ADVERTISEMENT

ಟ್ರಾಕ್ಟರ್‌ನಿಂದ ಹೂಕೋಸು ಬೆಳೆ ನೆಲಸಮ

ಫಸಲಿಗಿಲ್ಲ ಬೆಲೆ: ಮಣ್ಣುಪಾಲಾದ ಬೆಳೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:29 IST
Last Updated 4 ಜೂನ್ 2021, 2:29 IST
ಯಳಂದೂರು ತಾಲ್ಲೂಕಿನ ಯರಿಯೂರು ಹೊರ ವಲಯದಲ್ಲಿ ಹೂ ಕೋಸನ್ನು ಟ್ರಾಕ್ಟರ್ ಓಡಿಸಿ ನೆಲಸಮ ಮಾಡಲಾಯಿತು
ಯಳಂದೂರು ತಾಲ್ಲೂಕಿನ ಯರಿಯೂರು ಹೊರ ವಲಯದಲ್ಲಿ ಹೂ ಕೋಸನ್ನು ಟ್ರಾಕ್ಟರ್ ಓಡಿಸಿ ನೆಲಸಮ ಮಾಡಲಾಯಿತು   

ಯಳಂದೂರು: ಲಾಕ್‌ಡೌನ್‌ ಕಾರಣದಿಂದ ಉತ್ಪನ್ನಗಳಿಗೆ ಬೆಲೆ ಇಲ್ಲದಿರುವುದನ್ನು ಮನಗಂಡು ತಾಲ್ಲೂಕಿನ ಕೃಷಿಕರು ಫಸಲು ನಾಶ ಮಾಡುತ್ತಿದ್ದಾರೆ.

ಯರಿಯೂರು ಮತ್ತು ಕೊಮಾರನಪುರ ಸುತ್ತಮುತ್ತಲಿನ ರೈತರು ಕೋಸು ಮತ್ತು ಬೀಟ್‌ರೂಟ್‌ ಬೆಳೆದಿದ್ದಾರೆ. ಕಟಾವಿಗೆ ಬಂದ ಉತ್ತಮ ಹೂ ಕೋಸನ್ನು ಕೇಳುವರೇ ಇಲ್ಲ. ಹೆಚ್ಚು ಹಣ ವ್ಯಯಿಸಿ, ಕಟಾವು ಮಾಡಿದರೆ ಬೇಡಿಕೆಯೂ ಇಲ್ಲ. ಈ ಕಾರಣದಿಂದ ರೈತರು ಬೆಳೆಯ ಮೇಲೆ ಟ್ರಾಕ್ಟರ್ ಓಡಿಸಿ ಫಸಲು ನಾಶ ಮಾಡುತ್ತಿದ್ದಾರೆ.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಸು, ಕಬ್ಬು, ರಾಗಿ ಬೆಳೆದಿದ್ದೇವೆ. ಆದರೆ, ಬಳಿತ ಕೋಸು ಮತ್ತು ಬೀಟ್‌ರೂಟ್‌ಗಳನ್ನು ಸಂಗ್ರಹ ಮಾಡಿ ಇಡಲು ಆಗದು. ನಿರ್ವಹಣೆ ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ ತಾಕಿಗೆ ಟ್ರಾಕ್ಟರ್ ಬಿಟ್ಟು ನೆಲಸಮ ಮಾಡಿದೆ’ ಎಂದು ಕೃಷಿಕ ರಂಗಸ್ವಾಮಿ ಹೇಳಿದರು.

ADVERTISEMENT

ವ್ಯಾಪಾರಿಗಳು ಕೊರೊನಾ ನೆಪ ಒಡ್ಡಿ ಕಡಿಮೆ ಬೆಲೆಗೆ ಕೇಳುತ್ತಾರೆ. ಬೆಳೆಯ ಕೊಯಿಲಿನ ಖರ್ಚೂ ಕೈಸೇರುವುದಿಲ್ಲ. ಇದನ್ನು ಮನಗಂಡ ಬೇಸಾಯಗಾರರು ಮುಂಗಾರು ಮಳೆಗೂ ಮೊದಲು ಭೂಮಿ ಹದಗೊಳಿಸಲು ತರಕಾರಿ ಬೆಳೆಗಳನ್ನು ತಾಕಿನಲ್ಲೇ ನಾಶಪಡಿಸುತ್ತಿದ್ದಾರೆ ಎಂದು ಕೊಮಾರನಪುರ ನಂದೀಶ್ ಹೇಳಿದರು.

ಹೋಟೆಲ್ ಮತ್ತು ತರಕಾರಿ ವ್ಯಾಪಾರಿಗಳಿಗೆ ಉಚಿತವಾಗಿ ಕಟಾವು ಮಾಡಿಕೊಳ್ಳಲು ತಿಳಿಸಿದರೂ ಯಾರೂ ಬರುತ್ತಿಲ್ಲ.

ಹೆಕ್ಟೇರ್‌ಗೆ ₹ 10 ಸಾವಿರ: ‘ರೈತರು ಒಂದೆರಡು ವಾರ ಬೆಳೆಗಳನ್ನು ತಾಕಿನಲ್ಲಿ ಉಳಿಸುವ ಬಗ್ಗೆ ಯೋಚಿಸಬೇಕು. ಕೋಸು ಮತ್ತು ಟೊಮೆಟೊ ಕೆ.ಜಿಗೆ ₹ 5 ರಿಂದ 10ರವರೆಗೆ ಧಾರಣೆ ಇದೆ. ಕೃಷಿಕರು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿದ್ದರೆ ನಷ್ಟವಾದ ತರಕಾರಿ ಬೆಳೆಗಳಿಗೆ ಸರ್ಕಾರ 1 ಹೆಕ್ಟೇರ್‌ಗೆ₹ 10 ಸಾವಿರ ಸಹಾಯಧನ ನೀಡಲಿದೆ. ಹೂ ಮತ್ತು ಹಣ್ಣಿನ ಕೃಷಿಕರಿಗೂ ನೆರವು ಲಭ್ಯ ಆಗಲಿದೆ. ಹಾಗಾಗಿ, ಬೆಳೆ ನಾಶ ಮಾಡದೆ ಕೆಲವು ದಿನಗಳ ಕಾಲ ಫಸಲನ್ನು ಉಳಿಸಿದರೆ, ಬೆಲೆ ಮತ್ತು ಬೇಡಿಕೆ ಹೆಚ್ಚಾಗಲಿದೆ’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.