ADVERTISEMENT

ಚಾಮರಾಜನಗರ | ಪ್ರಯಾಸ್: ಜಿಲ್ಲೆಯ 37,800 ಮಕ್ಕಳಿಗೆ ಪರೀಕ್ಷೆ

ಅಂಗನವಾಡಿ ಮಕ್ಕಳ ವಾಕ್-ಶ್ರವಣ ಸಮಸ್ಯೆ ಪರಿಹರಿಸುವ ವಿನೂತನ ಯೋಜನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 5:56 IST
Last Updated 16 ಆಗಸ್ಟ್ 2025, 5:56 IST
ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಾಕ್-ಶ್ರವಣ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡುವ ‘ಪ್ರಯಾಸ್’ ಯೋಜನೆಯ ಒಡಬಂಡಿಕೆಯನ್ನು  ಜಿಲ್ಲಾಡಳಿತ ಹಾಗೂ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಾಡಿಕೊಂಡವು
ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಾಕ್-ಶ್ರವಣ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡುವ ‘ಪ್ರಯಾಸ್’ ಯೋಜನೆಯ ಒಡಬಂಡಿಕೆಯನ್ನು  ಜಿಲ್ಲಾಡಳಿತ ಹಾಗೂ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಾಡಿಕೊಂಡವು   

ಚಾಮರಾಜನಗರ: ‘ಮಕ್ಕಳಿಗೆ ಸರಿಯಾಗಿ ಕಿವಿ ಕೇಳದಿರುವುದು, ವಯಸ್ಸಿಗೆ ಅನುಗುಣವಾಗಿ ಸ್ಪಷ್ಟವಾಗಿ ಮಾತು ಬಾರದಿರುವುದು ಕಂಡುಬಂದರೆ ಪೋಷಕರು ನಿರ್ಲಕ್ಷ್ಯವಹಿಸದೆ ಪರೀಕ್ಷೆ ಮಾಡಿಸಿ ಸಮಸ್ಯೆ ಕಂಡುಬಂದರೆ ಚಿಕಿತ್ಸೆ ಕೊಡಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸಲಹೆ ನೀಡಿದರು.

ನಗರದ ಕರಿನಂಜನಪುರ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಅಂಗನವಾಡಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಾಕ್-ಶ್ರವಣ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ‘ಪ್ರಯಾಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರು ಸಹಯೋಗದಲ್ಲಿ ಆಯೋಜಿಸಲಾಗಿತ್ತು.

‘ವಿಶ್ವದಲ್ಲಿ 46 ಕೋಟಿ, ದೇಶದಲ್ಲಿ 20 ಲಕ್ಷ, ರಾಜ್ಯದಲ್ಲಿ 20,839 ಮಕ್ಕಳು ವಾಕ್ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿವೆ ಎಂದು ಸಂಶೋಧನೆ ಹೇಳುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಸಲಹೆ ನೀಡಿದರು.

ADVERTISEMENT

‘ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ಸಮಸ್ಯೆ ಅಡ್ಡಿಯಾಗಿರುವುದನ್ನು ಮನಗಂಡು ಜಿಲ್ಲೆಯಲ್ಲಿ ಪ್ರಯಾಸ್‌ ಕಾರ್ಯಕ್ರಮ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ  6 ತಿಂಗಳಿನಿಂದ 6 ವರ್ಷದವರೆಗಿನ 37,800 ಮಕ್ಕಳನ್ನು ಗುರುತಿಸಲಾಗಿದ್ದು, ವಾಕ್ ಮತ್ತು ಶ್ರವಣ ತಜ್ಞರಿಂದ ಉಚಿತ ಚಿಕಿತ್ಸೆ ನೀಡಲು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯೊಂದಿಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿದೆ’ ಎಂದರು.

‘ಇದೇ ತಿಂಗಳು ಜಿಲ್ಲೆಯಾದ್ಯಂತ ಪ್ರಯಾಸ್ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು, ಸೆಪ್ಟೆಂಬರ್‌ನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಅಂಗನವಾಡಿ ಮಕ್ಕಳಿಗೆ ತಪಾಸಣೆ ನಡೆಸಿ ವಾಕ್ ಹಾಗೂ ಶ್ರವಣ ಸಮಸ್ಯೆ ಕಾಣಿಸಿಕೊಂಡ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ವಿತರಿಸಲಾಗುವುದು. ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಪ್ರಯಾಸ್’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಲನೆ ನೀಡಿ ಮಕ್ಕಳ ತಪಾಸಣಾ ಪ್ರಕ್ರಿಯೆ ಪರಿಶೀಲಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಹೆಚ್.ವಿ.ಚಂದ್ರು, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ.ಕವಿತಾ, ಎಎಸ್‌ಪಿ ಟಿ.ಜವರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್, ಡಿಎಚ್‌ಒ ಡಾ.ಎಸ್. ಚಿದಂಬರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವೈದ್ಯಾಧಿಕಾರಿಗಳು, ಅಧಿಕಾರಿಗಳು ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಡಿ.ಎಂ.ಎಫ್ ನಿಧಿಯಿಂದ ಆರೋಗ್ಯ ಇಲಾಖೆಗೆ ನೀಡಿರುವ ಸಂತಾನ ಶಕ್ತಿ  ಹರಣ ಶಸ್ತ್ರಚಿಕಿತ್ಸಾ ವಾಹನಕ್ಕೆ ಹಸಿರು ನಿಶಾನೆ ತೋರಿದರು.           

ರಾಜ್ಯದಲ್ಲಿ 20,839 ಮಕ್ಕಳಿಗೆ ವಾಕ್ ಮತ್ತು ಶ್ರವಣ ಸಮಸ್ಯೆ ‘ಆರಂಭದಲ್ಲಿಯೇ ಸಮಸ್ಯೆ ಗುರುತಿಸಿ ಚಿಕಿತ್ಸೆ ನೀಡುವುದು ಅಗತ್ಯ’ ‘ವಯಸ್ಸಿಗನುಗುಣವಾಗಿ ಮಾತು ಬಾರದಿದ್ದರೆ ವೈದ್ಯರನ್ನು ಸಂಪರ್ಕಿಸಿ’

‘ಯೋಜನೆ ಸದುಪಯೋಗವಾಗಲಿ’ ‘ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಪ್ರಯಾಸ್ ಅನ್ನು ಅನುಷ್ಠಾನಗೊಳಿಸಿದ್ದು ಇದು ಮಕ್ಕಳ ಕಲಿಕಾ ಪ್ರಕ್ರಿಯೆಗೆ ಪೂರಕವಾದ ಯೋಜನೆಯಾಗಿದೆ. ಅಂಗನವಾಡಿ ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಹೊಂದಿರುವ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯೊಂದಿಗೆ ಜಿಲ್ಲಾಡಳಿತ ಒಡಂಬಡಿಕೆ ಮಾಡಿಕೊಂಡಿರುವುದು ಅಭಿನಂದನೀಯ’ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.