ADVERTISEMENT

ನೇಗಿಲು ಹಿಡಿದರು, ಬೀಜ ಬಿತ್ತಿದರು...

ಕೃಷಿ ಚಟುವಟಿಕೆಗಳ ವೀಕ್ಷಣೆ, ರೈತರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 17:01 IST
Last Updated 27 ಏಪ್ರಿಲ್ 2020, 17:01 IST
ಲಾಕ್‌ಡೌನ್‌ ಜಾರಿಯ ನಡುವೆಯೇ ರೈತರು ನಡೆಸುತ್ತಿರುವ ಕೃಷಿ ಚಟುವಟಿಕೆಗಳ ಪರಿಶೀಲನೆಗಾಗಿ ಗುಂಡ್ಲುಪೇಟೆ ತಾಲ್ಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಕೃಷಿ ಜಮೀನೊಂದರಲ್ಲಿ ನೇಗಿಲು ಹಿಡಿದು ಉಳುಮೆ ಮಾಡಿದರು. ಅಲ್ಲದೇ ಒಂದರಡು ಸಾಲು ಬಿತ್ತನೆಯನ್ನೂ ಮಾಡಿದರು
ಲಾಕ್‌ಡೌನ್‌ ಜಾರಿಯ ನಡುವೆಯೇ ರೈತರು ನಡೆಸುತ್ತಿರುವ ಕೃಷಿ ಚಟುವಟಿಕೆಗಳ ಪರಿಶೀಲನೆಗಾಗಿ ಗುಂಡ್ಲುಪೇಟೆ ತಾಲ್ಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಕೃಷಿ ಜಮೀನೊಂದರಲ್ಲಿ ನೇಗಿಲು ಹಿಡಿದು ಉಳುಮೆ ಮಾಡಿದರು. ಅಲ್ಲದೇ ಒಂದರಡು ಸಾಲು ಬಿತ್ತನೆಯನ್ನೂ ಮಾಡಿದರು   

ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿ ಕೃಷಿ ಚಟುವಟಿಕೆ ಗರಿಗೆದರಿದ ಬೆನ್ನಲ್ಲೇಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಗುಂಡ್ಲುಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರು ನಡೆಸುತ್ತಿರುವ ಕೃಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳನ್ನು ವೀಕ್ಷಿಸಿದರು. ಬೆಳೆಗಾರರ ಕಷ್ಟ ದುಃಖಗಳನ್ನು ಆಲಿಸಿ, ಆತ್ಮೀಯವಾಗಿ ಬೆರೆತರು.

ರೈತರು ಉಳುಮೆ ಮಾಡಿ, ಬಿತ್ತನೆ ಮಾಡುತ್ತಿದ್ದುದನ್ನು ನೋಡಿ ಉತ್ಸಾಹಗೊಂಡ ರವಿ ಅವರು ತಾವೂ ನೇಗಿಲು ಹಿಡಿದರು‌; ಅಷ್ಟೇ ಅಲ್ಲ ಒಂದೆರಡು ಸಾಲು ಕಾಳನ್ನೂ ಬಿತ್ತನೆ ಮಾಡಿದರು.

ಆರಂಭದಲ್ಲಿ ತಾಲ್ಲೂಕಿನ ಕಂದೇಗಾಲ, ಶಿಂಡನಪುರದಲ್ಲಿ ಸೂರ್ಯಕಾಂತಿ ಬಿತ್ತನೆ ಕಾರ್ಯವನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಅವರು ಬಿತ್ತನೆ ಬೀಜವನ್ನು ಹೇಗೆ ಹಾಕಲಾಗುತ್ತಿದೆ ಎಂಬ ಬಗ್ಗೆ ರೈತರಿಂದ ಮಾಹಿತಿ ಪಡೆದರು.

