ADVERTISEMENT

ಚಾಮರಾಜನಗರ: ಸಚಿವ ಸೋಮಣ್ಣ ನೇತೃತ್ವದಲ್ಲಿ ಸಭೆ, ಅದ್ಧೂರಿ ದಸರಾ ಆಚರಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 16:31 IST
Last Updated 21 ಸೆಪ್ಟೆಂಬರ್ 2022, 16:31 IST
ಜಿಲ್ಲಾ ದಸರಾ ಮಹೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಶಾಸಕರು, ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಯಿತು. ಶಾಸಕರಾದ ನಿರಂಜನಕುಮಾರ್‌, ಎನ್‌.ಮಹೇಶ್‌, ಆರ್‌.ನರೇಂದ್ರ, ಸಿ.ಪುಟ್ಟರಂಗಶೆಟ್ಟಿ ಇತರರು ಇದ್ದರು
ಜಿಲ್ಲಾ ದಸರಾ ಮಹೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಶಾಸಕರು, ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಯಿತು. ಶಾಸಕರಾದ ನಿರಂಜನಕುಮಾರ್‌, ಎನ್‌.ಮಹೇಶ್‌, ಆರ್‌.ನರೇಂದ್ರ, ಸಿ.ಪುಟ್ಟರಂಗಶೆಟ್ಟಿ ಇತರರು ಇದ್ದರು   

ಚಾಮರಾಜನಗರ: ಮೈಸೂರು ದಸರಾದ ಭಾಗವಾಗಿ ಜಿಲ್ಲೆಯಲ್ಲಿ ನಾಲ್ಕು ದಿನಗಳ ನಡೆಯುವ ಜಿಲ್ಲಾ ದಸರಾ ಮಹೋತ್ಸವದ ದಿನಾಂಕ ಅಂತಿಮಗೊಂಡಿದ್ದು, ಇದೇ 27ರಿಂದ 30ರವರೆಗೆ ಅದ್ದೂರಿಯಾಗಿ ದಸರಾ ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಬುಧವಾರ ನಡೆದ ಶಾಸಕರು, ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗಿನ ಸಭೆಯಲ್ಲಿ ದಿನಾಂಕ ಅಂತಿಮಗೊಳಿಸಲಾಗಿದೆ.

ದಸರಾ ಮಹೋತ್ಸವವನ್ನು ನಾಲ್ಕು ದಿನಗಳಕಾಲ ಅದ್ದೂರಿ ಹಾಗೂ ವೈವಿಧ್ಯಮಯವಾಗಿ ನಡೆಸಲು ಎಲ್ಲ ವ್ಯವಸ್ಥೆಗಳನ್ನು ಸಜ್ಜುಗೊಳಿಸುವಂತೆ ವಿ. ಸೋಮಣ್ಣ ಸೂಚನೆ ನೀಡಿದರು.

ADVERTISEMENT

‘ಕೋವಿಡ್ ಕಾರಣದಿಂದ ಎರಡು ವರ್ಷಗಳಲ್ಲಿ ದಸರಾ ಅದ್ಧೂರಿ ಆಚರಣೆ ಸಾಧ್ಯವಾಗಿರಲಿಲ್ಲ. ಐತಿಹಾಸಿಕ ದಸರಾ ಮಹೋತ್ಸವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವ ಈ ಬಾರಿ ಹೆಚ್ಚು ವಿಜೃಂಭಣೆಯಿಂದ ನಡೆಯಬೇಕು. ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯಬೇಕು’ ಎಂದು ಅವರು ತಿಳಿಸಿದರು.

