ADVERTISEMENT

ಚಾಮರಾಜನಗರ: ಕಾಡಿನ 200 ಎಕರೆಯಲ್ಲಿ ಲಂಟಾನಾ ಕಳೆ ತೆರವು

ಅರಣ್ಯ ಇಲಾಖೆ, ಎನ್‌ಜಿಒಗಳ ಜಂಟಿ ಕಾರ್ಯಾಚಾರಣೆ; ಮೂರು ವರ್ಷದಲ್ಲಿ ನಿರ್ಮೂಲನೆ ಗುರಿ

ಎಚ್.ಬಾಲಚಂದ್ರ
Published 14 ಜನವರಿ 2025, 0:30 IST
Last Updated 14 ಜನವರಿ 2025, 0:30 IST
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಆದಿವಾಸಿ ಮಹಿಳೆಯರು ಕಳೆಗಿಡಗಳನ್ನು ತೆರವುಗೊಳಿಸುತ್ತಿರುವುದು
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಆದಿವಾಸಿ ಮಹಿಳೆಯರು ಕಳೆಗಿಡಗಳನ್ನು ತೆರವುಗೊಳಿಸುತ್ತಿರುವುದು   

ಚಾಮರಾಜನಗರ: ಅರಣ್ಯ ಹಾಗೂ ವನ್ಯಜೀವಿಗಳ ಪಾಲಿಗೆ ಕಂಟಕವಾಗಿರುವ ಲಂಟಾನಾ, ಕರಿಕಡ್ಡಿ ಸಹಿತ ಹಲವು ಮಾದರಿಯ ಕಳೆಗಿಡಗಳನ್ನು ಹಂತಹಂತವಾಗಿ ನಿರ್ಮೂಲನೆ ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ಸ್ವಾಮಿ ವಿವೇಕಾನಂದ ಟ್ರಸ್ಟ್‌ ಮತ್ತು ಐಸಿಐಸಿಐ ಫೌಂಡೇಶನ್‌ ಕೈಜೋಡಿಸಿವೆ.

ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಅರಣ್ಯದ ಕೆ.ಗುಡಿ ವಲಯದಲ್ಲಿ ಪರಿಸರ ರಕ್ಷಣೆ ಹಾಗೂ ಆದಿವಾಸಿಗಳ ಸಬಲೀಕರಣದಲ್ಲಿ ತೊಡಗಿರುವ ಟ್ರಸ್ಟ್‌ ಹಾಗೂ ಮಲೆ ಮಹದೇಶ್ವರ ಬೆಟ್ಟದ ಕಾವೇರಿ ವನ್ಯಧಾಮದಲ್ಲಿ ಫೌಂಡೇಷನ್‌ ಕಳೆಗಿಡಗಳನ್ನು ತೆರವುಗೊಳಿಸುತ್ತಿದೆ. ಎರಡೂ ಅರಣ್ಯ ವ್ಯಾಪ್ತಿಯಲ್ಲಿ 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಳೆಗಿಡಗಳನ್ನು ತೆರವುಗೊಳಿಸಲಾಗಿದೆ.

ಕೆ.ಗುಡಿ ಅರಣ್ಯದಲ್ಲಿ ಟ್ರಸ್ಟ್‌ ತನ್ನದೇ ಆರ್ಥಿಕ ಸಂಪನ್ಮೂಲ ಬಳಸಿ ಜುಲೈನಿಂದ ಕೆಲಸ ಆರಂಭಿಸಿದ್ದು, ಮೂರು ವರ್ಷಗಳಲ್ಲಿ 300ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಳೆ ನಿರ್ಮೂಲನೆ ಗುರಿ ಹೊಂದಿದೆ.