ADVERTISEMENT

ಜಿಲ್ಲಾಧಿಕಾರಿಯವರ ಕುತೂಹಲ ಕಂಡ ರೈತರು, ಅವರ ಕೈಗೆ ಬಿತ್ತನೆ ಬೀಜ ನೀಡಿ ಹೊಲದಲ್ಲಿ ಹಾಕುವ ವಿಧಾನವನ್ನು ತೋರಿಸಿ ಕೊಟ್ಟರು.

ರೈತಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಿಗುತ್ತಿದೆಯೇ ಎಂದು ಅವರು ರೈತರನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೈತರು, ‘ಆರಂಭದಲ್ಲಿ ಸ್ವಲ್ಪಮಟ್ಟಿಗೆ ತೊಂದರೆ ಇತ್ತು. ಈಗ ಯಾವುದೇ ಸಮಸ್ಯೆ ಇಲ್ಲ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಪರಿಕರಗಳು ಸಿಗುತ್ತಿವೆ’ ಎಂದರು.

ಹುತ್ತೂರಿನಲ್ಲಿ ಬದನೆಕಾಯಿ, ಕಲ್ಲಂಗಡಿ ಬೆಳೆಯುವ ತೋಟಗಳಿಗೆ ಭೇಟಿ ನೀಡಿ ಬೆಳೆಯಲಾಗಿರುವ ಬೆಳೆ, ಮಾರುಕಟ್ಟೆ ಲಭ್ಯತೆ ಬಗ್ಗೆ ವಿವರ ಪಡೆದರು.

ರೈತರೊಂದಿಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದ ರವಿ ಅವರು, ಪ್ರಸ್ತುತ ಬಂದಿರುವ ಮಳೆ, ಕೃಷಿ ಕಾರ್ಮಿಕರ ಸಂಖ್ಯೆ, ಇತರೆ ವಿಷಯಗಳ ಬಗ್ಗೆ ತಿಳಿದುಕೊಂಡರು.

ತಹಶೀಲ್ದಾರ್ ನಂಜುಂಡಯ್ಯ, ಕೃಷಿ ಉಪನಿರ್ದೇಶಕ ಮುತ್ತುರಾಜ್, ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಶಿವಲಿಂಗಪ್ಪ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಮಸ್ಯೆಗಳಿದ್ದರೆ ಅಧಿಕಾರಿಗಳನ್ನು ಸಂಪರ್ಕಿಸಿ

‘ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಬೇಕಾಗಿರುವ ಯಾವುದೇ ಪರಿಕರ ಕೊರತೆ ಕಂಡುಬಂದಲ್ಲಿ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಬೇಕು. ರೈತರಿಗೆ, ಬೆಳೆಗಾರರಿಗೆ ತೊಂದರೆಯಾಗಲು ಬಿಡುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರ ನಿಮ್ಮೊಂದಿಗೆ ಇದೆ. ಕೃಷಿ ಚಟುವಟಿಕೆಗಳಲ್ಲಿ ಮುಂದುವರೆಯಲು ಪೂರಕವಾಗಿರುವ ಎಲ್ಲಾ ನೆರವನ್ನು ನೀಡಲು ಸಿದ್ದರಿದ್ದೇವೆ’ ಎಂದು ಡಾ.ಎಂ.ಆರ್. ರವಿ ಅವರು ರೈತರಲ್ಲಿ ಭರವಸೆ ತುಂಬಿದರು.

‘ಕೋವಿಡ್-19 ತಡೆಗೆ ಮುಂಜಾಗ್ರತಾ ಕ್ರಮವಾಗಿ ಲಾಕ್‍ಡೌನ್ ಜಾರಿಯಾಗಿದೆ. ಈ ಸಂದರ್ಭದಲ್ಲಿ ರೈತರು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕಿಸಿ ಯೋಗ್ಯ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿದೆ. ಹೀಗಾಗಿಯೇ ಬೆಳೆಗಾರರಿಗೆ ತಲುಪುತ್ತಿರುವ ಸೌಲಭ್ಯ, ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಅವರ ಹೊಲ, ಜಮೀನುಗಳಿಗೆ ಭೇಟಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.