ADVERTISEMENT

ಚಾಮರಾಜನಗರ: ಮಾರುಕಟ್ಟೆಗೆ ಲಗ್ಗೆ ಇಟ್ಟ ನೇರಳೆ ಹಣ್ಣು

ಭರಪೂರ ಪೋಷಕಾಂಶ, ಔಷಧೀಯ ಗುಣಗುಳುಳ್ಳ ಹಣ್ಣಿಗೆ ಬೇಡಿಕೆ

ಬಾಲಚಂದ್ರ ಎಚ್.
Published 17 ಜೂನ್ 2025, 6:00 IST
Last Updated 17 ಜೂನ್ 2025, 6:00 IST
ಚಾಮರಾಜನಗರದ ಜೋಡಿ ರಸ್ತೆಯಲ್ಲಿ ನೇರಳೆ ಹಣ್ಣು ಖರೀದಿ ಮಾಡುತ್ತಿರುವ ಗ್ರಾಹಕರು
ಚಾಮರಾಜನಗರದ ಜೋಡಿ ರಸ್ತೆಯಲ್ಲಿ ನೇರಳೆ ಹಣ್ಣು ಖರೀದಿ ಮಾಡುತ್ತಿರುವ ಗ್ರಾಹಕರು   

ಚಾಮರಾಜನಗರ: ನೋಡಿದಾಕ್ಷಣವೇ ಕಣ್ಮನ ಸೆಳೆಯುವ, ಭರಪೂರ ಪೋಷಕಾಂಶಗಳನ್ನು ಹೊಂದಿರುವ ನೇರಳೆ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ. ಋತುಮಾನದಲ್ಲಷ್ಟೇ (ಜೂನ್–ಜುಲೈ) ಸಿಗುವ ನೇರಳೆ ಹಣ್ಣಿನ ರುಚಿಗೆ ಗ್ರಾಹಕರು ಮಾರುಹೋಗುತ್ತಿದ್ದಾರೆ.

ಜೆಎಸ್‌ಎಸ್‌ ಕಾಲೇಜು ಬಳಿ, ಜಿಲ್ಲಾಧಿಕಾರಿ ಕಚೇರಿ ಎದುರು, ಚಾಮರಾಜೇಶ್ವರ ದೇವಸ್ಥಾನದ ಬದಿ ಸೇರಿದಂತೆ ನಗರದ ಪ್ರಮುಖ ವೃತ್ತ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರಿಗಳು ನೇರಳೆ ಮಾರಾಟ ಮಾಡುತ್ತಿದ್ದಾರೆ. 

ಎಷ್ಟಿದೆ ದರ: 

ಮಾರುಕಟ್ಟೆಗೆ ಜಂಬೂ ನೇರಳೆ ಹಾಗೂ ನಾಟಿ ನೇರಳೆ ಎಂಬ ಎರಡು ಮಾದರಿಯ ನೇರಳೆ ಬಂದಿವೆ. ನಾಟಿ ನೇರಳೆಗೆ ಹೋಲಿಸಿದರೆ ಜಂಬು ನೇರಳೆ ಗಾತ್ರದಲ್ಲಿ ದೊಡ್ಡದಾಗಿದ್ದು, ಬೆಲೆಯೂ ದುಬಾರಿ. ಕೆ.ಜಿಗೆ ₹ 200ರಿಂದ ₹ 250ವರೆಗೂ ದರ ಇದೆ. ನುಣುಪಾದ ಮೇಲ್ಮೈ, ಕಡುಗಪ್ಪು ಬಣ್ಣದ ಜಂಬು ನೇರಳೆ ನೋಡಿದಾಕ್ಷಣ ಕಣ್ಮನ ಸೆಳೆಯುತ್ತದೆ. ಈ ತಳಿಯಲ್ಲಿ ಪಲ್ಪ್‌ (ಹಣ್ಣಿನ ತಿರುಳು) ಹೆಚ್ಚಾಗಿದ್ದು ರುಚಿಯೂ ಚೆನ್ನಾಗಿದೆ.

ADVERTISEMENT

ನಾಟಿ ತಳಿಯ ನೇರಳೆ ಗಾತ್ರದಲ್ಲಿ ಚಿಕ್ಕದಾಗಿದ್ದು ದರ ಕಡಿಮೆ. ಕಾಲು ಕೆ.ಜಿಗೆ ₹ 30 ಹಾಗೂ ಒಂದು ಕೆ.ಜಿ ಖರೀದಿಸಿದರೆ ₹ 100ಕ್ಕೆ ಸಿಗುತ್ತಿದೆ. ಗಾತ್ರದಲ್ಲಿ ಸಣ್ಣ ಹಾಗೂ ಹಣ್ಣಿನ ತಿರುಳು ಕಡಿಮೆ ಎಂಬ ಕಾರಣಕ್ಕೆ ದರ ಕಡಿಮೆ ಇದೆ. ಆದರೆ, ರುಚಿ ಹಾಗೂ ಔಷಧೀಯ ಗುಣಗಳಲ್ಲಿ ದುಬಾರಿ ಜಂಬು ನೇರಳೆಯನ್ನೂ ಮೀರಿಸುತ್ತದೆ ಎನ್ನುತ್ತಾರೆ ಚಾಮರಾಜೇಶ್ವರ ದೇವಸ್ಥಾನದ ಬಳಿ ಹಣ್ಣಿನ ವ್ಯಾಪಾರ ಮಾಡುವ ಸೋಮಣ್ಣ.

