ಚಾಮರಾಜನಗರ: ಜುಲೈ 10ರಂದು ನಗರದಲ್ಲಿ ಚಾಮರಾಜೇಶ್ವರ ಸ್ವಾಮಿಯ ಅದ್ದೂರಿ ರಥೋತ್ಸವ ನಡೆಯಲಿದೆ. ಆಷಾಢ ಮಾಸದಲ್ಲಿ ನಡೆಯುವ ಏಕೈಕ ತೇರು ಎಂಬ ವಿಶೇಷತೆ ರಥೋತ್ಸವಕ್ಕಿದ್ದು ತಯಾರಿಗಳು ಭರದಿಂದ ಸಾಗಿವೆ.
ದೇವಸ್ಥಾನದ ಹೊರ ಆವರಣಕ್ಕೆ ಸುಣ್ಣ ಬಳಿದು ಸಿಂಗಾರಗೊಳಿಸಲಾಗಿದೆ. ರಥ ಸಾಗುವ ರಸ್ತೆಯ ಗುಂಡಿ ಮುಚ್ಚಲಾಗಿದ್ದು ಚರಂಡಿ ಸ್ವಚ್ಛಗೊಳಿಸಲಾಗಿದೆ. ಪ್ರತಿವರ್ಷದಂತೆ ಬಂಡಿಕಾರ್ ಮಹೇಶ್ ನೇತೃತ್ವದಲ್ಲಿ ನುರಿತ ಕಾರ್ಮಿಕರ ತಂಡ ರಥ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ರಥೋತ್ಸವದ ಹೊತ್ತಿಗೆ ಬಣ್ಣ–ಬಣ್ಣದ ಬಾವುಟಗಳಿಂದ, ತಳಿರು ತೋರಣಗಳಿಂದ ರಥ ಸಿಂಗಾರಗೊಳ್ಳಲಿದೆ. ವಿವಿಧ ಕೋಮುಗಳ ಯಜಮಾನರು ಹಾಗೂ ಮುಖಂಡರು ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಧಿವಿಧಾನಗಳು ಆರಂಭ: ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು ಗುರುವಾರ ಮೃತ್ತಿಕಾ ಸಂಗ್ರಹಣೆ ನಡೆಯಿತು. ಹಲವು ಬಗೆಯ ಧಾನ್ಯಗಳನ್ನು ಮೊಳಕೆ ಕಟ್ಟಲಾಯಿತು. ರಥೋತ್ಸವದ ದಿನ ನಡೆಯುವ ಚೂರ್ಣೋತ್ಸವದಲ್ಲಿ ಬಲಿಪ್ರಧಾನ ಮಾಡುವ ಅನ್ನದ ಜೊತೆಗೆ ಮೊಳಕೆ ಕಾಳುಗಳನ್ನು ಬೆರೆಸಿ ರಥ ಸಾಗುವ ರಸ್ತೆಯ ಇಕ್ಕೆಗಳಲ್ಲಿ ಹಾಕಲಾಗುತ್ತದೆ.
ಶುಕ್ರವಾರ ಬೆಳಿಗ್ಗೆ ಅಭಿಜಿನ್ ಮಹೂರ್ತದಲ್ಲಿ ಧ್ವಜಾರೋಹಣ ನೆರವೇರಿತು. ನಂತರ ನಡೆದ ಭೇರಿತಾಡನ ಪ್ರಕ್ರಿಯೆಯಲ್ಲಿ ದೇವತೆಗಳ ಆಹ್ವಾನ, ದೇವರ ವಿಗ್ರಹ, ಬಲಿಪೀಠ ಹಾಗೂ ಪೂಜಾ ಪರಿಕರಗಳಿಗೆ ಕಂಕಣ ಕಟ್ಟುವ ಸಂಪ್ರದಾಯ ನೆರವೇರಿತು. ಈಶ್ವರನಿಗೆ ಪ್ರಿಯವಾದ ಪೇರಿ ಕಂಕಣ ಪ್ರಧಾನ ನಡೆಯಿತು.
ಆಷಾಢ ಮಾಸದ ತೇರಿನ ವಿಶೇಷ: ಆಷಾಢ ಮಾಸದಲ್ಲಿ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನೆಯಾಗಿರುವುದರಿಂದ ಆಷಾಢದಲ್ಲಿಯೇ ರಥೋತ್ಸವ ನಡೆಯುತ್ತದೆ. ಮೈಸೂರು ಮಹಾರಾಜರ ಜನ್ಮನಕ್ಷತ್ರವೂ ಪೂರ್ವಾಷಢವಾಗಿದ್ದು ಆಷಾಢ ಮಾಸವನ್ನು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.
ಮೂರು ರಥಗಳು: ಗಣಪತಿ, ಚಂಡಿಕೇಶ್ವರನ ಉತ್ಸವ ಮೂರ್ತಿಗಳನ್ನೊತ್ತ ಚಿಕ್ಕ ರಥ ರಥೋತ್ಸವದಲ್ಲಿ ಮುಂದೆ ಸಾಗಿದರೆ, ಚಾಮರಾಜೇಶ್ವರನ ಉತ್ಸವ ಮೂರ್ತಿಯನ್ನೊತ್ತ ದೊಡ್ಡ ರಥ ಮಧ್ಯೆ ಇರಲಿದೆ. ಹಿಂಭಾಗದಲ್ಲಿ ಕೆಂಪನಂಜಾಭಾ (ಪಾರ್ವತಿ) ಉತ್ಸವ ಮೂರ್ತಿ ಪ್ರತಿಷ್ಠಾಪಿತ ರಥ ಸಾಗಲಿದೆ.
