ಚಾಮರಾಜನಗರ: ಅವಿಭಜಿತ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಎರಡೂವರೆ ದಶಕಗಳು ಕಳೆದರೂ ಚಾಮರಾಜನಗರ ಜಿಲ್ಲೆಯಲ್ಲಿ ವ್ಯವಸ್ಥಿತವಾದ ಬೀದಿಗಳು ಇಲ್ಲದಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.
ನಗರ, ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿರುವ ಜನವಸತಿ ಪ್ರದೇಶಗಳು, ರಾಷ್ಟ್ರೀಯ ರಾಜ್ಯ, ಜಿಲ್ಲಾ ಹೆದ್ದಾರಿಗಳಲ್ಲಿ ಸಮರ್ಪಕ ಬೀದಿದೀಪಗಳ ವ್ಯವಸ್ಥೆ ಇಲ್ಲ. ‘ಬೆಳಕು’ ಕೊಡಬೇಕಾದ ಸ್ಥಳೀಯ ಆಡಳಿತಗಳು ಕಣ್ಮುಚ್ಚಿ ಕುಳಿತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಜಿಲ್ಲೆಗೆ ಮಾದರಿಯಾಗಿರಬೇಕಾದ ಜಿಲ್ಲಾ ಕೇಂದ್ರ ಚಾಮರಾಜನಗರವೇ ಕಗ್ಗತ್ತಿನಲ್ಲಿ ಮುಳುಗಿದೆ. ಹೊಸ ಬಡಾವಣೆಗಳಲ್ಲಿ ನಾಗರಿಕರು ರಾತ್ರಿಯ ಹೊತ್ತು ಹೊರಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ನಗರದೊಳಗೆ ಹಾದುಹೋಗಿರುವ ಹೆದ್ದಾರಿಗಳಲ್ಲಿ ಕತ್ತಲು ಕವಿದಿದೆ. ನಗರದಿಂದ ಮೈಸೂರು, ಕೊಳ್ಳೇಗಾಲ, ಸತ್ಯಮಂಗಲಕ್ಕೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಬೀದಿದೀಪಗಳೇ ಇಲ್ಲ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಅಚೇರಿಯಿಂದ ಆರಂಭವಾಗಿ ಹೆದ್ದಾರಿಗೆ ಸಂಪರ್ಕಿಸುವ ಸತ್ತಿ ರಸ್ತೆಯಲ್ಲಿ ರಾತ್ರಿಯ ಹೊತ್ತು ವಾಹನ ಚಾಲನೆ ಮಾಡುವುದೇ ಸವಾಲಾಗಿದೆ.
ಸಂಪೂರ್ಣ ಕತ್ತಲಿನಿಂದ ಕೂಡಿರುವ ಈ ರಸ್ತೆಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಅಪಘಾತಗಳು ಸಂಭವಿಸುತ್ತಲೇ ಇವೆ. ಎದುರಿಗೆ ಬರುವ ವಾಹನಗಳು ಕಾಣದಷ್ಟು ಇಲ್ಲಿ ಕತ್ತಲು ಆವರಿಸಿಕೊಂಡಿದೆ. ಭುವನೇಶ್ವರಿ ವೃತ್ತದಿಂದ ನಂಜನಗೂಡು ಮಾರ್ಗವಾಗಿ ಮೈಸೂರು ಸಂಪರ್ಕಿಸುವ ಹೆದ್ದಾರಿ ಹಾಗೂ ಸಂತೇಮರಹಳ್ಳಿ ಮಾರ್ಗವಾಗಿ ಕೊಳ್ಳೇಗಾಲ, ಟಿ.ನರಸೀಪುರ ಸಂಪರ್ಕಿಸುವ ಹೆದ್ದಾರಿಯ ಸ್ಥಿತಿಯೂ ಭಿನ್ನವಾಗಿಲ್ಲ.
