ADVERTISEMENT

ಚಾಮರಾಜನಗರ: ರಾಜ್ಯ ರಾಷ್ಟ್ರೀಯ ‌ಹೆದ್ದಾರಿ: 1 ವರ್ಷ 9 ತಿಂಗಳಲ್ಲಿ 340 ಮಂದಿ ಸಾವು

ಬಾಲಚಂದ್ರ ಎಚ್.
Published 27 ಅಕ್ಟೋಬರ್ 2025, 2:24 IST
Last Updated 27 ಅಕ್ಟೋಬರ್ 2025, 2:24 IST
<div class="paragraphs"><p>ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ವೃತ್ತದಲ್ಲಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಂಚಾರ ಫಲಕ ನೆಲಕ್ಕುರುಳಿರುವುದು</p></div>

ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ವೃತ್ತದಲ್ಲಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಂಚಾರ ಫಲಕ ನೆಲಕ್ಕುರುಳಿರುವುದು

   

ಚಾಮರಾಜನಗರ: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಅಪಾಯಕಾರಿ ತಿರುವುಗಳು, ರಸ್ತೆಗಳು ಕೂಡುವ ಜಂಕ್ಷನ್‌, ಹೆಚ್ಚು ಅಪಘಾತಗಳು ಸಂಭವಿಸುವ ಬ್ಲಾಕ್‌ಸ್ಪಾಟ್‌ಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳ ಪಾಲನೆಯಾಗದ ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ಜೀವಹಾನಿಯಾಗುತ್ತಿದೆ.

ಜಿಲ್ಲೆಯಲ್ಲಿ ಹಾದುಹೋಗಿರುವ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಭೀಕರ ರಸ್ತೆ ಅಪಘಾತದಲ್ಲಿ ನೂರಾರು ಮಂದಿ ಬಲಿಯಾಗುತ್ತಿದ್ದಾರೆ, ಸಾವಿರಾರು ಜನ ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ.

ADVERTISEMENT

ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2024ರಲ್ಲಿ ಅಪಘಾತಗಳು ಸಂಭವಿಸಿದ್ದು 256 ಮಂದಿ ಮೃತಪಟ್ಟಿದ್ದಾರೆ. 2025ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೂ 443 ಅಪಘಾತಗಳು ಸಂಭವಿಸಿದ್ದು 184 ಮಂದಿ ಮೃತಪಟ್ಟು 896 ಮಂದಿ ಗಾಯಗೊಂಡಿದ್ದಾರೆ. ಅಜಾರೂಕತೆಯ ವಾಹನ ಚಾಲನೆಯ ಜೊತೆಗೆ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮಗಳ ಅನುಷ್ಠಾನ ಮಾಡದಿರುವುದು ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನುತ್ತಾರೆ ಸವಾರರು.

ಚಾಮರಾಜನಗರ ಜಿಲ್ಲೆ ನೆರೆಯ ತಮಿಳುನಾಡು ಹಾಗೂ ಕೇರಳ ರಾಜ್ಯದೊಂದಿಗೆ ಗಡಿ ಬೆಸೆದುಕೊಂಡಿದ್ದು 209 (948 ಹೊಸದು), 150 ‘ಎ’, 766, 67 (181 ಹೊಸದು) ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು ಸಮರ್ಪಕ ಸುರಕ್ಷತಾ ಕ್ರಮಗಳು ಅನುಷ್ಠಾನಗೊಂಡಿಲ್ಲ.

ಜಿಲ್ಲಾ ಪೊಲೀಸ್ ಇಲಾಖೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ 13 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು ಅಪಘಾತಗಳ ತಡೆಗೆ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪಟ್ಟಿಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗಿದೆ.  

