ADVERTISEMENT

ಗುಂಡ್ಲುಪೇಟೆ | ಅಕ್ರಮ ಮದ್ಯ, ಜೂಜಾಟಕ್ಕೆ ದಂಡಾಸ್ತ್ರ ಪ್ರಯೋಗ

ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಗ್ರಾಮಸ್ಥರ ಸರ್ವಾನುಮತದ ನಿರ್ಧಾರ

ಮಲ್ಲೇಶ ಎಂ.
Published 25 ಮೇ 2025, 6:13 IST
Last Updated 25 ಮೇ 2025, 6:13 IST
ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳ ತಡೆಗೆ ಈಚೆಗೆ ಗ್ರಾಮದ ಮುಖಂಡರು ಸಭೆ ನಡೆಸಿದ ದೃಶ್ಯ
ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳ ತಡೆಗೆ ಈಚೆಗೆ ಗ್ರಾಮದ ಮುಖಂಡರು ಸಭೆ ನಡೆಸಿದ ದೃಶ್ಯ   

ಗುಂಡ್ಲುಪೇಟೆ: ಅಕ್ರಮ ಮದ್ಯ ಮಾರಾಟ ಮಾಡಿದರೆ, ಜೂಜಾಟ ಆಡಿದರೆ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ದಂಡ ವಿಧಿಸುವುದು ವಾಡಿಕೆ. ಆದರೆ, ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಗ್ರಾಮಸ್ಥರೇ ಅಕ್ರಮ ಚಟುವಟಿಕೆಗಳ ತಡೆಗೆ ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ.

ಗ್ರಾಮದಲ್ಲಿ ಶಾಂತಿ–ನೆಮ್ಮದಿ ನೆಲೆಸಬೇಕು, ಕಲಹಮುಕ್ತ ಸೌಹಾರ್ದಯುತ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ ಗ್ರಾಮಸ್ಥರೆಲ್ಲ ಒಟ್ಟಾಗಿ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ದಂಡ ವಿಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ದೇವಸ್ಥಾನದಲ್ಲಿ ಅಂಗಳದಲ್ಲಿ ನಿರ್ಣಯ:

ADVERTISEMENT

ಅಣ್ಣೂರುಕೇರಿ ಗ್ರಾಮ ಅಕ್ರಮ ಮದ್ಯ ಮಾರಾಟ ಮುಕ್ತವಾಗಬೇಕು ಎಂಬ ಆಶಯದೊಂದಿಗೆ ಈಚೆಗೆ ಗ್ರಾಮದ ದೊಡ್ಡಮ್ಮತಾಯಿ ದೇವಸ್ಥಾನದ ಬಳಿ ಉಪ್ಪಾರ, ಪರಿಶಿಷ್ಟ ಜಾತಿ, ಮುಸ್ಲಿಂ, ವಿಶ್ವಕರ್ಮ, ಕುರುಬ, ಕುಂಬಾರ, ಮಡಿವಾಳ, ಸವಿತ ಸಮಾಜ ಸೇರಿದಂತೆ ಎಲ್ಲ ‌ಕೋಮಿನ ಯಜಮಾನರು, ಮುಖಂಡರು, ಸ್ವಸಹಾಯ ಮಹಿಳಾ ಸಂಘದ ಸದಸ್ಯೆಯರು, ಗ್ರಾಮ ಪಂಚಾಯಿತಿ ಸದಸ್ಯರು ಒಂದುಗೂಡಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ₹ 50 ಸಾವಿರ ದಂಡ ವಿಧಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಅಕ್ರಮ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲೂ ತೀರ್ಮಾನಿಸಿದ್ದಾರೆ. ಅಣ್ಣೂರುಕೇರಿ ಗ್ರಾಮಸ್ಥರ ನಿರ್ಣಯ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಅಣ್ಣೂರುಕೇರಿ ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಈಚೆಗೆ ಗ್ರಾಮದಲ್ಲಿ ಮದ್ಯವ್ಯಸನ, ಜೂಜಾಟ ಹೆಚ್ಚಾಗಿತ್ತು. ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟದಿಂದ ಗ್ರಾಮಸ್ಥರು ಬೆಳಗಿನ ಜಾವವೇ ಮದ್ಯಸೇವನೆಯ ಚಟ ಅಂಟಿಸಿಕೊಂಡಿದ್ದರು. ಕೂಲಿ ಕೆಲಸಕ್ಕೂ ಹೋಗದೆ ಮದ್ಯಸೇವಿಸಿ ಮತ್ತಿನಲ್ಲಿ ರಸ್ತೆ ಬದಿ ಹಾಗೂ ಬಸ್ ನಿಲ್ದಾಣಗಳಲ್ಲಿ ಮಲಗುತ್ತಿದ್ದ ವ್ಯಸನಿಗಳು ಕಾಣುತ್ತಿದ್ದರು. 

