
ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ಮೂರನೇ ದಿನವಾದ ಸೋಮವಾರ ದೊಡ್ಡವರ ಸೇವೆ, ಮುಡಿಸೇವೆ, ನೀಲಗಾರರ ದೀಕ್ಷೆ ಆಚರಣೆಗಳು ವಿಧಿ ವಿಧಾನಗಳೊಂದಿಗೆ ಅದ್ದೂರಿಯಾಗಿ ನಡೆದವು.
ರಾಜ್ಯದ ವಿವಿಧ ಜಿಲ್ಲೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಭಕ್ತರು ಸಮೂಹ ದೇವಸ್ಥಾನದ ಮುಂದೆ ಧೂಪ, ಸಾಮ್ರಾಣಿ, ಕರ್ಪೂರ, ಹಣ್ಣು ಕಾಯಿ, ಉರುಳು ಸೇವೆ ಸೇರಿದಂತೆ ಅನೇಕ ಧಾರ್ಮಿಕ ಪದ್ಧತಿಯನ್ನು ಸಮರ್ಪಿಸಿದರು. ಸುಡುಬಿಸಿಲನ್ನು ಲೆಕ್ಕಿಸದೆ ನೆಲದಲ್ಲಿ ಉರುಳುಸೇವೆ ಮಾಡಿ ದೇವರ ದರ್ಶನಕ್ಕೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಸಿದ್ದಪ್ಪಾಜಿಯ ದರ್ಶನ ಪಡೆದರು.
ಮುಡಿ ಸೇವೆ ಅಂಗವಾಗಿ ಈ ಬಾರಿ ಸಾವಿರಾರು ಭಕ್ತರು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ತಮ್ಮ ಹರಕೆ ತೀರಿಸಿದರು. ಗಂಡು-ಹೆಣ್ಣು ಎಂಬ ಭೇದಭಾವ ತೋರದೇ ಅನೇಕ ಭಕ್ತರು ತಮ್ಮ ಕಷ್ಟಗಳು ನೆರವೇರಿಸಲಿ ಎಂಬುದಕ್ಕೆ ಮುಡಿ ಮಾಡಿಸಿದರು. ಕೆಲವು ಭಕ್ತರು ತಮ್ಮ ಮಕ್ಕಳಿಗೆ ನೀಲಗಾರ ದೀಕ್ಷೆ ಗುಡ್ಡದ ಬಿಡಿಸುವುದು ಕೊಡಿಸಿ ತಮ್ಮ ಹರಕೆ ಸಲ್ಲಿಸಿ, ಕಾಣಿಕೆ ಸಲ್ಲಿಸಿದರು. ಮಕ್ಕಳು, ಯುವಕರು ಹೆಚ್ಚಾಗಿ ನೀಲಗಾರರ ದೀಕ್ಷೆ ಕಾರ್ಯವನ್ನು ಬೇರೆ ಗ್ರಾಮಗಳಿಂದ ಬಂದಿದ್ದ ಭಕ್ತರು ಕುಟುಂಬಸಮೇತ ಹರಕೆ ತೀರಿಸಿದರು.
ಜಾತ್ರೆಯಲ್ಲಿ ವ್ಯಾಪಾರ ಜೋರು:
ಮೊದಲ ದಿನವಾದ ಚಂದ್ರಮಂಡಲದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿ ಯಶಸ್ವಿಗೊಳಿಸಿದರು. ಆದರೆ ಮೂರನೇ ದಿನವಾದ ಸೋಮವಾರ ಕಳೆದ ವರ್ಷ ಹೋಲಿಸಿದರೆ ಈ ವರ್ಷ ಜಾತ್ರೆಯಲ್ಲಿ ಜನ ಹೆಚ್ಚಾಗಿದ್ದಾರೆ. ನೂರಾರು ಅಂಗಡಿಗಳನ್ನು ಜಾತ್ರೆಯಲ್ಲಿ ಇಟ್ಟಿದ್ದಾರೆ ವ್ಯಾಪಾರವು ಜೋರಾಗಿ ಅಂಗಡಿಗಳ ಮಾಲೀಕರ ಮೊಗದಲ್ಲಿ ಮಂದಹಾಸ ಕಾಣುತ್ತಿತ್ತು.