ಬ್ಲಾಕ್‌ಸ್ಪಾಟ್‌ಗಳು ಎಲ್ಲಿವೆ:

ಕೊಳ್ಳೇಗಾಲ ತಾಲ್ಲೂಕಿನ ಧನಗೆರೆ (ಎನ್‌ಎಚ್‌ 209), ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ಸರ್ಕಲ್‌ ( ಎನ್‌ಎಚ್‌ 209), ಬದನಗುಪ್ಪೆ (150 ಎ), ಬೇಗೂರು ಠಾಣೆಯ ಗರಗನಹಳ್ಳಿ ಗೇಟ್‌ನಿಂದ ಅಗತಗೌಡನಹಳ್ಳಿ ಗೇಟ್‌ವರೆಗೆ, ವೆಂಕಟೇಶ್ವರ ಬಾರ್‌ನಿಂದ ಪೋಸ್ಟ್‌ಆಫೀಸ್‌ವರೆಗೆ, ಹಿರಿಕಾಟಿ ಗೇಟ್‌ನಿಂದ ಚಿಕ್ಕಹುಂಡಿ ಗೇಟ್‌ವರೆಗೆ (ಎನ್‌ಎಚ್‌ 766).

ಗುಂಡ್ಲುಪೇಟೆ ತಾಲ್ಲೂಕಿನ ಧನ್ಯಶ್ರೀ ಪೆಟ್ರೋಲ್‌ ಬಂಕ್‌ನಿಂದ ಮಾಡ್ರಳ್ಳಿ ಬಸ್ ನಿಲ್ದಾಣದವರೆಗೆ, ಎಪಿಎಂಸಿಯಿಂದ ವೆಂಕಟೇಶ್ವರ ಕಲ್ಯಾಣಮಂಟಪದವರೆಗೆ,  ಹಗಳದ ಅರಳಿಮರದಿಂದ ಕೆರೆಯವರೆಗೆ, ತೆರಕಣಾಂಬಿಯ ಸ್ಕಂದ ಗ್ಯಾಸ್ ಏಜೆನ್ಸಿಯಿಂದ ತೆರಕಣಾಂಬಿ ಹುಂಡಿಯ ಪೆಟ್ರೋಲ್ ಬಂಕ್‌ವರೆಗೆ, ಹನೂರು ತಾಲ್ಲೂಕಿನ ಆಂಜನೇಯ ದೇವಸ್ಥಾನದಿಂದ ಮಲೆ ಮಹದೇಶ್ವರ ರಸ್ತೆಯವರೆಗೆ, ಅಗ್ನಿಶಾಮಕ ದಳದ ಕಚೇರಿಯಿಂದ ಕೊಳ್ಳೇಗಾಲ ರಸ್ತೆಯವರೆಗಿನ ಪ್ರದೇಶವನ್ನು ಬ್ಲಾಕ್‌ ಸ್ಪಾಟ್‌ಗಳು ಎಂದು ಗುರುತಿಸಲಾಗಿದೆ.

ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇರುವ ಸ್ಥಳಗಳನ್ನು ಗುರುತಿಸಲಾಗಿದ್ದರೂ ಸಮರ್ಪಕ ಸುರಕ್ಷತಾ ಕ್ರಮಗಳು ಪಾಲನೆಯಾಗಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ.

ಚಾಮರಾಜನಗರದಲ್ಲಿ ಹಾದುಹೋಗಿರುವ ತಮಿಳುನಾಡಿನ ಸತ್ಯಮಂಗಲಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೂ ಚಾಚಿಕೊಂಡಿರುವ ರಸ್ತೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳು ಕಾಣುವುದಿಲ್ಲ. ಹೆದ್ದಾರಿಯ ಬದಿ ದೀಪಗಳನ್ನು ಹಾಕಿಲ್ಲ. ಬ್ಯಾರಿಕೇಡ್‌ಗಳಿಗೆ ಬಳಿದಿರುವ ಬಣ್ಣ ಸಂಪೂರ್ಣವಾಗಿ ಮಾಸಿಹೋಗಿದ್ದು ವಾಹನಗಳ ಹೊಗೆ ಬಿದ್ದು ಕಪ್ಪು ಬಣ್ಣಕ್ಕೆ ತಿರುಗಿದೆ. 

