ADVERTISEMENT

ಕೋವಿಡ್‌ ಹಗರಣ: ನ್ಯಾಯಾಂಗ ತನಿಖೆಗೆ ಆಗ್ರಹ

ವೈದ್ಯಕೀಯ ಉಪಕರಣಗಳ ಖರೀದಿ–ಸರ್ಕಾರ ಶ್ವೇತ ಪತ್ರ ಹೊರಡಿಸಲಿ–ಎನ್‌.ಚಲುವನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 12:23 IST
Last Updated 3 ಆಗಸ್ಟ್ 2020, 12:23 IST
ಸುದ್ದಿಗೋಷ್ಠಿಯಲ್ಲಿ ಎನ್‌.ಚಲುವನಾರಾಯಣಸ್ವಾಮಿ, ಐಶ್ವರ್ಯ ಮಹದೇವ್‌ ಅವರು ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಎನ್‌.ಚಲುವನಾರಾಯಣಸ್ವಾಮಿ, ಐಶ್ವರ್ಯ ಮಹದೇವ್‌ ಅವರು ಮಾತನಾಡಿದರು   

ಚಾಮರಾಜನಗರ: ಕೋವಿಡ್‌–19 ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳ ಖರೀದಿಗೆ ಮಾಡಿರುವ ಖರ್ಚುಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಹಾಗೂ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಎನ್‌.ಚಲುವನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈದ್ಯಕೀಯ ಉಪಕರಣಗಳ ಖರೀದಿಗೆ ₹4,167 ಕೋಟಿ ವೆಚ್ಚ ಮಾಡಲಾಗುತ್ತಿದೆ. ಎಲ್ಲ ಉಪಕರಣಗಳನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಲಾಗಿದೆ. ₹2,000 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಐದಾರು ಸಚಿವರು ಗಡಿಬಿಡಿಯಲ್ಲಿ ಅಷ್ಟು ಖರ್ಚು ಆಗಿಲ್ಲ ಎಂದು ಹೇಳಿದ್ದಾರೆ. ಆದರೆ, ಹೆಚ್ಚು ಬೆಲೆಗೆ ಖರೀದಿ ಮಾಡಿರುವುದಕ್ಕೆ ದಾಖಲೆಗಳಿವೆ. ವೆಂಟಿಲೇಟರ್‌, ಮಾಸ್ಕ್,‌ ಆಮ್ಲಜನಕ ಪೂರೈಸುವ ಉಪಕರಣ, ಥರ್ಮಲ್‌ ಸ್ಕ್ರೀನರ್‌ ಹೀಗೆ ಖರೀದಿಯಲ್ಲೂ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿದರು.

‘ಕೇರಳ ಸರ್ಕಾರ ₹20 ಸಾವಿರ ಕೋಟಿ ಖರ್ಚು ಮಾಡಿದೆ. ನಮ್ಮಲ್ಲಿ ₹1,400 ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದು ಬಿಟ್ಟರೆ ಏನೂ ಮಾಡಿಲ್ಲ. ಸರ್ಕಾರ ಎಷ್ಟು ಬೇಕಾದರೂ ಖರ್ಚು ಮಾಡಲಿ. ಆದರೆ, ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ನಿಯಂತ್ರಿಸಬೇಕಿತ್ತು. ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬೇಕಿತ್ತು. ಆದರೆ, ಅದೂ ಆಗುತ್ತಿಲ್ಲ. ಜುಲೈ ತಿಂಗಳಲ್ಲಿ ಒಂದು ಲಕ್ಷ ಪ್ರಕರಣಗಳು ವರದಿಯಾಗಿವೆ’ ಎಂದು ಹೇಳಿದರು.