ರಥೋತ್ಸವ ಆರಂಭಕ್ಕೂ ಮುನ್ನ ಮೈಸೂರು ಅರಸರ ಪಂಚಲೋಹದ ವಿಗ್ರಹಗಳನ್ನು ತೇರಿನ ಅಭಿಮುಖವಾಗಿ ಇರಿಸಲಾಗುತ್ತದೆ. ಚಾಮರಾಜೇಶ್ವರನಿಗೆ ಮಹಾರಾಜರ ಕುಟುಂಬದಿಂದ ಮೊದಲ ಪೂಜೆ ಸಲ್ಲಿಕೆಯಾಗಬೇಕು ಎಂಬುದು ಈ ಸಂಪ್ರದಾಯ. ಎಲ್ಲ ಕೋಮುಗಳ ಮುಖಂಡರು ಪೂಜೆ ಸಲ್ಲಿಸಿದ ನಂತರ ರಥ ಮುಂದಕ್ಕೆ ಸಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಾರದ್ವಾಜ್ ‘ಪ್ರಜಾವಾಣಿ’ಗೆ ವಿವರ ನೀಡಿದರು.
ಜೋಡಿಹಕ್ಕಿಗಳ ಕಲರವ: ಜ್ಯೇಷ್ಠ ಮಾಸದಲ್ಲಿ ವಿವಾಹವಾಗಿ ಆಷಾಢ ಮಾಸದಲ್ಲಿ ಪ್ರತ್ಯೇಕಗೊಳ್ಳುವ ನವದಂಪತಿಗಳು ಚಾಮರಾಜೇಶ್ವರನ ರಥದಲ್ಲಿ ಒಂದಾಗುವುದು ವಿಶೇಷ. ಒಬ್ಬರನ್ನೊಬ್ಬರ ಕೈಹಿಡಿದು ರಥಕ್ಕೆ ಹಣ್ಣು, ಜವನ ತೂರುವ ದೃಶ್ಯಗಳನ್ನು ನೋಡುವುದೇ ಚೆಂದ. ನವಜೋಡಿಗಳು ಮಕ್ಕಳ ಸಂತಾನಕ್ಕಾಗಿ ದೇವರಲ್ಲಿ ಹರಕೆ ಕಟ್ಟಿಕೊಳ್ಳುವುದು ರೂಢಿ. ಶೃಂಗೇರಿ ಶ್ರೀಗಳಿಂದ ಅನುಗ್ರಹಿತವಾಗಿರುವ ಸಾಲಿಗ್ರಾಮ ಶಿಲೆಯ ನರ್ಮಾದಾ ಲಿಂಗವನ್ನು ಮೈಸೂರು ಅರಸರು ಪ್ರತಿಷ್ಠಾಪಿಸಿದ್ದು ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಹೊಂದಿದೆ ಎಂಬ ನಂಬಿಕೆ ಗಟ್ಟಿಯಾಗಿದೆ. ಮಕ್ಕಳ ಚಾಮರಾಜೇಶ್ವರ ಎಂದೇ ಪ್ರಸಿದ್ಧಿಯಾಗಿರುವುದರಿಂದ ರಥೋತ್ಸವದಲ್ಲಿ ನವದಂಪತಿಗಳು ಹೆಚ್ಚಾಗಿ ಭಾಗವಹಿಸುತ್ತಾರೆ ಎಂದು ಅರ್ಚಕರು ತಿಳಿಸಿದರು.
ಜುಲೈ 5ರಂದು ಚಂದ್ರಮಂಡಲಾರೋಹಣೋತ್ಸವ 6ರಂದು ಅನಂತ ಪೀಠಾರೋಹಣೋತ್ಸವ 7 ರಂದು ಪುಷ್ಪಮಂಟಪಾರೋಹಣೋತ್ಸವ 8ರಂದು ವೃಷಭಾರೋಹಣೋತ್ಸವ 9ರಂದು ವಸಂತೋತ್ಸವ ಪೂರ್ವಕ ಗಜವಾಹನೋತ್ಸವ ನಡೆಯಲಿದೆ. 10ರಂದು ಪೂರ್ವಾಷಾಢ ನಕ್ಷತ್ರದಲ್ಲಿ ಕನ್ಯಾಲಘ್ನದಲ್ಲಿ ಬೆಳಿಗ್ಗೆ 11.30 ರಿಂದ 12.15ರೊಳಗೆ ಸಲ್ಲುವ ಮುಹೂರ್ತದಲ್ಲಿ ಚಾಮರಾಜೇಶ್ವರ ರಥೋತ್ಸವ ನಡೆಯಲಿದೆ. ನಂತರ ಹಂಸಾರೋಹಣಾ ನಟೇಶೋತ್ಸವ ಜರುಗಲಿವೆ. 11ರಂದು ಮೃಗಯಾತ್ರಾ ಪೂರ್ವಕ ಅಶ್ವಾರೋಹಣ ಮಹಾಭೂತಾರೋಹಣ ದೇವಿಪ್ರಣಯ ಕಲಪ ಸಂಧಾನೋತ್ಸವ 12ರಂದು ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ ದ್ವಜಾರೋಹಣ ಮೌನಬಲಿ 13ರಂದು ಪುಷ್ಪಯೋಗ ಪೂರ್ವಕ ಕೈಲಾಸಯಾನಾರೋಹಣೋತ್ಸವ ಹಾಗೂ 14ರಂದು ಮಹಾಸಂಪ್ರೋಕ್ಷಣಾ ಪೂರ್ವಕ ನಂದಿವಾಹನೋತ್ಸವ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.