
ಚಾಮರಾಜನಗರ: ವನ್ಯಜೀವಿಗಳು ಹಾಗೂ ಅರಣ್ಯ ಸಂಪತ್ತು ಉಳಿಯಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ರಂಗಕರ್ಮಿ ಅಬ್ರಾಹಂ ಡಿಸಿಲ್ವಾ ಒತ್ತಾಯಿಸಿದರು.
ಸಂಜೀವಿನಿ ಟ್ರಸ್ಟ್, ಪರಿಸರ ಸಂರಕ್ಷಣಾ ಗತಿ ವಿಧಿ ಪ್ರತಿಷ್ಠಾನ ಹಾಗೂ ಹಸಿರುಪಡೆಯ ವತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಂಡೀಪುರ ರಕ್ಷಿಸಿ ಅಭಿಯಾನದಲ್ಲಿ ಮಾನತಾಡಿದ ಅವರು, ಗುಂಡ್ಲುಪೇಟೆಯಿಂದ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂಡೀಪುರ ಅಭಯಾರಣ್ಯದೊಳಗೆ ಹಾದುಹೋಗಿದ್ದು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ರಾತ್ರಿಗಳ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವನ್ಯಜೀವಿಗಳ ಉಳಿವಿನ ದೃಷ್ಟಿಯಿಂದ ನಿರ್ಧಾರ ಸಮಂಜಸವಾಗಿದೆ. ಆದರೆ, ಕೇರಳ ಸರ್ಕಾರ ಅಲ್ಲಿನ ಉದ್ಯಮಿಗಳ ಲಾಬಿಗಿ ಮಣಿದು ರಾತ್ರಿ ವಾಹನಗಳ ಸಂಚಾರ ನಿರ್ಬಂಧ ತೆರವಿಗೆ ಪ್ರಯತ್ನಿಸುತ್ತಲೇ ಇದೆ. ಅರಣ್ಯದೊಳಗೆ ಮೇಲ್ಸೇತುವೆಗಳ ನಿರ್ಮಾಣ ಪ್ರಸ್ತಾವ ತಿರಸ್ಕೃತವಾದ ಬಳಿಕ ಸುರಂಗ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವ ಮುಂದಿರಿಸಿದೆ ಎಂದರು.
ಪರಿಸರ ಹಾಗೂ ವನ್ಯಜೀವಿಗಳಿಗೆ ಕುತ್ತಾಗಿರುವ ಸುರಂಗ ಮಾರ್ಗ ಯೋಜನೆ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು. ರಾತ್ರಿ ವಾಹನಗಳ ಸಂಚಾರ ನಿರ್ಬಂಧ ಮುಂದುವರಿಸಬೇಕು ಎಂದರು.
ಉದ್ಯಮಿ ಶ್ರೀನಿಧಿ ಕುದರ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಶೇ 51ರಷ್ಟು ಅರಣ್ಯ ಸಂಪತ್ತು ಹೊಂದಿದ್ದು ಶುದ್ಧ ಗಾಳಿ, ಪರಿಸರ ಹಾಗೂ ಅತಿ ಹೆಚ್ಚು ಹುಲಿಗಳ ಆವಾಸತಾಣವಾಗಿಯೂ ದೇಶದ ಗಮನ ಸೆಳೆದಿದೆ. ಎರಡು ಹುಲಿ ಸಂರಕ್ಷಿತ ಪ್ರದೇಶ, ಎರಡು ವನ್ಯಜೀವಿಧಾಮಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಪರಿಸರಕ್ಕೆ ವಿರುದ್ಧವಾದ, ಪ್ರಾಣಿಗಳ ಜೀವಕ್ಕೆ ಕಂಟಕವಾದ ಯೋಜನೆಗಳನ್ನು ಜಾರಿಗೊಳಿಸಬಾರದು ಎಂದರು.
ಬಂಡೀಪುರ ಅರಣ್ಯವು ಪರಿಸರ ಸೂಕ್ಷ್ಮವಾಗಿದ್ದು ಜೀವವೈವಿಧ್ಯಗಳ ನೆಲೆಯಾಗಿದೆ. ಸುರಂಗ ಮಾರ್ಗದಂತಹ ಅಪಾಯಕಾರಿ ಯೋಜನೆಗಳು ಜಾರಿಯಾದರೆ ಪರಿಸರ ಅಸಮತೋಲನದಿಂದ ಭೂಕುಸಿತದಂತಹ ಅವಘಡಗಳು ಸಂಭವಿಸಲಿವೆ. ಕೇರಳದ ವಯನಾಡ್ ಹಾಗೂ ಹಾಸನ, ಕೊಡುಗೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸುತ್ತಿರುವುದು ಎಚ್ಚರಿಕೆಯ ಕರೆಗಂಟೆಯಾಗಬೇಕು ಎಂದು ಹೇಳಿದರು.
ಮುಂದಿನ ಪೀಳಿಗೆಗೆ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಉಳಿಸಿ ಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು, ಆಳುವ ಸರ್ಕಾರಗಳು ಪರಿಸರ ಉಳಿಸುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಪಿವೈಎಸ್‌ಎಸ್‌ನ ಸುರೇಶ್, ರೋಟರಿ ಸಿಲ್ಕ್ ಸಿಟಿ ಕಾರ್ಯದರ್ಶಿ ಸಂತೋಷ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಹಸಿರುಪಡೆಯ ಅಧ್ಯಕ್ಷೆ ಅಕ್ಷತಾ ಎಸ್.ಜೈನ್, ಪ್ರಮುಖರಾದ ಗೌರಿ ರಾಮಕೃಷ್ಣ, ಜಯಶ್ರೀ, ನಂದಿನಿ, ಜ್ಯೋತಿ. ಹಾಗೂ ಸಂಜೀವಿನಿ ಟ್ರಸ್ಟ್ ಕಾರ್ಯದರ್ಶಿ ಹಸಿರುಪಡೆ ಸಂಸ್ಥಾಪಕ ಸತೀಶ್ ಕುಮಾರ್ ಹಾಗೂ ಮಕ್ಕಳು ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.