ADVERTISEMENT

ಕೊಳ್ಳೇಗಾಲ: ಜೆಡಿಎಸ್‌ ಟಿಕೆಟ್‌ಗಾಗಿ ಪೈಪೋಟಿ

ಘೋಷಣೆಯಾಗದ ಅಭ್ಯರ್ಥಿ, ಓಲೆ ಮಹದೇವ, ಪುಟ್ಟಸ್ವಾಮಿ ಬೆಂಬಲಿಗರ ಚಡಪಡಿಕೆ

ಅವಿನ್ ಪ್ರಕಾಶ್
Published 15 ಮಾರ್ಚ್ 2023, 21:15 IST
Last Updated 15 ಮಾರ್ಚ್ 2023, 21:15 IST
ಬಿ.ಪುಟ್ಟಸ್ವಾಮಿ
ಬಿ.ಪುಟ್ಟಸ್ವಾಮಿ   

ಕೊಳ್ಳೇಗಾಲ: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ಗಾಗಿ ಓಲೆ ಮಹದೇವ ಮತ್ತು ಬಿ.ಪುಟ್ಟಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ವರಿಷ್ಠರು ಇನ್ನೂ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ. ಇದರಿಂದಾಗಿ ಇಬ್ಬರ ಬೆಂಬಲಿಗರು ಮತ್ತು ಅಭಿಮಾನಿಗಳಲ್ಲಿ ಚಡಪಡಿಕೆ ಆರಂಭವಾಗಿದೆ.

ಬಿಜೆಪಿ ಅಭ್ಯರ್ಥಿ ಅಂತಿಮವಾಗದಿದ್ದರೂ, ಹಾಲಿ ಶಾಸಕ ಎನ್‌.ಮಹೇಶ್‌ಗೆ ಟಿಕೆಟ್‌ ಸಿಗುವುದು ನಿಚ್ಚಳ ಎಂಬ ಮಾತು ಕಮಲ ಪಾಳಯದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಲ್ಲಿ ಮೂವರು ಆಕಾಂಕ್ಷಿಗಳಾಗಿರುವುದರಿಂದ ಅಲ್ಲಿ ಟಿಕೆಟ್‌ ಯಾರಿಗೆ ಎಂಬ ಕುತೂಹಲ ಇದೆ. ಹೆಸರು ಅಂತಿಮಗೊಳ್ಳದಿರುವುದರಿಂದ ‘ಕೈ’ ಕಾರ್ಯಕರ್ತರಲ್ಲೂ ಗೊಂದಲ ಇದೆ. ಇದೇ ವಾತಾವರಣ ಜೆಡಿಎಸ್‌ನಲ್ಲೂ ಇದೆ.

ಆರಂಭದಲ್ಲಿ ಗುತ್ತಿಗೆದಾರ ಓಲೆ ಮಹದೇವ ಮಾತ್ರ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ರಾಜಕಾರಣಕ್ಕೆ ಬರುವುದಕ್ಕಾಗಿ ಪೊಲೀಸ್‌ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿರುವ ಬಿ.ಪುಟ್ಟಸ್ವಾಮಿ ಅವರು ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಅವರು ಜೆಡಿಎಸ್‌ಗೆ ಸೇರ್ಪಡೆಯಾಗಿರುವುದರಿಂದ ಅವರು ಕೂಡ ಜೆಡಿಎಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ADVERTISEMENT

ಜೆಡಿಎಸ್‌ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಮಂಜುನಾಥ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಉಳಿದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ವರಿಷ್ಠರು ಇನ್ನೂ ಅಂತಿಮಗೊಳಿಸಿಲ್ಲ. ಗುಂಡ್ಲುಪೇಟೆ, ಚಾಮರಾಜನಗರದಲ್ಲಿ ಟಿಕೆಟ್‌ಗಾಗಿ ಹೆಚ್ಚು ಪೈಪೋಟಿ ಕಂಡು ಬಂದಿಲ್ಲ.

