ADVERTISEMENT

ಹನೂರು | ಮಕ್ಕಳೇ, ಸಂವಿಧಾನ ನೀವು ಬಲ್ಲಿರಾ?

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 6:08 IST
Last Updated 25 ನವೆಂಬರ್ 2023, 6:08 IST
ಹನೂರು ತಾಲ್ಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಮಹತ್ವ ಸಾರುವ ಕಿರುನಾಟಕ ಪ್ರದರ್ಶಿಸಿದರು
ಹನೂರು ತಾಲ್ಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಮಹತ್ವ ಸಾರುವ ಕಿರುನಾಟಕ ಪ್ರದರ್ಶಿಸಿದರು   

ಹನೂರು : ಭಾರತದ ಧರ್ಮನಿರಾಪೇಕ್ಷ ಪ್ರಜಾಪ್ರಭುತ್ವವು ಸಾರ್ವಭೌಮವಾಗಲಿ

ನ್ಯಾಯ, ನೀತಿ, ಸಂಘ, ಶಾಂತಿಯು ಎದೆಯಲಿ ಮೊಳಗಲಿ

ಸ್ವಾತಂತ್ರ, ಸಮಾನತೆಯ ಸುಮವು ಎದೆಯಲಿ ಅರಳಲಿ

ADVERTISEMENT

ತನು, ಮನ, ಧನ ರಾಷ್ಟ್ರ ಹಿತಕ್ಕಾಗಿ ಅರ್ಪಣೆಯಾಗಲಿ

ಸಮಾಜವಾದ, ಭ್ರಾತೃತ್ವ ಸದಾ ನಮ್ಮ ಉಸಿರಾಗಲಿ...

- ತಾಲ್ಲೂಕಿನ ಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ‘ನೀವು ಸಂವಿಧಾನ ಬಲ್ಲಿರಾ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಹಾಡಿನ ಮೂಲಕ ವಿವರಿಸಿದ್ದು ಹೀಗೆ....

ಮಕ್ಕಳಿಗೆ ಪಠ್ಯದ ಜತೆಗೆ ದೇಶದ ಸಂವಿಧಾನದ ಬಗ್ಗೆಯೂ ತಿಳಿಸಿಕೊಡುವ ಉದ್ದೇಶದಿಂದ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ ಎಲ್ಲ ಮಕ್ಕಳು ಉತ್ಸಾಹದಿಂದಲೇ ಪಾಲ್ಗೊಂಡರು.

‘ಸರ್ವರಿಗೂ ಸಮಾನತೆಯನ್ನು ನೀಡಿರುವ ಸಂವಿಧಾನ ಯಾವುದೇ ಧರ್ಮ, ಜಾತಿ, ವರ್ಗ ವರ್ಣ, ಲಿಂಗ ಭಾಷೆ ಮತ್ತು ಪ್ರದೇಶ ಎನ್ನದೆ ಎಲ್ಲ ಜನರನ್ನು ಸಶಕ್ತಗೊಳಿಸಿ ಭಾರತದ ಅಸ್ಮಿತೆಯನ್ನು ಕಾಪಾಡುತ್ತಿದೆ. ಸರ್ಕಾರದ ಅಧಿಕಾರಿಗಳ ಮಿತಿ ಹಾಗೂ ಪ್ರಜೆಗಳಿಗೆ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಸಂವಿಧಾನವು ಅಧಿಕಾರದ ದುರುಪಯೋಗ ವಿರುದ್ಧ ರಕ್ಷಣೆ ಮಾಡುವುದರೊಂದಿಗೆ ಕಾನೂನಿಗಿಂತ ಯಾರೂ ಮೇಲಲ್ಲ. ಭಾರತೀಯರ ಪವಿತ್ರ ಗ್ರಂಥ’ ಎಂಬುದನ್ನು ಮಕ್ಕಳು ನಾಟಕದ ಮೂಲಕ ಸಾರಿ ಹೇಳಿದರು.

