
ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಬುಧವಾರ ವಿಜೃಂಭಣೆಯ ಮಹಾ ರಥೋತ್ಸವ ಜರುಗಿತು. ಕಣ್ಣು ಹಾಸಿದಷ್ಟು ದೂರ ನೆರೆದಿದ್ದ ಭಕ್ತ ಸಾಗರ ಮಾದಪ್ಪನ ರಥೋತ್ಸವವನ್ನು ಕಣ್ತುಂಬಿಕೊಂಡರು.
ನಾಡಿನ ಹಲವೆಡೆಗಳಿಂದ ಹಾಗೂ ತಮಿಳುನಾಡಿನಿಂದ ಬಂದಿದ್ದ ಭಕ್ತರು ‘ಉಘೇ ಉಘೇ ಮಾದಪ್ಪ’ ಉದ್ಘೋಷ ಮೊಳಗಿಸಿ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಈ ಮೂಲಕ ಕಳೆದ ಐದು ದಿನಗಳಿಂದ ಕ್ಷೇತ್ರದಲ್ಲಿ ನಡೆಯುತ್ತಿದ್ದ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ವೈಭವದ ತೆರೆಬಿತ್ತು.
ಬೆಳಿಗ್ಗೆ ಬೇಡಗಂಪಣ ಸಮುದಾಯಕ್ಕೆ ಸೇರಿದ ಅರ್ಚಕರು ಮಹಾ ರಥೋತ್ಸವಕ್ಕೆ ಮಾದೇಶ್ವರನ ಉತ್ಸವ ಮೂರ್ತಿಯನ್ನು ಪಲಪುಷ್ಪಗಳಿಂದ ಸಿಂಗರಿಸಿ ಅಣಿಗಿಳಿಸಿದರು. ಬಳಿಕ ಸಂಪ್ರದಾಯದಂತೆ ವಿವಿಧ ಪ್ರಕಾರಗಳ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಬಿಳಿ ಆನೆ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಒಳ ಆವರದಲ್ಲಿ ಪ್ರದಕ್ಷಿಣೆ ಮಾಡಲಾಯಿತು.
ಬೆಳಿಗ್ಗೆ 9.20ಕ್ಕೆ ಸಾಲೂರು ಮಠದ ಪೀಠಾಧ್ಯಕ್ಷರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಬಾಲೆಯರ ಮಾದಪ್ಪನಿಗೆ ಬೆಲ್ಲದ ಆರತಿ ಮಾಡಿದರು. ವಿಶೇಷ ಪೂಜೆ ನಡೆದ ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ತಂದು ಪ್ರತಿಷ್ಠಾಪಿಸಿ, ಬೂದುಗುಂಬಳ ಹಡೆದು ಭಕ್ತರ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ತೇರು ಮುಂದೆ ಸಾಗುತ್ತಿದ್ದಂತೆ ಭಕ್ತರು ಹಣ್ಣು, ಜವನ, ಧವಸ, ಧಾನ್ಯ ತೂರಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ದೇವಾಲಯದ ಹೊರ ಪ್ರಾಂಗಣದಲ್ಲಿ ರಥ ಸಾಗುತ್ತಾ ಪ್ರದಕ್ಷಿಣೆ ಹಾಕಿ ಮೂಲಸ್ಥಾನ ತಲುಪಿತು.
ಮಹಾ ರಥೋತ್ಸವ ಮುಗಿದ ಬಳಿಕ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳ ಸಮ್ಮುಖದಲ್ಲಿ ದೇವಾಲಯದ ಹೊರಭಾಗದಲ್ಲಿ ಒಂದು ಸುತ್ತು ಪ್ರದಕ್ಷಣೆ ಹಾಕಲಾಯಿತು.
ಭಕ್ತಸಾಗರ
ದೀಪಾವಳಿ ಜಾತ್ರೆಯ ಕೊನೆಯ ದಿನವಾದ ಬುಧವಾರ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬಂದಿದ್ದರು. ಭಕ್ತರಿಗೆ ನಿರಂತರವಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದ ಭಕ್ತರು ಪುನೀತ ಭಾವ ಹೊಂದಿದರು.
ಮಳೆ ಅಡ್ಡಿ
ದೀಪಾವಳಿ ಜಾತ್ರೆಗೆ ಆಗಾಗ ಮಳೆ ಅಡ್ಡಿಯಾಯಿತು. ಬೆಳಿಗ್ಗಿನಿಂದಲೇ ದಟ್ಟವಾಗಿ ಕವಿದಿದ್ದ ಮೋಡದಿಂದ ಆಗಾಗ ಮಳೆ ಸುರಿಯುತ್ತಲೇ ಇತ್ತು. ಮಹಾ ರಥೋತ್ಸವದ ವೇಳೆ ಕೆಲಕಾಲ ಬಿಡುವು ನೀಡಿದ್ದ ಮಳೆ ಜೋರಾಗಿ ಸುರಿಯಲು ಆರಂಭಿಸಿತು. ದೇವರ ದರ್ಶನಕ್ಕೆ ನಿಂತಿದ್ದವರು ಸಂಪೂರ್ಣವಾಗಿ ಮಳೆಗೆ ತೊಯ್ದು ಹೋದರು. ಮಹಿಳೆಯರು, ಮಕ್ಕಳು, ವೃದ್ಧರು ಮಳೆಗೆ ತೊಯ್ದು ಕಿರಿಕಿರಿ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.