ADVERTISEMENT

ಕೋವಿಡ್‌: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 16:11 IST
Last Updated 28 ಏಪ್ರಿಲ್ 2021, 16:11 IST
ಸದಾಶಿವ ಎಸ್‌.ಸುಲ್ತಾನ್‌ಪುರಿ
ಸದಾಶಿವ ಎಸ್‌.ಸುಲ್ತಾನ್‌ಪುರಿ   

ಚಾಮರಾಜನಗರ: ಕೋವಿಡ್‌ ಹೆಚ್ಚಾಗುತ್ತಿರುವ ಕಾರಣದಿಂದ, ಕರ್ಫ್ಯೂ ಅವಧಿಯಲ್ಲಿ ಜನರಲ್ಲಿ ಅರಿವು ಹಾಗೂ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಹಾಯವಾಣಿಯನ್ನು (9449547372) ಆರಂಭಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನಪುರಿ ಅವರು, ‘ಜಿಲ್ಲೆಯಲ್ಲಿ ಕೋವಿಡ್‌ ವೇಗವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿಉದ್ಭವಿಸಬಹುದಾದ ಹಾಸಿಗೆ ಸಮಸ್ಯೆ, ವೆಂಟಿಲೇಟರ್, ಆಮ್ಲಜನಕ, ವೈದ್ಯರ ಲೋಪದೋಷ ಸೇರಿದಂತೆ ಇತರೆ ಕಾನೂನು ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಸಲಹೆ ಹಾಗೂ ಪರಿಹಾರ ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 9449547372 ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯಬಹುದು’ ಎಂದು ತಿಳಿಸಿದರು.

‘ಜನರು ತಮಗಿರುವ ಸಮಸ್ಯೆಗಳನ್ನು ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ ಸಂಬಂಧಪಟ್ಟ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಲು ಕ್ರಮವಹಿಸಲಾಗುವುದು. ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಹಾಯವಾಣಿಗೆ ಕರೆ ಮಾಡಿದವರು ತಮ್ಮ ವಿವರಗಳನ್ನು ನೀಡಬೇಕು. ಕರ್ಫ್ಯೂ ಇರುವ 14 ದಿನಗಳ ಕಾಲ ಸಹಾಯವಾಣಿ ಇರಲಿದ್ದು, ಆ ನಂತರವೂ ಅವಶ್ಯಕತೆ ಇದ್ದರೆ ಮುಂದುವರಿಸಲಾಗುವುದು.
ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತಮಗಿರುವ ಗೊಂದಲಗಳನ್ನೂ ಇದರ ಮೂಲಕ ಪರಿಹರಿಸಿಕೊಳ್ಳಬಹುದು’ ಎಂದು ಅವರು ಹೇಳಿದರು.

ADVERTISEMENT

ಲಸಿಕೆ ಹಾಕಿಸಿಕೊಳ್ಳಲು ಸಲಹೆ

‘45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಪಡೆಯುವುದು ಅಗತ್ಯ. ಲಸಿಕೆ ಸುರಕ್ಷತೆ ಬಗ್ಗೆ ಅನುಮಾನ ಬೇಡ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆದು ವೈರಸ್‌ನಿಂದ ರಕ್ಷಣೆ ಪಡೆಯಬೇಕು. ಲಸಿಕೆ ಪಡೆದ ಬಳಿಕ ಮೈ ಕೈ ನೋವು, ಜ್ವರ ಬರುವುದು ಸಹಜ. ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಜನರು ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಲು ಮುಂದಾಗಬೇಕು’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.