ರಾತ್ರಿಯ ಹೊತ್ತು ಎದುರಿಗೆ ಬರುವ ವಾಹನಗಳು ಸೂಸುವ ಪ್ರಖರ ಬೆಳಕಿನಿಂದ ವಾಹನಗಳು ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಜಮೀನುಗಳಿಗೆ ನುಗ್ಗಿ ಅಪಘಾತಕ್ಕೀಡಾಗುತ್ತಿವೆ. ಅಪಾಯಕಾರಿ ತಿರುವುಗಳು, ಕಡಿದಾದ ರಸ್ತೆಗಳು, ಜಂಕ್ಷನ್‌ಗಳಲ್ಲೂ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲವಾಗಿದ್ದು ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿಗಳು ಇದುವರೆಗೂ ಬೀದಿದೀಪಗಳನ್ನೇ ಕಾಣದಿರುವುದು ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ. ಶಾಲಾ–ಕಾಲೇಜುಗಳು, ತಾಲ್ಲೂಕು ಪಂಚಾಯಿತಿ, ಅರಣ್ಯ ಇಲಾಖೆ, ಎಪಿಎಂಸಿ, ಕೆಎಸ್‌ಆರ್‌ಟಿಸಿ ಡಿಪೋ, ಚಿತ್ರಮಂದಿರ, ವಾಣಿಜ್ಯ ಮಳಿಗೆಗಳು ಇರುವ ಹೆದ್ದಾರಿಯಲ್ಲಿ ಕನಿಷ್ಠ ಬೀದಿದೀಪಗಳನ್ನು ಅಳವಡಿಕೆ ಮಾಡದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತೇಮರಹಳ್ಳಿ ಸರ್ಕಲ್‌ನಿಂದ ಕೊಳ್ಳೇಗಾಲಕ್ಕೆ ಸಂರ್ಪಕಿಸುವ ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಮುಂಭಾಗದ ರಸ್ತೆಗೆ ಕಂಬಗಳನ್ನು ಅಳವಡಿಕೆ ಮಾಡಲಾಗಿದ್ದರೂ ದೀಪಗಳನ್ನು ಅಳವಡಿಸಲು ಇದುವರೆಗೂ ಮುಹೂರ್ತ ಕೂಡಿಬಂದಿಲ್ಲ. ನಗರದ ಹೃದಯಭಾಗದಲ್ಲಿರುವ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಬೀದಿದೀಪಗಳಿದ್ದರೂ ಬೆಳಕು ಭೂಮಿ ತಲುಪುತ್ತಿಲ್ಲ.
ಅವೈಜ್ಞಾನಿಕವಾಗಿ ಅತಿ ಕಡಿಮೆ ಸಾಮರ್ಥ್ಯದ ಬಲ್ಪ್‌ಗಳನ್ನು ಇಲ್ಲಿ ಅಳವಡಿಕೆ ಮಾಡಿರುವುದರಿಂದ ಬೀದಿದೀಪಗಳು ಇದ್ದರೂ ಇಲ್ಲದಂತಹ ಪರಿಸ್ಥಿತಿ ಇದೆ. ಕೆಲವು ದೀಪಗಳು ಉರಿದರೆ, ಕೆಲವು ಮಂಕು ಕವಿದಿರುತ್ತವೆ, ಇನ್ನೂ ಕೆಲವು ಕೆಟ್ಟುನಿಂತಿವೆ. ನಗರದ ಡಿವೈಎಸ್‌ಪಿ ಕಚೇರಿ ಹಾಗೂ ಸುಲ್ತಾನ್ ಷರೀಫ್ ಸರ್ಕಲ್‌ನಲ್ಲಿ ಹಾಕಿರುವ ಹೈಮಾಸ್ಟ್ ದೀಪದಲ್ಲಿ ಅರ್ಧದಷ್ಟು ಬಲ್ಪ್‌ಗಳು ಉರಿಯುತ್ತಿಲ್ಲ.
ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ 100 ಮೀಟರ್ ಉದ್ದಕ್ಕೂ ಬೀದಿದೀಪಗಳಿಲ್ಲ. ಕರಿನಂಜನಪುರ ರಸ್ತೆ, ಬುದ್ಧ ನಗರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಬಡಾವಣೆ, ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲೂ ಬೀದಿದೀಪಗಳು ಉರಿಯುತ್ತಿಲ್ಲ. ಹೊಸ ಬಡಾವಣೆಗಳ ಸ್ಥಿತಿಯಂತೂ ಗಂಭೀರವಾಗಿದೆ.
ಹೆದ್ದಾರಿಯಲ್ಲಿ ಕಗ್ಗತ್ತಲು: ಹನೂರು ಕ್ಷೇತ್ರ ವ್ಯಾಪ್ತಿಯ ಮಧುವನಹಳ್ಳಿಯಿಂದ ಹನೂರು ಪಟ್ಟಣದವರೆಗೆ ಕೆಶಿಪ್ ಯೋಜನೆಯಡಿ ರಸ್ತೆ ಮಧ್ಯೆ ಅಳವಡಿಸುವ ಕಂಬಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ರಾತ್ರಿಯ ಹೊತ್ತು ರಾಜ್ಯ ಹೆದ್ದಾರಿ–79 ಕಗ್ಗತ್ತಲಿನಿಂದ ಆವೃತವಾಗಲಿದೆ.