ರಾಜಪ್ರಭುತ್ವದ ಅಧಿಕಾರವನ್ನು ಮೊಟಕುಗೊಳಿಸಿ ಪ್ರಜಾಪ್ರಭುತ್ವದಡೆಗೆ, ಸಾಮಾಜಿಕ ಅಸಮಾನತೆಗಳನ್ನು ಕೊನೆಗೊಳಿಸಿ, ಸಮಾನತೆಯೆಡೆಗೆ ಕೊಂಡೊಯ್ದು ಮಾನವತಾವಾದ, ಸಮಾಜವಾದ ಹಾಗೂ ಧರ್ಮನಿರಪೇಕ್ಷತೆಯ ಸಾಂವಿಧಾನಿಕ ಮೌಲ್ಯವನ್ನು ಸಂವಿಧಾನ ನೀಡಿದೆ. ಇಂಥ ಸಂವಿಧಾನದ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಕಿರುನಾಟಕದ ಮೂಲಕ ವಿದ್ಯಾರ್ಥಿಗಳು ಮನೋಜ್ಞವಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮುಂದಿಟ್ಟರು.

‘ಬದುಕು ಮತ್ತು ಸಮಾಜ ತುಂಬಾ ಸಂಕೀರ್ಣವಾಗಿರುವ ಸಮಯದಲ್ಲಿ ನಾವು ಸಂವಿಧಾನ ಪೀಠಿಕೆಯನ್ನು ಅರ್ಥ ಮಾಡಿಕೊಂಡು ಹಕ್ಕು, ಕರ್ತವ್ಯಗಳ ಬಗ್ಗೆ ಜಾಗೃತರಾಗಿ, ಪ್ರಜ್ಞಾಪೂರ್ವಕವಾಗಿ ದೇಶದ ಘನತೆಯನ್ನು ಎತ್ತಿ ಹಿಡಿಯುವಂತಾಗಬೇಕು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ದೃಷ್ಟಿಯಿಂದ ಯೋಜಿಸಿದ್ದ ಕಾರ್ಯಕ್ರಮ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿತು’ ಎಂದು ಮುಖ್ಯಶಿಕ್ಷಕ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜ್ಞಾನ ಸಾಮರ್ಥ್ಯ ಹೆಚ್ಚಿಸಿದ ಕಾರ್ಯಕ್ರಮ’

‘ಇಂದು ದೇಶದಾದ್ಯಂತ ಸಂವಿಧಾನದ ಬಗ್ಗೆ ಚರ್ಚೆ ಭಾಷಣಗಳು ನಡೆಯುತ್ತಿವೆ. ಜಗತ್ತಿನಲ್ಲಿ ನಿಜಕ್ಕೂ ಭಾರತದ ಸಂವಿಧಾನ ಅಷ್ಟೊಂದು ಮಹತ್ವ ಪಡೆದುಕೊಂಡಿದೆಯಾ ಎಂಬ ಕುತೂಹಲ ಮಕ್ಕಳಿಗೆ ಇದ್ದೇ ಇರುತ್ತದೆ. ಇಂಥ ಕಾರ್ಯಕ್ರಮಗಳನ್ನು ರೂಪಿಸಿ ಅವರಿಗೆ ಕಿರುನಾಟಕ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗಿರುವ ಕುತೂಹಲವನ್ನು ತಣಿಸಬಹುದು. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮಕ್ಕಳಲ್ಲಿನ ಕುತೂಹಲವನ್ನು ತಣಿಸುವುದರ ಜತೆಗೆ ಅವರ ಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸಿದೆ’ ಎಂದು ಶಿಕ್ಷಕ ಮಹಾದೇವ್ ಹೇಳಿದರು.

‘ನೀವು ಸಂವಿಧಾನ ಬಲ್ಲಿರಾ’ ಕಾರ್ಯಕ್ರಮ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ದೇಶ ಸಮಾಜದಲ್ಲಿ ಅದರ ಮಹತ್ವವನ್ನೂ ತಿಳಿಸಿತು.
ಎನ್.ಎಂ. ಸಜಿನಿ, 10ನೇ ತರಗತಿ ವಿದ್ಯಾರ್ಥಿನಿ
ಸಂವಿಧಾನದಲ್ಲಿ ಪ್ರಜೆಗಳಿರುವ ಹಕ್ಕು ಮತ್ತು ಕರ್ತವ್ಯಗಳು ಎಷ್ಟು ಮಹತ್ವದ್ದು ಎಂಬುದರ ಬಗ್ಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮ ತಿಳಿಸಿಕೊಟ್ಟಿತು.
ಕಾರ್ತಿಕ್ ,10ನೇ ತರಗತಿ ವಿದ್ಯಾರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.