ಚೆಕ್ ಪೋಸ್ಟ್ ಬಿಗಿ ಭದ್ರತೆ:
ನಾಳೆ ನಾಲ್ಕನೇ ದಿನವಾದ ಪಂಕ್ತಿ ಸೇವೆ ಇರುವ ಕಾರಣ ಪೊಲೀಸರು ಪ್ರತಿಯೊಂದು ವಾಹನಗಳನ್ನೂ ಸಹ ತಪಾಸಣೆ ಮಾಡಿ ಬಿಡುತ್ತಿದ್ದಾರೆ. ಪ್ರಾಣಿಬಲಿ ನಿಷೇಧದ ನಿಮಿತ್ತ ಪೊಲೀಸರು 7 ಚೆಕ್ ಪೋಸ್ಟ್‌ಗಳಲ್ಲಿ ಹದ್ದಿನ ಕಣ್ಣು ಇಟ್ಟಿದ್ದಾರೆ. 15 ಮಂದಿ ಸೆಕ್ಟರ್ ಅಧಿಕಾರಿಗಳು ಸಹ ಜಾತ್ರಾ ಆವರಣದಲ್ಲಿ ಪ್ರಾಣಿ ಬಲಿ ನಿಷೇಧ ಜಾಗೃತಿಯನ್ನು ಸಹ ಮೂಡಿಸುತ್ತಿದ್ದಾರೆ. ಪ್ರಾಣಿ ದಯಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಸಹ ಕೊಳ್ಳೇಗಾಲ ಸೇರಿದಂತೆ ಜಾತ್ರಾ ಆವರಣದಲ್ಲಿ ಪ್ರಾಣಿ ಬಲಿ ಜಾಗೃತಿ ಮೂಡಿಸುತ್ತಿದ್ದಾರೆ.
‘ಜಾತ್ರಾ ಆವರಣದಲ್ಲಿ ಹಣ ಕಟ್ಟಿ ಜೂಜಾಟವಾಡುವ ಆಟದ ಅಂಗಡಿಗಳು ರಸ್ತೆ ಮುಂದೆ ಇದ್ದರೂ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಇದರ ಬಗ್ಗೆ ಕ್ರಮ ವಹಿಸಿಲ್ಲ. ಜಾತ್ರೆಗೆ ಬರುವ ಭಕ್ತರು ಹಣ ಕಳೆದುಕೊಳ್ಳುತ್ತಿದ್ದಾರೆ. ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು’ ಎಂದು ಭಕ್ತ ರಮೇಶ್ ಪ್ರಜಾವಾಣಿಗೆ ತಿಳಿಸಿದರು.
ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧದ ಜಾಗೃತಿ ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ ಭಕ್ತರು 7 ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ
ದೇವಸ್ಥಾನದ ಸುತ್ತಮುತ್ತ ಬಿಡಾರ ಪ್ರತಿ ವರ್ಷ ಲಕ್ಷಾಂತರ ಮಂದಿ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಕುಟುಂಬ ಸಮೇತವಾಗಿ ಬಂದು ಐದು ದಿನ ಖಾಸಗಿ ಜಮೀನಿನಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತಲಿನ ಆವರಣದಲ್ಲಿ ಬೀಡಾರಗಳನ್ನು ಕಟ್ಟಿಕೊಂಡು ಅಡುಗೆ ಮಾಡಿಕೊಂಡು ಜಾತ್ರೆ ಮುಕ್ತಾಯವಾದ ಬಳಿಕ ಊರಿಗೆ ಹೋಗುವುದು ಸಂಪ್ರದಾಯ. ಹಾಗಾಗಿ ಎತ್ತ ನೋಡಿದರೂ ಅತ್ತ ಬಿಡಾರಗಳೇ ಕಾಣುತ್ತಿವೆ. ಕತ್ತಲು ಬಿಸಿಲು ಗಾಳಿ ಇಬ್ಬನಿ ಧೂಳು ಇವೆಲ್ಲವನ್ನೂ ಲೆಕ್ಕಿಸದೆ ಜಾತ್ರೆಯನ್ನು ಮುಗಿಸಿಕೊಂಡು ಹೊರಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.