ದೊಡ್ಡಿಂದುವಾಡಿ, ಕೊಂಗರಹಳ್ಳಿ, ಕಾಮಗೆರೆ, ಮಂಗಲ ಹಾಗೂ ಹನೂರು ಪಟ್ಟಣದಲ್ಲಿ ಹಾದುಹೋಗುವ ರಸ್ತೆ ನಿರ್ಮಾಣವಾಗಿ 1 ವರ್ಷ ಕಳೆದರೂ ಸೆಸ್ಕ್‌ನಿಂದ ವಿದ್ಯುತ್ ಸಂಪರ್ಕ ನೀಡಿಲ್ಲ. ಈ ರಸ್ತೆ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ, ರಾಜ್ಯ ಹೆದ್ದಾರಿಯಾಗಿರುವುದರಿಂದ ದಿನವಿಡೀ ಸಾವಿರಾರು ವಾಹನಗಳು ಸಂಚರಿಸುತ್ತಿವೆ.
ಬೆಳಕಿನ ಕೊರತೆಯಿಂದ ರಾತ್ರಿ ಹಲವು ಅಪಘಾತಗಳು ಸಂಭವಿಸಿವೆ. ಕೆಲವರು ಗಂಭೀರವಾಗಿ ಗಾಯಗೊಂಡರೆ ಹಲವರು ಪ್ರಾಣವನ್ನೇ ಬಿಟ್ಟಿದ್ದಾರೆ. ವಿದ್ಯುತ್ ಸಂಪರ್ಕ ನೀಡಲು ಇರುವ ಅಡೆತಡೆಗಳನ್ನು ನಿವಾರಿಸಿ ಬೆಳಕು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಯಳಂದೂರು ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಸಮಸ್ಯೆ ಗಂಭೀರವಾಗಿದೆ. ಕೆಲವೆಡೆ ದೀಪಗಳಿದ್ದು ಸ್ವಿಚ್ ಹಾಕುವುದಿಲ್ಲ, ಕಾಡಂಚಿನ ಗ್ರಾಮಗಳಲ್ಲಿ ಇಂತಹ ಸಮಸ್ಯೆ ಹೆಚ್ಚಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.
ಕೊಳ್ಳೇಗಾಲ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ದೀಪಗಳ ಸಮಸ್ಯೆ ಮಿತಿಮೀರಿದ್ದು ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ನಗರಸಭೆಯ ಕೆಲವು ಬಡಾವಣೆಗಳಲ್ಲಿ ಬೀದಿ ದೀಪಗಳ ಕೊರತೆ ಿದ್ದು ಕತ್ತಲಲ್ಲೇ ಸಂಚರಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪಗಳ ಸಮಸ್ಯೆ ಗಂಭೀರವಾಗಿದೆ.
ತಾಲ್ಲೂಕಿನ ಸಿದ್ದಯ್ಯನಪುರ, ಮಧುವನಹಳ್ಳಿ, ರಕ್ಕಸನ ಪಾಳ್ಯ, ಕುಣಗಳ್ಳಿ, ಸೂರಪುರ, ಉತ್ತಂಬಳ್ಳಿ, ಗೊಬ್ಬಳ್ಳಿಪುರ, ತೇರಂಬಳ್ಳಿ, ಕುಂತೂರು, ಸತ್ತೇಗಾಲ, ಸರಗೂರು, ಧನ ಗೆರೆ, ಗುಂಡೇಗಾಲ, ಪಾಳ್ಯ, ಚಿಕ್ಕಲ್ಲೂರು, ತೆಳ್ಳನೂರು, ಜಾಗೇರಿ, ಜಕ್ಕಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಬೀದಿ ದೀಪಗಳ ಕೊರತೆ ಇದೆ.