ADVERTISEMENT

ಪಕ್ಷದ ಪ್ರತಿನಿಧಿಯಿಂದ ನೋಟಿಸ್‌: ‘ನಾವು ದ್ವೇಷಕ್ಕಾಗಿ ಭ್ರಷ್ಟಾಚಾರದ ಆರೋಪ‍ ಮಾಡುತ್ತಿಲ್ಲ. ಆರಂಭದಿಂದಲೂ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೆ, ಜನರು ಸಂಕಷ್ಟ ಅನುಭವಿಸುತ್ತಿರುವಾಗ, ಆಡಳಿತದಲ್ಲಿರುವವರು ಭ್ರಷ್ಟಾಚಾರ ಮಾಡುತ್ತಿದ್ದರೆ ವಿರೋಧ ಪಕ್ಷದವರಾಗಿ ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯೇ? ಹಾಗಾಗಿ, ದಾಖಲೆಗಳ ಸಮೇತ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ. ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಡಳಿತದಲ್ಲಿರುವವರು ಇಬ್ಬರಿಗೂ ನೋಟಿಸ್‌ ಕೊಟ್ಟಿದ್ದರೆ ಒಪ್ಪಬಹುದಿತ್ತು. ಆದರೆ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ನೋಟಿಸ್‌ ನೀಡಿದ್ದಾರೆ. ಇಂತಹ ಬೆದರಿಕೆ ತಂತ್ರಕ್ಕೆ ನಾವು ಬಗ್ಗುವುದಿಲ್ಲ’ ಎಂದರು.

ಸಂಪೂರ್ಣ ವಿಫಲ: ‘ಭ್ರಷ್ಟಾಚಾರ ಒಂದೆಡೆಯಾದರೆ, ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದೆ. ವೈದ್ಯರು, ನರ್ಸ್‌ಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು ಹೀಗೆ ಕೊರೊನಾ ಸೇನಾನಿಗಳೇ ಸಾಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇತರ ಕಾಯಿಲೆಯಿಂದ ಬಳಲುತ್ತಿರುವವರನ್ನೂ ದಾಖಲು ಮಾಡಿಕೊಳ್ಳುತ್ತಿಲ್ಲ. ಮಿತಿ ಮಿರಿ ಶುಲ್ಕ ವಿಧಿಸುತ್ತಿದ್ದಾರೆ. ಇಡೀ ವ್ಯವಸ್ಥೆಯನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರ ಸೋತಿದೆ’ ಎಂದು ಚಲುವನಾರಾಯಣಸ್ವಾಮಿ ಅವರು ದೂರಿದರು.

ಮನುಷತ್ವ ಇಲ್ಲದ ಸರ್ಕಾರ

‘ಜನರು ಕೋವಿಡ್‌ನಿಂದ ತತ್ತರಿಸಿರುವಾಗ ಸರ್ಕಾರದಲ್ಲಿರುವವರಿಗೆ ಮಾನವೀಯತೆ ಇರಬೇಕು. ಭ್ರಷ್ಟಾಚಾರ ನಡೆಸುತ್ತಾರೆ ಎಂದರೆ ಇದು ಮನುಷತ್ವ ಇಲ್ಲದ ಸರ್ಕಾರ’ ಎಂದು ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್‌ ಅವರು ಟೀಕಿಸಿದರು.

‘ಸರ್ಕಾರ ಎಷ್ಟಾದರೂ ಖರ್ಚು ಮಾಡಲಿ. ಆದರೆ, ಅದಕ್ಕೆ ಸರಿಯಾದ ಲೆಕ್ಕ ಕೊಡಲಿ. ವಿರೋಧ ಪಕ್ಷವಾಗಿ ನಮಗೆ ಪ್ರಶ್ನಿಸುವ ಹಕ್ಕು ಇದೆ. ಅದನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಾಡುತ್ತೇವೆ. ಆದರೆ, ಜನರು ಕೂಡ ಇದನ್ನು ಪ್ರಶ್ನಿಸಬೇಕು’ ಎಂದು ಅವರು ಹೇಳಿದರು.

ಶಾಸಕ ಆರ್.ನರೇಂದ್ರ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಎ.ಆರ್.ಕೃಷ್ಣಮೂರ್ತಿ, ಎಸ್‌.ಬಾಲರಾಜು, ಎಸ್‌.ಜಯಣ್ಣ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.