂಗಲ ಶಿವಣ್ಣ, ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾರಂ ಶ್ರೀನಿವಾಸಗೌಡ, ಮುಖಂಡರಾದ ವೇಣುಗೋಪಾಲ್, ಕಲಾವಿದರಾದ ಸಿದ್ದರಾಜು, ಮಂಜುಶ್ರೀ, ದಡದಹಳ್ಳಿ ರಮೇಶ್, ರಾಕ್‌ ಗಿರೀಶ್, ಆಲೂರು ದೊರೆಸ್ವಾಮಿ ಇದ್ದರು.

ಚಾಮರಾಜೇಶ್ವರ ದೇವಸ್ಥಾನದ ಎದುರು ಕಲಾತಂಡಗಳ ಮೆರವಣಿಗೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಜನಪದ ಕಲೆಗಳ ಪ್ರದರ್ಶನ ನೀಡಿದ ತತ್ವಪದಕಾರರು

ಸಾಂಸ್ಕೃತಿಕ ಸೊಬಗು ಅನಾವರಣ

ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರರ ಕುರಿತಾದ ಜನಪದ ಹಾಗೂ ಭಕ್ತಿಗೀತೆಗಳ ಗಾಯನ ಮುದನೀಡಿತು. ಸುಗಮ ಸಂಗೀತ ನೀಲಗಾರರ ಪದ ಸೋಬಾನೆ ಪದ ತಂಬೂರಿ ಪದ ಚಲನಚಿತ್ರ ಗೀತೆಗಳ ಗಾಯನ ರಂಗಗೀತೆ ಹೋರಾಟದ ಗೀತೆಗಳು ಹಾಸ್ಯ ಭಜನೆ ವೀರಗಾಸೆ ಹರಿಕಥೆ ಗೊರವರ ಕುಣಿತ ಡೊಳ್ಳು ಕುಣಿತ ಸ್ಯಾಕ್ಸೋಫೋನ್‌ ವಾದನ ತತ್ವಪದ ಭರತನಾಟ್ಯ ನೃತ್ಯ ರೂಪಕಗಳು ಪ್ರೇಕ್ಷಕರ ಮನಸೂರೆಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.