ADVERTISEMENT

ಹಾಡಿಜನರಿಗೆ ಉದ್ಯೋಗ:

‘ಜೆಸಿಬಿ ಸೇರಿದಂತೆ ಬೃಹತ್ ಯಂತ್ರಗಳನ್ನು ಬಳಸಿದರೆ ಸ್ಥಳೀಯ ಸಸ್ಯ ಪ್ರಭೇದಗಳು, ಹುಲ್ಲುಗಾವಲು ಹಾಗೂ ಜೀವವೈವಿಧ್ಯತೆಗೆ ಹಾನಿಯಾಗುತ್ತದೆಂಬ ಕಾರಣಕ್ಕೆ, ಹಾಡಿಗಳ ಗಿರಿಜನರಿಗೇ ಉದ್ಯೋಗ ನೀಡಿ ಗುದ್ದಲಿ, ಕುಡುಗೋಲುಗಳಿಂದ ಕಳೆ ತೆರವು ಮಾಡಲಾಗುತ್ತಿದೆ. ಪ್ರತಿದಿನ 20 ಆದಿವಾಸಿಗಳು ಶ್ರಮ ವಹಿಸುತ್ತಿದ್ದಾರೆ’ ಎಂದು ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆಗಿಡಗಳನ್ನು ಭೂಮಿಯ ಮಟ್ಟಕ್ಕೆ ಕತ್ತರಿಸಿ ಬಿಸಾಡಿದರೆ ಮತ್ತೆ ಚಿಗುರಿ ಕಾಡಿನ ತುಂಬೆಲ್ಲ ವ್ಯಾಪಿಸುತ್ತದೆ. ಬೇರುಸಹಿತ ಕಿತ್ತು ಮತ್ತೆ ಭೂಮಿಗೆ ಸೇರದಂತೆ ನಾಶ ಮಾಡಲಾಗುತ್ತಿದೆ. ಇದು ನಿರಂತರವಾಗಿ ನಡೆದರೆ ಮಾತ್ರ ಹೆಚ್ಚು ಪರಿಣಾಮಕಾರಿ. ಹೀಗಾಗಿ ಮೂರು ವರ್ಷ ನಿರ್ದಿಷ್ಟ ಜಾಗದಲ್ಲಿಯೇ ಕಳೆಗಿಡಗಳನ್ನು ನಿರ್ಮೂಲನೆ ಮಾಡಲಾಗುತ್ತದೆ. ಕಿತ್ತ ಜಾಗದಲ್ಲಿ 22 ಜಾತಿಯ ಸ್ಥಳೀಯ ಹುಲ್ಲಿನ ಬೀಜಗಳನ್ನು ನೆಡಲಾಗುತ್ತಿದೆ. ಅದರಿಂದ ಸಸ್ಯಾಹಾರಿ ಪ್ರಾಣಿಗಳ ಮೇವಿನ ಕೊರತೆಯೂ ನೀಗುತ್ತದೆ’ ಎಂದು ತಿಳಿಸಿದರು.

ಆಹಾರ ಸರಪಳಿಗೆ ಅಡ್ಡಿ:

‘ಲಂಟಾನಾವನ್ನು ಜಿಂಕೆ, ಆನೆ ಸಹಿತ ಸಸ್ಯಹಾರಿ ಪ್ರಾಣಿಗಳು ತಿನ್ನುವುದಿಲ್ಲ. ಸ್ವಲ್ಪ ತೇವಾಂಶ ದೊರೆತರೂ ಹುಲುಸಾಗಿ ಪೊದೆಗಳಾಗಿ ಬೆಳೆಯುತ್ತವೆ. ಅವುಗಳ ನೆರಳಿನಲ್ಲಿ ಹುಲ್ಲು ಚಿಗುರುವುದಿಲ್ಲ. ಅದರಿಂದ ಕಾಡಿನಲ್ಲಿ ಆಹಾರ ಸರಪಳಿಗೆ ಬಲವಾದ ಪೆಟ್ಟುಬೀಳುತ್ತಿದ್ದು, ಮೇವಿನ ಕೊರತೆ ಎದುರಾಗುತ್ತದೆ’ ಎಂದು ಮಲೆ ಮಹದೇಶ್ವರ ಬೆಟ್ಟದ ಕಾವೇರಿ ವನ್ಯಧಾಮದ ಡಿಸಿಎಫ್‌ ಡಾ.ಕೆ.ಸಂತೋಷ್‌ ಕುಮಾರ್ ತಿಳಿಸಿದರು.