ಬಹಳಷ್ಟು ಮಂದಿ ಕೆಲಸ ತೊರೆದು ಮದ್ಯ ಸೇವನೆಯ ದಾಸರಾಗಿದ್ದರು. ಗ್ರಾಮದಲ್ಲಿ ದುಡಿದ ಬಹುಪಾಲು ಹಣ ಚಟಗಳಿಗೆ ಪೋಲಾಗುವುದರ ಜೊತೆಗೆ ಮನೆಗಳಲ್ಲಿ ನೆಮ್ಮದಿ ದೂರವಾಗಿತ್ತು. ನಿತ್ಯ ಜಗಳ, ಕಿರುಕುಳ ಸಾಮಾನ್ಯವಾಗಿತ್ತು. ಗ್ರಾಮದಲ್ಲಿ ಅವ್ಯಾಹತವಾಗಿ ಜೂಜಾಟ ನಡೆಯುತ್ತಿತ್ತು. ಹಲವರು ಸಾಲ ಮಾಡಿ ಊರು ಬಿಡುವ ಪರಿಸ್ಥಿತಿ ತಲುಪಿದ್ದರು.

ಇದನ್ನೆಲ್ಲ ಗಮನಿಸಿದ ಊರಿನ ಮುಖಂಡರು ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಹಾಗೂ ಜೂಜಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಗ್ರಾಮಸ್ಥರ ನಿರ್ಣಯಕ್ಕೆ ವಿರುದ್ಧವಾಗಿ ಅಕ್ರಮ ಮದ್ಯ ಮಾರಾಟ ಮಾಡಿದರೆ, ಜೂಜಾಟ ಆಡಿಸಿದರೆ ₹ 50 ಸಾವಿರ ದಂಡ ವಿಧಿಸಲಾಗುತ್ತಿದೆ. ರಾತ್ರಿಯ ಹೊತ್ತು ಅಕ್ರಮ ಚಟುವಟಿಕೆಗಳನ್ನು ನಡೆಸಲು ಗ್ರಾಮಕ್ಕೆ ಬರುವವರಿಗೂ ₹ 1 ಲಕ್ಷ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಅಕ್ರಮಗಳ ಬಗ್ಗೆ ಮಾಹಿತಿ ನೀಡುವವರಿಗೆ 10 ಸಾವಿರ ಬಹುಮಾನ ನೀಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ.

ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳು ಕುಡಿತದ ಚಟ ಅಂಟಿಸಿಕೊಳ್ಳುತ್ತಿದ್ದರು. ಹಲವರು ವಿದ್ಯಾಭ್ಯಾಸ ಮೊಟಕುಗೊಳಿಸುವ ಪರಿಸ್ಥಿತಿಗೂ ತಲುಪಿದ್ದರು. ಗ್ರಾಮದ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯಜಮಾನರು ತಿಳಿಸಿದ್ದಾರೆ.

