ADVERTISEMENT

ಯಳಂದೂರು | ದಸರಾ ರಜೆ: ಮಕ್ಕಳಿಗೆ ನಿರಾಟದ ಮಜಾ

ತಾಲ್ಲೂಕಿನಲ್ಲಿ ಹೆಚ್ಚಾದ ಉಷ್ಣಾಂಶ: ನದಿಯಲ್ಲಿ ಚಿಣ್ಣರ ಚಿನ್ನಾಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 5:58 IST
Last Updated 6 ಅಕ್ಟೋಬರ್ 2025, 5:58 IST
ಯಳಂದೂರು ತಾಲ್ಲೂಕಿನ ಸುವರ್ಣವತಿ ನದಿಯಲ್ಲಿ ಮಕ್ಕಳು ಈಜಾಟದಲ್ಲಿ ತೊಡಗಿದ್ದ ದೃಶ್ಯ.
ಯಳಂದೂರು ತಾಲ್ಲೂಕಿನ ಸುವರ್ಣವತಿ ನದಿಯಲ್ಲಿ ಮಕ್ಕಳು ಈಜಾಟದಲ್ಲಿ ತೊಡಗಿದ್ದ ದೃಶ್ಯ.   

ಯಳಂದೂರು: ತಾಲ್ಲೂಕಿನಲ್ಲಿ ಮೋಡ-ಮುಸುಕಿದ ವಾತಾವರಣದ ನಡುವೆ ಉಷ್ಣಾಂಶದಲ್ಲೂ ಹೆಚ್ಚಳ ಆಗಿದೆ.  ಬಿಸಿಲು ಕಾಡಿದ ಬೆನ್ನಲ್ಲೇ ಒಮ್ಮೊಮ್ಮೆ ತುಂತುರು ಹನಿಯುವುದೂ ಇದೆ. ಮಧ್ಯಾಹ್ನ ಸೆಕೆ ಏರಿದಾಗ ಮಕ್ಕಳು ಮತ್ತು ಯುವಕರು ನದಿಯಲ್ಲಿ ಇಳಿದು ತಂಪು ತುಂಬಿಕೊಂಡರೆ, ದಸರಾ ರಜೆ ಮುಕ್ತಾಯದ ಹಂತದಲ್ಲಿ ಚಿಣ್ಣರು ಈಜು ಕಲಿಕೆಯತ್ತ ಗಮನ ಹರಿಸಿದ್ದಾರೆ.

ಸುವರ್ಣನತಿ ನದಿಯಲ್ಲಿ ವರ್ಷಪೂರ್ತಿ ನೀರು ಸಮೃದ್ಧವಾಗಿರುತ್ತದೆ. ಮಳೆಗಾಲದಲ್ಲಿ ಮಳೆ ನೀರು ಹರಿದರೆ, ಬೇಸಿಗೆಯಲ್ಲಿ ಕಬಿನಿ ಕಾಲುವೆ ನೀರು ನದಿ ಪಸೆ ಒಣಗದಂತೆ ಕಾಪಾಡಿದೆ. ಇದು ಹೊಳೆಯ ಜಲ ವೈಭವಕ್ಕೆ ಕಾರಣವಾದರೆ, ನದಿಪಾತ್ರದ ಜನ, ಜಾನುವಾರುಗಳ ದೈನಂದಿನ ಬಳಕೆಗೂ ನೆರವಾಗಿದೆ. ಇದೇ ನದಿಯಲ್ಲಿ ಹತ್ತಾರು ಗ್ರಾಮಗಳ ಮಕ್ಕಳು ರಜಾ ಸಮಯದಲ್ಲಿ ನೀರಿಗಿಳಿದು ಸಂಭ್ರಮಿಸುತ್ತಾರೆ.

ಇದೇ 8ಕ್ಕೆ ಶಾಲೆಗಳು ಆರಂಭವಾಗಲಿವೆ. ಇನ್ನೂ ಒಂದೆರಡು ದಿನ ರಜಾ ಬಾಕಿ ಇದ್ದು, ಹೊಲ, ಗದ್ದೆ ಕೆಲಸದ ನಡುವೆ ಮಕ್ಕಳು ಹೊಳೆಯಲ್ಲಿ ಈಜಾಟ ಆಡುವುದಿದೆ. ಮರದ ದಿಮ್ಮಿ ಇಲ್ಲವೇ ಸೇತುವೆ ಮೇಲೆ ಏರಿ ನದಿಗೆ ಜಿಗಿದು ದೇಹ ಮತ್ತು ಮನಸ್ಸು ತಂಪು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಮಕ್ಕಳು ಕಡಿಮೆ ನೀರು ಹರಿಯುವ ಪ್ರದೇಶಗಳಲ್ಲಿ ಧುಮುಕಿ ಈಜು ಕಲಿಯಲು ಮುಂದಾಗುತ್ತಾರೆ ಎಂದು ಕಂದಹಳ್ಳಿ ಪೋಷಕ ಮಹದೇವಸ್ವಾಮಿ ಹೇಳಿದರು.

ADVERTISEMENT

ಅಕ್ಟೋಬರ್ ಬಂದರೆ ಚಳಿ ಕಾಲಿಡುತ್ತಿತ್ತು. ಸಣ್ಣ ಮಳೆಯೂ ಕಾಡುತ್ತಿತ್ತು. ಆದರೆ, ಈ ವರ್ಷ ಇನ್ನೂ ಬಿಸಿಲಿನ ಬೇಗೆ ಹೆಚ್ಚಾಗಿಯೇ ಇದೆ. ಹಾಗಾಗಿ, ನದಿಯಲ್ಲಿ ಇಳಿದು ನೀರಾಟ ಆಡುತ್ತೇವೆ ಎನ್ನುತ್ತಾರೆ ಮಕ್ಕಳು.

ಬಿಸಿಲಿನ ಝಳ: ‘ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನಲ್ಲಿ ಬಹುತೇಕ ದಿನ ಬಿಸಿಲಿನ ವಾತಾವರಣ ಇರಲಿದೆ. ಸಾಮಾನ್ಯ ಮಳೆ ಬೀಳುವ ಸಾಧ್ಯತೆಯೂ ಇದೆ ’ ಎಂದು  ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಳಂದೂರು ತಾಲ್ಲೂಕಿನ ಸುವರ್ಣವತಿ ನದಿಯಲ್ಲಿ ಮಕ್ಕಳು ಈಜಾಟದಲ್ಲಿ ತೊಡಗಿದ್ದ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.