ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ದಸರಾ ಮಹೋತ್ಸವ ನಡೆಯುತ್ತಿಲ್ಲ; ಬದಲಾಗಿ ಜನಪದ ಕಲಾ ಉತ್ಸವ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, 2013ರಿಂದಲೂ ಜಿಲ್ಲೆಯಲ್ಲಿ ಆಚರಿಸಿಕೊಂಡು ಬರಲಾಗಿದ್ದ ದಸರಾ ಮಹೋತ್ಸವ ಈ ವರ್ಷ ನಡೆಯುತ್ತಿಲ್ಲವಾದರೂ ಜನಪದ ಕಲೋತ್ಸವವನ್ನು ಆಚರಿಸೋಣ ಎಂದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಈಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರೆತಿದೆ. ₹ 15 ಕೋಟಿ ಅನುದಾನದಲ್ಲಿ ಈಜು ಕೊಳ, ಕ್ರೀಡಾಂಗಣ ಕಟ್ಟಡ ಕಾಮಗಾರಿ ಸೇರಿದಂತೆ ಕ್ರೀಡಾಕೂಟಗಳ ಆಯೋಜನೆಗೆ ಪೂರಕವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದ್ದು ವರ್ಷದೊಳಗೆ ಪೂರ್ಣಗೊಳ್ಳಲಿವೆ. ಮೈಸೂರು ಹೊರತುಪಡಿಸಿದರೆ ಜಿಲ್ಲೆಯ ಕ್ರೀಡಾಂಗಣ ಉತ್ತಮವಾಗಿದ್ದು ಮತ್ತಷ್ಟು ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕರು ಹೇಳಿದರು.
ತಾಲ್ಲೂಕು ಮಟ್ಟದ ದಸರಾ ಮಹೋತ್ಸವದಲ್ಲಿ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿ ಜಿಲ್ಲಾ, ವಿಭಾಗೀಯ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು. ಯುವಜನತೆ ಓದಿನಷ್ಟೆ ಕ್ರೀಡೆಯತ್ತ ಒಲವು ತೋರಿಸಬೇಕು, ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿದೆ. ಕ್ರೀಡೆ ಶಿಕ್ಷಣದ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ಚಂದ್ರು, ಬಿಇಒ ಹನುಮ ಶೆಟ್ಟಿ, ಚಾಮರಾಜನಗರ ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಕಾಂತರಾಜು, ಕ್ರೀಡಾಪಟು ಶ್ರೀನಿವಾಸ್ ಪ್ರಸಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.