ಗ್ರಾಮೀಣ ಭಾಗಗಳಲ್ಲಿ ಕಾಡುಹಂದಿ, ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದ್ದು ವಿಷ ಜಂತುಗಳ ಭಯಕ್ಕೆ ರಾತ್ರಿ ಹೊತ್ತು ಜನರು ಮನೆಯಿಂದ ಹೊರಬರುತ್ತಿಲ್ಲ. ಸಮಸ್ಯೆಗಳಿಗೆ ಪಿಡಿಒಗಳು ಸ್ಪಂದಿಸುತ್ತಿಲ್ಲ, ಬಡಾವಣೆಗಳಲ್ಲೂ ಬೀದಿದೀಪಗಳ ವ್ಯವಸ್ಥೆ ಸರಿಯಾಗಿಲ್ಲ ಎಂದು ತೇರಂಬಳ್ಳಿ ಗ್ರಾಮದ ಪುರುಷೋತ್ತಮ್ ಪ್ರಜಾವಾಣಿಗೆ ತಿಳಿಸಿದರು.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ, ನಾ.ಮಂಜುನಾಥಸ್ವಾಮಿ, ಬಸವರಾಜು, ಮಲ್ಲೇಶ ಎಂ, ಮಹದೇವ್ ಹೆಗ್ಗವಾಡಿಪುರ
ರಸ್ತೆ ಮಧ್ಯೆದಲ್ಲಿ ಅಳವಡಿಸಿರುವ ಕಂಬಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದರ ಮೂಲಕ ಅಪಾಯಗಳನ್ನು ತಪ್ಪಿಸಬೇಕು.–ಯೋಗೇಶ್, ಕಾಮಗೆರೆ
ಸೋಮವಾರಪೇಟೆಯಿಂದ ಸಂತೇಮರಹಳ್ಳಿವೃತ್ತದವರೆಗೆ ಬೀದಿದೀಪಗಳ ಅಳವಡಿಕೆಗೆ ಸ್ಥಳೀಯ ಶಾಸಕರ ನಿಧಿಯಿಂದ ₹ 40 ಲಕ್ಷ ಟೆಂಡರ್ ಆಗಿದ್ದು ಶೀಘ್ರ ಬೀದಿದೀಪಗಳ ಅಳವಡಿಕೆ ಆರಂಭವಾಗಲಿದೆ. ಜೋಡಿ ರಸ್ತೆಗೆ ಕಳೆದ ದಸರಾದಲ್ಲಿ ಬಲ್ಬ್‌ಗಳನ್ನು ಹಾಕಲಾಗಿತ್ತು. ದುರಸ್ತಿಯಲ್ಲಿರುವ ಬೀದಿದೀಪಗಳನ್ನು ಬದಲಾಯಿಸಲಾಗುವುದು.–ಸುರೇಶ್, ನಗರಸಭೆ ಅಧ್ಯಕ್ಷ
ಕತ್ತಲಿನಲ್ಲಿ ಸಂಚಾರ ಸಂತೇಮರಹಳ್ಳಿಯಿಂದ ದೇಶವಳ್ಳಿಗೆ ಹೋಗುವ ಮುಖ್ಯರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ಕತ್ತಲೆಯಲ್ಲಿ ಸಾರ್ವಜನಿಕರು ತಿರುಗಾಡಬೇಕಾಗಿದೆ. ಮುಖ್ಯ ರಸ್ತೆಯಲ್ಲಿ ಕಂಬಗಳು ಮಾತ್ರ ಇದ್ದು ಬಲ್ಪ್‌ಗಳನ್ನು ಅಳವಡಿಸಿಲ್ಲ.–ಶ್ರೀನಿವಾಸ್, ದೇಶವಳ್ಳಿ ನಿವಾಸಿ
ಅವೈಜ್ಞಾನಿಕವಾಗಿ ಬೀದಿದೀಪ ಅಳವಡಿಕೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಬೀದಿ ದೀಪಗಳನ್ನು ಅಳವಡಿಸಿರುವುದರಿಂದ ರಸ್ತೆಗೆ ಸಮರ್ಪಕ ಬೆಳಕು ಬೀಳುತ್ತಿಲ್ಲ. ನೆಪಮಾತ್ರಕ್ಕೆ ಬೀದಿದೀಪಗಳು ಎಂಬಂತಾಗಿದೆ. ಕೆಲವು ಬಡಾವಣೆಯಗಳಲ್ಲಂತೂ ಬೀದಿ ದೀಪ ಕನಸಿನ ಮಾತಾಗದಿಎ. ಸಮಸ್ಯೆ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ ಅನುದಾನವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ.–ಭಾನುಪ್ರಕಾಶ್, ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.