ರಾತ್ರಿಯ ಹೊತ್ತು ಪ್ರಜ್ವಲಿಸುವ ಬ್ಲಿಂಕರ್‌ಗಳು ಇಲ್ಲ. ಡಿವೈಡರ್‌ಗೆ ಪ್ರತಿಫಲನ ಸ್ಟಿಕ್ಕರ್‌ಗಳನ್ನು ಅಳವಡಿಕೆ ಮಾಡಿಲ್ಲ. ಹೈಮಾಸ್ಟ್‌ ದೀಪಗಳ ಅಳವಡಿಕೆ ಮಾಡಿಲ್ಲ. ರಸ್ತೆಯ ಮೇಲೆ ವಾಹನಗಳು ಸಾಗಬೇಕಾದ ಲೇನ್‌ಗಳ ಪಟ್ಟಿ ಹಾಕಿಲ್ಲ, ವೇಗ ನಿಯಂತ್ರಕಗಳಾದ ಹಂಪ್‌ಗಳಿಗೆ ಬಣ್ಣವನ್ನೂ ಬಳಿಸಿಲ್ಲ. ವಾಹನಗಳ ವೇಗ ಮಿತಿ ಸೇರಿದಂತೆ ಸಂಚಾರ ಫಲಕಗಳು ಹಾಳಾಗಿವೆ.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಹಾಕಲಾಗಿರುವ ರಬ್ಬರ್ ಹಂಪ್‌ಗಳು ಅಪಾಯಕಾರಿಯಾಗಿದ್ದು ಸವಾರರ ಬೆನ್ನುಹುರಿಗೆ ಗಂಭೀರ ಪೆಟ್ಟು ಮಾಡುತ್ತಿವೆ. ಜಿಲ್ಲಾ ಆಸ್ಪತ್ರೆಯ ಎದುರಿಗಿರುವ ಮೂರು ಸಾಲಿನ ರಬ್ಬರ್ ಹಂಪ್‌ಗಳನ್ನು ಹತ್ತಿಸಲಾಗದೆ ನಿಯಂತ್ರಣ ತಪ್ಪಿ ಬಿದ್ದು ವಾಹನ ಸವಾರರು ಗಾಯಮಾಡಿಕೊಳ್ಳುತ್ತಿದ್ದಾರೆ.

ರಾಮಸಮುದ್ರದಿಂದ ಬಿಳಿಗಿರಿ ರಂಗನಬೆಟ್ಟದ ಕಡೆಗೆ ಸಾಗುವ ರಸ್ತೆ ತೀರಾ ಕಡಿದಾಗಿದ್ದು ಅಪಾಯಕಾರಿ ತಿರುವುಗಳಿಂದ ಕೂಡಿದ್ದರೂ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿಲ್ಲ. ದೊಡ್ಡರಾಯಪೇಟೆ ಸರ್ಕಲ್‌ನಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಅವೈಜ್ಞಾನಿಕವಾಗಿರುವ ಪರಿಣಾಮ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಜಂಕ್ಷನ್‌ನಲ್ಲಿರುವ ಜಾಗೃತಿ ಫಲಕಗಳು ಮಳೆಗೆ ಧರೆಗುರುಳಿವೆ. 

