ADVERTISEMENT

ಕಾಂಗ್ರೆಸ್‌ನಿಂದ ಕನಿಷ್ಠ ಆದಾಯ ಖಾತರಿ ಯೋಜನೆ

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 12:59 IST
Last Updated 27 ಮಾರ್ಚ್ 2019, 12:59 IST
ಸಿ.ಪುಟ್ಟರಂಗಶೆಟ್ಟಿ
ಸಿ.ಪುಟ್ಟರಂಗಶೆಟ್ಟಿ   

ಚಾಮರಾಜನಗರ: ‘ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಘೋಷಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಬುಧವಾರ ತಿಳಿಸಿದರು.

ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಹಾಗೂ ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಬಡವ– ಶ್ರೀಮಂತ ಅಂತರವನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಘೋಷಿಸಲಾಗಿದೆ’ ಎಂದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಬಡವರಿಗೆ ವರ್ಷಕ್ಕೆ₹72 ಸಾವಿರ ಮೊತ್ತವನ್ನು ತಿಂಗಳಿಗೆ ಕನಿಷ್ಠ ಆದಾಯ ಖಾತರಿ ರೂಪದಲ್ಲಿ ನೀಡಲಿದೆ. ಈ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದೆ’ ಎಂದರು.

ADVERTISEMENT

‘ದೇಶದ ಜನಸಂಖ್ಯೆಯಲ್ಲಿ ಶೇ 20ರಷ್ಟುಅಥವಾ5 ಕೋಟಿ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಕುಟುಂಬಗಳಿಗೆ ಮಾಸಿಕವಾಗಿ₹ 6 ಸಾವಿರ ಹಣ ಸಿಗಲಿದೆ’ ಎಂದು ವಿವರಿಸಿದರು.

ನುಡಿದಂತೆ ನಡೆದಿದ್ದೇವೆ: ‘ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಸಾಲ ಮನ್ನಾ ಮಾಡಿ ಬಡವರ ಮತ್ತು ರೈತರ ಪರವಾದ ದಿಟ್ಟ ನಿಲುವು ಹೊಂದಿತು’ ಎಂದು ಹೇಳಿದರು.

ಶ್ರೀಮಂತರ ಮೇಲೆ ಪ್ರೀತಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿಸುವ ಯುಪಿಎ ಸರ್ಕಾರದ ನರೇಗಾ ಯೋಜನೆ, ಆಹಾರ ಭದ್ರತಾ ಕಾಯ್ದೆ, ಮಾರುಕಟ್ಟೆ ದರದಲ್ಲಿ ಭೂ ಸ್ವಾದೀನ ಪಡಿಸುವ ಭೂ ಸ್ವಾಧೀನ ಕಾಯ್ದೆ, ಅರಣ್ಯ ಕಾಯ್ದೆ, ರೈತರ ಬೆಳೆಯ ಶೇ 50ರಷ್ಟು ಕನಿಷ್ಠ ಬೆಂಬಲ ಬೆಲೆ ನೀಡುವುದು.. ಇತ್ಯಾದಿ ಬಡವರ ಹಾಗೂ ರೈತರ ಪರವಾದ ಯೋಜನೆಗಳನ್ನು ವಿರೋಧಿಸಿ ಶ್ರೀಮಂತರ ಪರವಾಗಿ ನಿಂತರು’ ಎಂದು ಆರೋಪಿಸಿದರು.

‘ನೋಟು ರದ್ದತಿ, ಜಿಎಸ್‌ಟಿ ಜಾರಿಗೆ ತಂದು ಲಕ್ಷಾಂತರ ಉದ್ಯಮಿಗಳ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡಿದರು’ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಸೋಮನಾಯಕ, ಅರುಣ್ ಕುಮಾರ್, ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.