ಆದರೆ, ಕೊಳ್ಳೇಗಾಲದಲ್ಲಿ ಮಹದೇವ, ಪುಟ್ಟಸ್ವಾಮಿ ನಡುವೆ ಪ್ರಬಲ ಪೈಪೋಟಿ ಉಂಟಾಗಿದೆ. ಇಬ್ಬರೂ ತಮ್ಮದೇ ಬೆಂಬಲಿಗರ ಪಡೆ ಹೊಂದಿದ್ದಾರೆ. ಕ್ಷೇತ್ರದಾದ್ಯಂತ ಸುತ್ತಾಡುತ್ತಿದ್ದಾರೆ. ತಾವೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ.

ಆದರೆ, ಪ್ರಚಾರದಲ್ಲಿ ಭಾಗಿಯಾಗುವ ಮುಖಂಡರು ಯಾರ ಪರವಾಗಿ ಮತಕೇಳುವುದು ಎನ್ನುವುದು ಗೊತ್ತಾಗದೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಪಕ್ಷದ ಪದಾಧಿಕಾರಿಗಳೇ ಪತ್ರಿಕಾಗೋಷ್ಠಿ ನಡೆಸಿ ಅಭ್ಯರ್ಥಿಯನ್ನು ಶೀಘ್ರವಾಗಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಲ ಪ್ರದರ್ಶನ: ಇಬ್ಬರೂ ಆಕಾಂಕ್ಷಿಗಳು ಸಂತೇಮರಹಳ್ಳಿಯಲ್ಲಿ ಬೆಂಬಲಿಗರ ಸಮಾವೇಶ ಮಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.

ಪುಟ್ಟಸ್ವಾಮಿ ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ನವೇ ಸಮಾವೇಶ ನಡೆಸಿದ್ದು, ಮಹದೇವ ಅವರು ಪುಟ್ಟಸ್ವಾಮಿ ಜೆಡಿಎಸ್‌ಗೆ ಬಂದ ನಂತರ ಸಮಾವೇಶ ಮಾಡಿದ್ದಾರೆ.

ಹಳ್ಳಿಗಳಿಗೆ ಪ್ರವಾಸ: ಇಬ್ಬರೂ ಆಕಾಂಕ್ಷಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಜನರನ್ನು ತಲುಪಿಸಲು ಯತ್ನಿಸುತ್ತಿದ್ದಾರೆ.

ಇಬ್ಬರ ಪೈಪೋಟಿಯಿಂದಾಗಿ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ. ಇದರಿಂದಾಗಿ ಹಿಂದಿನಿಂದಲೂ ಜೆಡಿಎಸ್‌ ಬೆಂಬಲಿಸಿಕೊಂಡು ಬಂದಿದ್ದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ’ ಎಂದು ಹೇಳುತ್ತಾರೆ ನಿಷ್ಠಾವಂತ ಕಾರ್ಯಕರ್ತರು.

ಚತುಷ್ಕೋನ ಸ್ಪರ್ಧೆ ಖಚಿತ

ಕೊಳ್ಳೇಗಾಲದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಎಸ್‌ಪಿ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.

ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್‌ ಹಿಂದೆಂಗಿಂತಲೂ ಹೆಚ್ಚು ಪ್ರಬಲವಾಗಿರುವಂತೆ ಕಂಡು‌ ಬರುತ್ತಿದ್ದು, ನಾಲ್ಕೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತುರುಸಿನ ಸ್ಪರ್ಧೆ ನಡೆಯಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

--

ಟಿಕೆಟ್ ನೀಡಿಕೆ ವರಿಷ್ಠರಿಗೆ ಬಿಟ್ಟಿದ್ದು. ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದೇನೆ. ಯಾರಿಗೆ ಟಿಕೆಟ್ ಕೊಟ್ಟರೂ ಪ್ರಾಮಾಣಿಕ ಕೆಲಸ ಮಾಡುತ್ತೇವೆ.
ಬಿ.ಪುಟ್ಟಸ್ವಾಮಿ, ಟಿಕೆಟ್ ಆಕಾಂಕ್ಷಿ

--

ವರಿಷ್ಠರು ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಸಂಘಟನೆ ಮಾಡಿ ಎಂದು ಸೂಚಿಸಿದ್ದರು. ಟಿಕೆಟ್ ನನಗೆ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ
ಓಲೆ ಮಹದೇವ, ಟಿಕೆಟ್ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.