ಸತ್ಯಮಂಗಲದ ಕಡೆಗೆ ಸಂಪರ್ಕಿಸುವ ಹೆದ್ದಾರಿಯ ಮಧ್ಯೆಯೇ ಅಪಾಯಕಾರಿಯಾಗಿ ಬ್ಯಾರಿಕೇಡ್‌ಗಳನ್ನು ಅಡ್ಡ ಇರಿಸಲಾಗಿದೆ. ಕೆಲವು ಬ್ಯಾರಿಕೇಡ್‌ಗಳು ಕೆಳಗೆ ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ ಸರಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಬ್ಯಾರಿಕೇಡ್‌ಗಳು ಗಾಳಿಗೆ ಬೀಳಬಾರದು ಎಂದು ದೊಡ್ಡ ಗಾತ್ರದ ಸೈಜ್‌ ಕಲ್ಲುಗಳನ್ನು ಅಡ್ಡಲಾಗಿ ಇರಿಸಲಾಗಿದ್ದು ವಾಹನಗಳ ಚಕ್ರ ಕಲ್ಲುಗಳ ಮೇಲೆ ಹತ್ತಿ ನಿಯಂತ್ರಣ ಕಳೆದುಕೊಂಡು ಅಪಘಾತಗಳಾಗುತ್ತಿವೆ.

ನಗರದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಡೆಗಳಲ್ಲಿ ಹಾಕಲಾಗಿರುವ ಹಂಪ್ಸ್‌ಗಳಿಗೆ ಪ್ರತಿಫಲನ ಪಟ್ಟಿಗಳನ್ನು ಹಾಕಲಾಗಿಲ್ಲ. ಬಳಿದಿರುವ ಬಣ್ಣ ಮಳೆಗೆ ಮಾಸಿದೆ. 

ಕೊಳ್ಳೆಗಾಲ ತಾಲ್ಲೂಕಿನಲ್ಲಿ 17ಕ್ಕೂ ಹೆಚ್ಚು ಅಪಾಯಕಾರಿ ತಿರುವುಗಳಿದ್ದು ಧನಗೆರೆ, ಕುಂತೂರು, ಮಧುವನಹಳ್ಳಿ, ಸಿದ್ದಯ್ಯನಪುರ, ಉತ್ತಂಬಳ್ಳಿ, ಅಣಗಳ್ಳಿ, ಸತ್ತೇಗಾಲ, ಹ್ಯಾಂಡ್ ಪೋಸ್ಟ್, ಜಾಗೇರಿ ಬಳಿ ಅಪಘಾತಗಳು ಹೆಚ್ಚಾಗಿವೆ. ಜಾಲಿ ಗಿಡಗಳು ರಸ್ತೆಗೆ ಚಾಚಿಕೊಂಡಿರುವುದು ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು ಎನ್ಎಚ್‌ 67ರ ಬಂಡೀಪುರ ತಿರುವಿನಲ್ಲಿ ವಾಹನಗಳು ಪಲ್ಟಿಯಾಗುವುದು ಸಾಮಾನ್ಯವಾಗಿದೆ. ತಾಲ್ಲೂಕಿನಲ್ಲಿ ನಿಯಮ ಬಾಹಿರವಾಗಿ ಟಿಪ್ಪರ್ ಲಾರಿಗಳು ಸಂಚರಿಸುತ್ತಿದ್ದು ಅಪಘಾತಗಳಿಗೆ ಕಾರಣವಾಗುತ್ತಿವೆ. ಬೇಗೂರಿನಿಂದ ಹಿರಿಕಾಟಿವರೆಗೆನ ರಸ್ತೆ ಅಪಾಯಕಾರಿಯಾಗಿದೆ.

ಬೇಜವಾಬ್ದಾರಿ ಚಾಲನೆ

ಹೆದ್ದಾರಿಗಳಲ್ಲಿ ಚಾಲಕರು ಬೇಜವಾಬ್ದಾರಿಯಾಗಿ ವಾಹನಗಳನ್ನು ಚಾಲಾಯಿಸುತ್ತಿರುವುದು ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ. ಏಕಮುಖವಾಗಿ ಸಂಚರಿಸುತ್ತಿರುವ ಸವಾರರು ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಒನ್‌ವೇನಲ್ಲಿ ಏಕಾಏಕಿ ಎದುರಿಗೆ ಬರುವ ವಾಹನಗಳು ಅಪಘಾತಕ್ಕೆ ತುತ್ತಾಗುತ್ತಿದ್ದು ಅಮಾಯಕರ ಜೀವ ಬಲಿಯಾಗುತ್ತಿವೆ.   