‘ಅದೇ ಕಾರಣದಿಂದ ಜಿಂಕೆ, ಆನೆ ಸೇರಿ ಹಲವು ಪ್ರಾಣಿಗಳು ಕಾಡಂಚಿನ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಾನವ – ಪ್ರಾಣಿ ಸಂಘರ್ಷವೂ ಹೆಚ್ಚಾಗುತ್ತಿದೆ. ಕಳೆಗಿಡಗಳನ್ನು ನಿರ್ಮೂಲನೆಗೊಳಿಸಿ ಸಮೃದ್ಧ ಮೇವು ಸಿಗುವಂತೆ ಮಾಡಿದರೆ ಸಂಘರ್ಷ ತಪ್ಪಿಸಬಹುದು’ ಎಂದು ಪ್ರತಿಪಾದಿಸಿದರು.

ಮಲ್ಲೇಶ್‌ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ
ಲಂಟಾನ ತೆರವು ಮಾಡುವ ವೇಳೆ ಯಂತ್ರಗಳ ಬಳಕೆಯನ್ನು ಸಾಧ್ಯವಾದಷ್ಟೂ ತಗ್ಗಿಸಿದ್ದು ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಡಾ.ಜಿ.ಸಂತೋಷ್ ಕುಮಾರ್ ಮಲೆ ಮಹದೇಶ್ವರ ಬೆಟ್ಟ ಕಾವೇರಿ ವನ್ಯಧಾಮದ ಡಿಸಿಎಫ್‌
ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಲಂಟಾನಾ ತೆರವಿಗೆ ಸ್ಥಳೀಯ ಬುಡಕಟ್ಟು ಸಮುದಾಯದವರನ್ನು ಬಳಸಿಕೊಳ್ಳಲಾಗಿದೆ.
ಶ್ರೀಪತಿ ಬಿಳಿಗಿರಿ ರಂಗನಬೆಟ್ಟ ವನ್ಯಜೀವಿ ಉಪ ವಿಭಾಗದ ಎಸಿಎಫ್

‘ಜಂಗಲ್‌ಸ್ಕೇಪ್ಸ್‌’ ತಾಂತ್ರಿಕ ನೆರವು

‘ಸ್ಥಳೀಯ ಸಸ್ಯ ಹಾಗೂ ಹುಲ್ಲಿನ ಪ್ರಬೇಧಗಳ ಗುರುತಿಸುವಿಕೆ ಹಾಗೂ ಕಳೆಗಿಡಗಳ ತೆರವಿಗೆ ಜಂಗಲ್‌ಸ್ಕೇಪ್ಸ್‌ ಸಂಸ್ಥೆಯು ತಾಂತ್ರಿಕ ನೆರವು ನೀಡುತ್ತಿದೆ’ ಎಂದು ವಿವೇಕಾನಂದ ಸೇವಾಟ್ರಸ್ಟ್‌ನ ಅಧ್ಯಕ್ಷ ಮಲ್ಲೇಶ್‌ ತಿಳಿಸಿದರು. ‘ಅರಣ್ಯ ಮತ್ತು ಜೀವವೈವಿಧ್ಯತೆಯ ಉಳಿವಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯ ನೆರವಿನಿಂದ ಲಂಟಾನಾ ಕಳೆ ತೆರವು ಕಾರ್ಯವು ಚುರುಕು ಪಡೆದಿದೆ’ ಎಂದರು.

ಅಂಕಿ–ಅಂಶ

ಬಿಆರ್‌ಟಿ ವ್ಯಾಪ್ತಿಗೊಳಪಡುವ ಅರಣ್ಯ;57482 ಹೆಕ್ಟೇರ್

ಮಲೆ ಮಹದೇಶ್ವರ ಬೆಟ್ಟ ವನ್ಯದಾಮ;91000 ಹೆಕ್ಟೇರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.