ಯಜಮಾನರ ನಿರ್ಧಾರಕ್ಕೆ ವಿವಿಧ ಸಮುದಾಯಗಳ ಮುಖಂಡರಾದ ಮಲೀಶೆಟ್ಟಿ, ಮಹದೇವ ಶೆಟ್ಟಿ, ಮಾದ ಶೆಟ್ಟಿ, ಕೃಷ್ಣ ಸ್ವಾಮಿ, ಗೋಪಾಲಶೆಟ್ಟಿ, ಸಿದ್ದಶೆಟ್ಟಿ, ಗೋವಿಂದಶೆಟ್ಟಿ, ದೊಡ್ಡಮಾದಶೆಟ್ಟಿ, ಕುಮಾರ ಶೆಟ್ಟಿ, ಎ.ಎಸ್.ಪಾಂಡಿ, ಚಿನ್ನಸ್ವಾಮಿ, ಕುನ್ನಶೆಟ್ಟಿ, ಜವರಶೆಟ್ಟಿ, ಸಿದ್ದಯ್ಯ, ಕುಂಬಾರ್ ರಂಗಶೆಟ್ಟಿ, ಮಹಮ್ಮದ್ ಶೆಕ್ ಮತ್ತು ಶತಖದ್, ಸವಿತಾ ಸಮಾಜದ ಮುಖಂಡ ಸಿದ್ದರಾಜು ಒಕ್ಕೊರಲಿನ ಸಹಮತ ವ್ಯಕ್ತಪಡಿಸಿದ್ದಾರೆ.

ಅಕ್ರಮ ಚಟುವಟಿಕೆ ಸಂಪೂರ್ಣ ನಿಷೇಧ

ಕುಡಿತ ಜೂಜಿನಿಂದ ಗ್ರಾಮದಲ್ಲಿ ಗಲಾಟೆ ಘರ್ಷಣೆಗಳು ಸಂಭವಿಸುತ್ತಿದ್ದವು. ಹಲವರು ಸಾಲದ ಶೂಲಕ್ಕೆ ಸಿಲುಕಿ ಊರು ತೊರೆದಿದ್ದರು. ಮಕ್ಕಳ ಭವಿಷ್ಯ ಕಣ್ಮುಂದೆ ಹಾಳಾಗುವುದನ್ನು ನೋಡಿ ಪೋಷಕರು ಕೊರಗುತ್ತಿದ್ದರು ಗ್ರಾಮಸ್ಥರ ನೆಮ್ಮದಿ ಹಾಳಾಗಿತ್ತು. ಈ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಲ್ಲ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. -ನಂಜಶೆಟ್ಟಿ ಅಣ್ಣೂರುಕೇರಿ ಯಜಮಾನ 

ಸಾಮಾಜಿಕ ಜವಾಬ್ದಾರಿ

ಅಕ್ರಮ ಮದ್ಯ ಮಾರಾಟ-ಜೂಜಾಟದ ವಿರುದ್ಧ ಅಣ್ಣೂರುಕೇರಿ ಗ್ರಾಮಸ್ಥರು ಕೈಗೊಂಡಿರುವ ನಿರ್ಧಾರ ಮೆಚ್ಚುವಂತದ್ದು. ಇದೇ ಮಾದರಿಯಲ್ಲೇ ಎಲ್ಲ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದರೆ ಸ್ವಸ್ಥ ಸಮಾಜ ನಿರ್ಮಾಣವಾಗಲಿದೆ. ಗ್ರಾಮಗಳೂ ಅಭಿವೃದ್ಧಿ ಹೊಂದಬಹುದು. ಅಣ್ಣೂರುಕೇರಿ ಗ್ರಾಮದಲ್ಲಿ ಅಕ್ರಮ ಚಟುವಟಿಕೆ ಕಂಡುಬಂದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. -ಜಯಕುಮಾರ್ ಗುಂಡ್ಲುಪೇಟೆ ಇನ್‌ಸ್ಪೆಕ್ಟರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.