ಜಂಬು ನೇರಳೆ ಮೈಸೂರು, ಬಳ್ಳಾರಿ, ಮಲೆನಾಡು ಜಿಲ್ಲೆಗಳಿಂದ ಹೆಚ್ಚಾಗಿ ನಗರಕ್ಕೆ ಪೂರೈಕೆಯಾಗುತ್ತದೆ. ಸಾಗಣೆಯ ವೆಚ್ಚ ಕಾರಣಕ್ಕೆ ದರ ದುಬಾರಿಯಾಗುತ್ತದೆ. ಆದರೆ, ನಾಟಿ ತಳಿಯ ನೇರಳೆ ಸ್ಥಳೀಯವಾಗಿಯೇ ಲಭ್ಯವಾಗುವುದರಿಂದ ದರ ಕಡಿಮೆ ಇರುತ್ತದೆ. ಜಮೀನು ಹಾಗೂ ತೋಟಗಳ ಬದುಗಳಲ್ಲಿ, ಮನೆಗಳ ಆವರಣಗಳಲ್ಲಿ ಬೆಳೆಯುವ ನೇರಳೆ ಮರಗಳಿಂದ ಹಣ್ಣನ್ನು ಜೋಪಾನವಾಗಿ ಕಿತ್ತು ತಂದು ಮಾರಾಟ ಮಾಡುತ್ತೇವೆ ಎನ್ನುತ್ತಾರೆ ವ್ಯಾಪಾರಿಗಳು.

ಮರಗಳಿಂದ ನೇರಳೆ ಹಣ್ಣು ಕೊಯ್ಯುವುದು ಬಹಳ ನಾಜೂಕಿನ ಕೆಲಸ. ಹಣ್ಣಿನ ಮೇಲ್ಮೈ ಹಾಗೂ ತಿರುಳು ಬಹಳ ಮೃದುವಾಗಿರುವುದರಿಂದ ಮರ ಹತ್ತಿ ಕೈಗಳಿಂದ ಕೀಳಬೇಕು. ಕೈಜಾರಿ ನೆಲಕ್ಕೆ ಬಿದ್ದರೆ ಒಡೆದು ಹೋದರೆ ಮಾರಾಟ ಮಾಡಲು ಬರುವುದಿಲ್ಲ. ಮಣ್ಣಿನೊಂದಿಗೆ ಬೆರೆಯುವುದರಿಂದ ತಿನ್ನಲೂ ಸಾಧ್ಯವಾಗದೆ ವ್ಯರ್ಥವಾಗುತ್ತದೆ ಎನ್ನುತ್ತಾರೆ ಅವರು.

ಮಳೆಗಾಲದ ಒಂದೆರಡು ತಿಂಗಳು ಮಾತ್ರ ನೇರಳೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದರಿಂದ ಸಹಜವಾಗಿ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿರುತ್ತದೆ. ಜೂನ್ ಮೊದಲ ವಾರದಿಂದ ಆರಂಭವಾಗಿ ಜುಲೈ ತಿಂಗಳ ಮಧ್ಯದೊತ್ತಿಗೆ ಖಾಲಿಯಾಗುತ್ತದೆ. ಮಹಾನಗರಗಳಲ್ಲಿ ನೇರಳೆ ಹಣ್ಣಿನಿಂದ ಜಾಮ್‌, ವೈನ್‌ ಹಾಗೂ ಐಸ್‌ಕ್ರೀಂ ತಯಾರಿಸಲಾಗುತ್ತದೆ. ಎಲ್ಲ ಮಾದರಿಯ ಮಣ್ಣು, ಹವಾಗುಣಗಳಲ್ಲಿ ಬೆಳೆಯುವ ನೇರಳೆಯ ಔಷಧೀಯ ಗುಣಗಳ ಬಗ್ಗೆ ಹೆಚ್ಚು ಪ್ರಚಾರವಾಗಬೇಕಿದೆ ಎನ್ನುತ್ತಾರೆ ವ್ಯಾಪಾರಿ ಸೋಮಣ್ಣ. 

ನಗರದಲ್ಲಿ ಮಾರಾಟಕ್ಕಿಟ್ಟಿರುವ ನೇರಳೆ
ನೇರಳೆಯಲ್ಲಿ ಔಷಧೀಯ ಗುಣಗಳು
ನೇರಳೆ ಹಣ್ಣಿನ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಸಕ್ಕರೆಯ ಅಂಶ, ಗ್ಲೈಸೆಮಿಕ್ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳು ಸೇವಿಸಬಹುದು. ಜೀರ್ಣಕ್ರಿಯೆಗೆ, ಜೀವಕೋಶಗಳಿಗೆ ಹಣ್ಣು ಉಪಯುಕ್ತ. ಹೇರಳವಾಗಿ ಕಬ್ಬಿಣದಂಶ ಒಳಗೊಂಡಿದ್ದು ರಕ್ತಹೀನತೆ ನಿವಾರಣೆಗೆ ಸಹಕಾರಿಯಾಗಿದೆ. ಕ್ಯಾಲೋರಿ ಕಡಿಮೆ ಹಾಗೂ ಫೈಬರ್ ಹೆಚ್ಚಾಗಿರುವುದರಿಂದ ತೂಕ ಇಳಿಕೆಗೂ ಸಹಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳು, ವಿಟಮಿನ್ ಸಿ ಚರ್ಮದ ಆರೋಗ್ಯಕ್ಕೆ ಸಹಕಾರಿ. ಸೀಮಿತ ಪ್ರಮಾಣದ ನೇ ರಳೆ ತಿಂದರೆ ಆರೋಗ್ಯಕ್ಕೆ ಹೆಚ್ಚು ಅನುಕೂಲ ಇದೆ ಎನ್ನುತ್ತಾರೆ ವೈದ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.