
ಚಾಮರಾಜನಗರ: ಗ್ರಾಮೀಣ ಭಾಗದ ಸಾಹಿತ್ಯ ಪ್ರತಿಭೆಗಳಿಗೆ ವೇದಿಕೆ ಹಾಗೂ ಪ್ರೋತ್ಸಾಹ ದೊರೆತರೆ ಹೆಚ್ಚೆಚ್ಚು ಕೃತಿಗಳು ಹೊರಬರಲಿವೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.
ನಗರದ ರೋಟರಿ ಭವನದಲ್ಲಿ ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗದ 25ನೇ ವಾರ್ಷಿಕೋತ್ಸವ ಹಾಗೂ ಲೇಖಕಿ ಗುರುಲಿಂಗಮ್ಮ ನಾಗೇಂದ್ರ ಅವರ ‘ತಿರುವುಗಳು’ ಸಣ್ಣ ಕಥೆಗಳ ಸಂಕಲನ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ನಂಜೇದೇವನಪುರದಲ್ಲಿ ಜನಿಸಿದ ಗುರುಲಿಂಗಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿ ಮಕ್ಕಳ ಕಲಿಕೆಯಲ್ಲಿ ಸಂತಸ ಕಾಣುತ್ತಿದ್ದಾರೆ. ಇದರೊಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಕಾದಂಬರಿ, ಕವಿತೆ ಹಾಗೂ ಕಥೆ ಸಂಕಲನವನ್ನು ಹೊರತಂದಿದ್ದಾರೆ. ಸಂಘ ಸಂಸ್ಥೆಗಳಲ್ಲೂ ಒಡನಾಟ ಹೊಂದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹರಸಿದರು.
ಸಾಹಿತಿ ಬಿ.ಎಸ್.ವಿನಯ್ ಮಾತನಾಡಿ, ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗ ಹಲವು ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಲೇಖಕಿ ಗುರುಲಿಂಗಮ್ಮ ಹುಟ್ಟಿಬೆಳೆದ ಗ್ರಾಮೀಣ ಪರಿಸರ, ನೆರೆಯವರ ಜೊತೆಗಿನ ಒಡನಾಟ, ಕಷ್ಟ ಕಾರ್ಪಣ್ಯದ ದಿನಗಳು, ಸವಾಲುಗಳನ್ನು ಎದುರಿಸಿದ ಬಗೆಯನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.
ಮಹಿಳೆ ಹತಾಶಳಾಗದೆ ಆಶಾವಾದಿಯಾದಾಗ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನಿರೂಪಿಸಿದ್ದಾರೆ, ಅವರಿಂದ ಇನ್ನಷ್ಟು ಸಾಹಿತ್ಯ ರಚನೆಯಾಗಲಿದ ಎಂದು ಆಶಿಸಿದರು.
ಕೃತಿ ಕುರಿತು ಮಾತನಾಡಿದ ಪ್ರಾಂಶುಪಾಲೆ ಸವಿತಾ ಮೂಡ್ನಾಕೂಡು, ‘ಕೃತಿಯಲ್ಲಿ ಹಳ್ಳಿ ಬದುಕು ಚಿತ್ರಣವಾಗಿದ್ದು ಮಹಿಳೆಯರ ಕುರಿತಾಗಿ ವಿಚಾರಗಳ ಪ್ರಸ್ತಾಪವಿದೆ. ಮಹಿಳೆಯರ ಬದುಕಿನ ಮನೋಧರ್ಮವೇ ಕಥೆಗಳ ಮನೋಧರ್ಮವಾಗಿ ಸಂಕಲನದಲ್ಲಿ ಕಥೆಗಳಾಗಿವೆ ಮೂಡಿಬಂದಿವೆ ಎಂದರು
ಕಥಾ ಸಂಕಲನದಲ್ಲಿ ಆಶಾವಾದ ಮುಖ್ಯ ವಿಷಯವಸ್ತುವಾಗಿದೆ. ಮಧ್ಯಮ ಹಾಗೂ ಬಡ ವರ್ಗದ ತಾಕಲಾಟಗಳು ಕಥೆಗಳಿದ್ದು ಭಾಷೆಯೂ ಸರಳವಾಗಿದೆ. ಓದುವ ಆಸಕ್ತಿ ಕ್ಷೀಣಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಬದುಕಿನುದ್ದಕ್ಕೂ ಎದುರಾಗುವ ತಿರುವುಗಳನ್ನು ಅಕ್ಷರ ರೂಪದಲ್ಲಿ ಹೊರತಂದಿರುವ ಲೇಖಕರ ಚಿಂತನೆ ಅರ್ಥಪೂರ್ಣವಾಗಿದೆ ಎಂದರು.
ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಸಣ್ಣ ಕಥೆಗಳನ್ನು ಬರೆಯುವುದು ಸುಲಭವಲ್ಲ, ಗುರುಲಿಂಗಮ್ಮ ಮಹಿಳೆಯರ ಅನುಭವಗಳನ್ನು ಕಥೆಗಳಲ್ಲಿ ಶಕ್ತಿಯುತವಾಗಿ ಚಿತ್ರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ಎಸ್.ಬನಶಂಕರ ಆರಾಧ್ಯ, ಲೇಖಕಿ ಎನ್.ಎಸ್.ಗುರುಲಿಂಗಮ್ಮ, ಸಾಹಿತಿ ಸ್ವಾಮಿ ಪೊನ್ನಾಚಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಅವರನ್ನು ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಕವಿಗೋಷ್ಠಿ ನಡೆಯಿತು. ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ನಿರಂಜನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಧ್ಯಕ್ಷ ಚಂದ್ರಶೇಖರ್, ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಬಳಗದ ಗೌರವ ಮಹಾಪೋಷಕ ಎ.ಎಂ.ನಾಗಮಲ್ಲಪ್ಪ, ಕಾರ್ಯದರ್ಶಿ ಮಾ.ಮಹೇಶ್, ನಾಗೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.