ಯಾರು ಏನಂತಾರೆ ?

‘13 ಬ್ಲಾಕ್‌ಸ್ಪಾಟ್‌’

ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ 13 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಪಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಸುರಕ್ಷತಾ ಕ್ರಮಗಳ ಪಾಲನೆಯಾಗಿದೆಯೇ ಎಂದು ಪರಿಶೀಲಿಸಲಾಗುವುದು. ––

– ಬಿ.ಟಿ.ಕವಿತಾ ಎಸ್‌ಪಿ

‘ಸೂಚನಾ ಫಲಕಗಳಿಲ್ಲ’

ಜಿಲ್ಲಾ ಕೇಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದರೂ ಸಮರ್ಪಕ ಸೂಚನಾ ಫಲಕಗಳು ಇಲ್ಲ. ರಾತ್ರಿಯ ಸಮಯ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯ ಮೇಲೆ ಪ್ರತಿಬಿಂಬಿಸುವ ಪ್ರತಿಫಲನಾ ಪಟ್ಟಿಗಳು ಇಲ್ಲದಾಗಿದ್ದು ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಜನಸಾಮಾನ್ಯರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ ಇನ್ನಾದರೂ ಅಧಿಕಾರಿಗಳು ಗಮನ ಹರಿಸಬೇಕು.

–ಭಾನುಪ್ರಕಾಶ್‌ ಸಾಮಾಜಿಕ ಹೋರಾಟಗಾರ

ಅವೈಜ್ಞಾನಿಕ ಹಂಪ್‌ಗಳು

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗ ನಿಯಂತ್ರಣಕ್ಕೆ ಹಾಕಿರುವ ಹಂಪ್ಸ್‌ಗಳಿಗೆ ಪ್ರತಿಫಲನ ಪಟ್ಟಿ ಅಳವಡಿಸಬೇಕು ಚಾಮರಾಜನಗರದಿಂದ ಮೈಸೂರಿಗೆ ಹೋಗುವಾಗ ಚಿನ್ನದಹುಂಡಿ ಬಳಿಯ ರೈಲ್ವೆ ಗೇಟ್‌ ಕ್ರಾಸಿಂಗ್‌ ಬಳಿ ಹಂಪ್‌ಗಳಿಗೆ ಪ್ರತಿಫಲನ ಪಟ್ಟಿ ಹಾಕದೆ ಸವಾರರಿಗೆ ಗಂಭೀರ ಸಮಸ್ಯೆಯಾಗಿದೆ. –ರಾಜಶೇಖರ್ ವಾಹನ ಸವಾರ ‘ಸೂಚನಾ ಫಲಕ ಅಳವಡಿಸಿ’ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಕಳಪೆ ಕಾಮಗಾರಿಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ರಸ್ತೆ ಬದಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾಗಿರುವ ಸೂಚನಾ ಫಲಕಗಳು ಪ್ರತಿಬಿಂಬಕ ಪಟ್ಟಿಗಳು ವೇಗಮಿತಿ ಫಲಕಗಳನ್ನು ಅಳವಡಿಸಿಲ್ಲ. 

–ಪ್ರಿಯಾಂಕಾ ಚಾಮರಾಜನಗರ ನಿವಾಸಿ

ಚಾಮರಾಜನಗರದಿಂದ ಸತ್ಯಮಂಗಲಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಅಡ್ಡಲಾಗಿ ಇರಿಸಿರುವ ಬ್ಯಾರಿಕೇಡ್‌ ಬಿದ್ದಿರುವುದು ಅಪಾಯಕಾರಿಯಾಗಿ ಕಲ್ಲುಗಳನ್ನು ರಸ್ತೆಗೆ ಇರಿಸಲಾಗಿರುವುದು
ಸೋಮವಾರಪೇಟೆ ಜಂಕ್ಷನ್‌ನಲ್ಲಿ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ಸಂಚರಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.