‘ನಗರದ ಚಾಮರಾಜೇಶ್ವರ ದೇವಾಲಯದ ಬಳಿ ದಸರಾ ಮಹೋತ್ಸವದ ಪ್ರಧಾನ ವೇದಿಕೆ ಅಚ್ಚುಕಟ್ಟಾಗಿ ಹಾಗೂ ವೈಭವಯುತವಾಗಿ ಇರಬೇಕು. ಈ ಬಾರಿ ದೀಪಾಲಂಕಾರ ವಿಶೇಷವಾಗಿ ಆಗಬೇಕು. ಸರ್ಕಾರಿ ಕಟ್ಟಡಗಳು, ಪ್ರಮುಖ ವೃತ್ತಗಳು, ರಸ್ತೆಗಳು, ಇತರೆ ಕಡೆಗಳಲ್ಲಿಯೂ ಝಗಮಗಿಸುವ ದೀಪಾಲಂಕಾರ ಮಾಡಬೇಕು. ಜಿಲ್ಲಾ ಕೇಂದ್ರದ ಎಲ್ಲ ದಿಕ್ಕಿನ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳು ದೀಪಾಲಂಕಾರದಿಂದ ಕೂಡಿರಬೇಕು. ಗ್ರಾಮೀಣ ದಸರಾ ನಡೆಯಲಿರುವುದರಿಂದತಾಲ್ಲೂಕು ಕೇಂದ್ರಗಳಲ್ಲಿಯೂ ದೀಪಾಲಂಕಾರ ಮಾಡಬೇಕು’ ಎಂದು ಸೆಸ್ಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಮೂಡಿಬರಬೇಕು. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಬೇಕು. ಹೊರ ಭಾಗದ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಬೇಕು ಎಂದು ಸೂಚಿಸಿದರು. ‘ಕಲಾತಂಡಗಳ ಮೆರವಣಿಗೆ, ಸ್ತಬ್ದ ಚಿತ್ರಗಳ ಪ್ರದರ್ಶನಗಳನ್ನು ಹಮ್ಮಿಕೊಳ್ಳಬೇಕು. ರೈತ ದಸರಾ, ಮಹಿಳಾ ದಸರಾ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಬೇಕು. ನಾಲ್ಕೂ ದಿನಗಳ ಕಾಲ ನಗರದ ಸ್ವಚ್ಛತೆಗೆ ಹೆಚ್ಚು ಗಮನಕೊಡಬೇಕು’ ಎಂದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ,‘ದಸರಾದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಬೇಕು. ಎಲ್ಲ ಕಲಾವಿದರಿಗೂ ಅವಕಾಶ ಸಿಗಬೇಕು’ ಎಂದು ಸಲಹೆ ನೀಡಿದರು. ವಿವಿಧ ಸಂಘಟನೆಗಳ ಮುಖಂಡರು, ಕಲಾವಿದರು ಮಾತನಾಡಿ, ‘ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ನೀಡಬೇಕು. ಸತ್ತಿಗೆ ಸೂರಪಾನಿಗಳನ್ನೂ ಗ್ರಾಮೀಣ ಭಾಗಗಳಿಂದ ತರಿಸಿ ದಸರಾ ಮೆರವಣಿಗೆ ಕಳೆಗಟ್ಟುವಂತೆ ಮಾಡಬೇಕು’ ಎಂದರು.

ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಎಡಿಸಿ ಎಸ್.ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್ ಸುಂದರ್‌ರಾಜ್‌, ಎಸಿ ಗೀತಾ ಹುಡೇದ, ವಿವಿಧ ಸಂಘನೆಗಳ ಮುಖಂಡರಾದ ವೆಂಕಟರಮಣಸ್ವಾಮಿ (ಪಾಪು(, ಸಿ.ಎನ್. ಬಾಲರಾಜು, ಸುರೇಶ್ ನಾಯಕ, ಕೆ. ವೀರಭದ್ರಸ್ವಾಮಿ, ಪರ್ವತರಾಜು, ಹಿರಿಯ ಕಲಾವಿದರಾದ ಮುಡಿಗುಂಡ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.

ತಾಲ್ಲೂಕು ಮಟ್ಟದಲ್ಲೂ ಉತ್ಸವ

ಹನೂರು, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿಯೂ ದಸರಾ ಆಚರಣೆ ವಿಜೃಂಭಣೆಯಿಂದ ನಡೆಯಬೇಕು ಎಂದು ಹೇಳಿದ ಸೋಮಣ್ಣ ಅವರು ಸಭೆಯಲ್ಲಿದ್ದ ಶಾಸಕರ ಜೊತೆ ಚರ್ಚಿಸಿದರು.

ತಾಲ್ಲೂಕು ಮಟ್ಟದಲ್ಲೂ ಉತ್ತಮ ಕಾರ್ಯಕ್ರಮ ಆಯೋಜನೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ‘ತಾಲ್ಲೂಕುಗಳಲ್ಲಿ ಏರ್ಪಡಿಸುವ ಗ್ರಾಮೀಣ ದಸರಾವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಹೇಳಿದರು. ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಮಾತನಾಡಿ, ಕೊಳ್ಳೇಗಾಲ, ಯಳಂದೂರಿನಲ್ಲೂ ದಸರಾ ಆಚರಣೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿ, ‘ತಾಲ್ಲೂಕು ದಸರಾ ಅಂಗವಾಗಿ ತಾಲ್ಲೂಕು ಕೇಂದ್ರಗಳಲ್ಲೂ ಆಕರ್ಷಕ ದೀಪಾಲಂಕಾರ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.