ADVERTISEMENT

ಸಫಾರಿ ಬದಲು ಕೃಷಿ ಪ್ರವಾಸೋದ್ಯಮಕ್ಕೆ ಸಿಗಲಿ ಒತ್ತು

ಪ್ರಗತಿಪರ ರೈತರು, ಪರಿಸರ ಹಾಗೂ ವನ್ಯಜೀವಿ ಪ್ರಿಯರ ಒತ್ತಾಯ

ಎಚ್.ಬಾಲಚಂದ್ರ
Published 31 ಜನವರಿ 2026, 6:10 IST
Last Updated 31 ಜನವರಿ 2026, 6:10 IST
ಹೊನ್ನೂರು ಪ್ರಕಾಶ್
ಹೊನ್ನೂರು ಪ್ರಕಾಶ್   

ಚಾಮರಾಜನಗರ: ರಾಜ್ಯ ಸರ್ಕಾರ ಮಾನವ–ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವ ‘ಸಫಾರಿ’ಯನ್ನು ಮರು ಆರಂಭಿಸುವ ಬದಲು ರೈತರ ಬದುಕು ಹಸನಾಗಿಸುವ, ನೆಲಮೂಲದ ಸಂಸ್ಕೃತಿ ಪರಿಚಯಿಸುವ ನೂತನ ಕೃಷಿ ಪ್ರವಾಸೋದ್ಯಮ ನೀತಿ ಜಾರಿಯಾಗಬೇಕು ಎಂಬ ಕೂಗು ಜಿಲ್ಲೆಯಲ್ಲಿ ಬಲವಾಗುತ್ತಿದ್ದು ಪ್ರಗತಿಪರ ರೈತರು, ಪರಿಸರ ವಾದಿಗಳು, ವನ್ಯಜೀವಿ ತಜ್ಞರು ಸಾಥ್ ನೀಡಿದ್ದಾರೆ.

ಬದಲಾಗಲಿ ಕೃಷಿ ಪ್ರವಾಸೋದ್ಯಮ ನೀತಿ:

ರಾಜ್ಯ ಸರ್ಕಾರದ ಪ್ರವಾಸೋದ್ಯಮ ನೀತಿಯಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿಲ್ಲ. ರೆಸಾರ್ಟ್‌, ಹೋಂಸ್ಟೇಗಳ ನಿರ್ಮಾಣಕಷ್ಟೆ ಅವಕಾಶವಿದ್ದು ಕೃಷಿ ಸ್ನೇಹಿ ಚಟುವಟಿಕೆಗಳ ಆಯೋಜನೆಗೆ ಪೂರಕ ವಾತಾವರಣ ಇಲ್ಲ. 1 ರಿಂದ 2 ಎಕರೆ ಕೃಷಿ ಭೂಮಿ ಹೊಂದಿರುವ ಸಣ್ಣ ರೈತರಿಗೂ ಭೂಪರಿವರ್ತನೆ ನಿಯಮ ಕಡ್ಡಾಯಗೊಳಿಸಿರುವುದರಿಂದ ಕೃಷಿ ಪ್ರವಾಸೋದ್ಯಮ ಸೊರಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತರು.

ADVERTISEMENT
ಸಫಾರಿ ಹೆಸರಿನಲ್ಲಿ ಪ್ರವಾಸಿಗರನ್ನು ಕಾಡಿನೊಳಗೆ ಕರೆದೊಯ್ದು ವನ್ಯ ಜೀವಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಮಾದರಿಯಲ್ಲೇ ರೈತರ ಹೊಲಗಳಿಗೂ ಪ್ರವಾಸಿಗರು ಬರುವಂತಹ ವಾತಾವರಣ ನಿರ್ಮಿಸಬೇಕು. ಸಾವಯವ ಕೃಷಿ, ವಿಷಮುಕ್ತ ಆಹಾರ ಸೇವನೆಯ ಅಗತ್ಯತೆ, ಸ್ಥಳೀಯ ಆಹಾರ ಪದ್ಧತಿ ಹಾಗೂ ನೆಲಮೂಲದ ಸಂಸ್ಕೃತಿ ಅರಿಯುವಂತಹ ಪ್ರಮುಖ ವಿಚಾರಗಳು ಕೃಷಿ ಪ್ರವಾಸೋದ್ಯಮ ನೀತಿಯ ಪ್ರಮುಖ ಭಾಗವಾಗಬೇಕು ಎಂದು ಅಭಿಪ್ರಾಯಪಡುತ್ತಾರೆ.
ಪ್ರಗತಿಪರ ರೈತ, ದಯಾನಂದ್‌.

ಪ್ರಸ್ತುತ ಕೃಷಿ ಕ್ಷೇತ್ರಕ್ಕೆ ಸಿಗುತ್ತಿರುವ ಸಬ್ಸಿಡಿ, ನೀರಾವರಿ ಸೌಲಭ್ಯ, ಸೋಲಾರ್, ಸಾಲ ಸೇರಿದಂತೆ ಇತರೆ ಸೌಕರ್ಯಗಳು ಕೃಷಿ ಪ್ರವಾಸೋದ್ಯಮಕ್ಕೂ ದೊರೆಯಬೇಕು. ನಿಯಮಗಳು ಸರಳೀಕರಣಗೊಳ್ಳಬೇಕು, ಒಂದೇ ಸೂರಿನಡಿ ಎಲ್ಲ ಪ್ರಮಾಣಪತ್ರಗಳು ಲಭ್ಯವಾಗಬೇಕು. ಕೃಷಿ ಪ್ರವಾಸೋದ್ಯಮ ನೀತಿಯ ಪೈಲಟ್‌ ಯೋಜನೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಅವರು.

ಆಧುನಿಕ ಕಾಲಘಟ್ಟದ ಮಕ್ಕಳಿಗೆ ಕೃಷಿ ಜ್ಞಾನ ದಕ್ಕದಂತೆ ಮಾಡಲಾಗಿದೆ. ಭತ್ತ, ರಾಗಿ, ಜೋಳ ಸಹಿತ ಆಹಾರಧಾನ್ಯಗಳನ್ನು ಹೇಗೆ ಬೆಳೆಯಲಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ. ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಉಳಿಯಬೇಕಾದರೆ ಕೃಷಿ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಾದ ಅಗತ್ಯ ಹೆಚ್ಚಾಗಿದೆ ಎನ್ನುತ್ತಾರೆ. ಪ್ರಗತಿಪರ ರೈತ

ನೂತನ ಕೃಷಿ ಪ್ರವಾಸೋದ್ಯಮ ನೀತಿಗೆ ಒತ್ತು ನೀಡಿದರೆ ರೈತರ ಬದುಕು ಹಸನಾಗಲಿದೆ, ಸಾಂಪ್ರದಾಯಿಕ ಕೃಷಿಯ ಜೊತೆಗೆ ಪರ್ಯಾಯ ಆದಾಯ ಕೈಸೇರಲಿದೆ. ಬೆಳೆಗೂ ಉತ್ತಮ ಬೆಲೆ ಸಿಗಲಿದೆ, ಕೃಷಿ ಕ್ಷೇತ್ರದಲ್ಲಿ ಉದ್ಯಮ ಸ್ಥಾಪನೆಗೆ ಅವಕಾಶಗಳು ಸೃಷ್ಟಿಯಾಗಲಿದ್ದು ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಹುಲಿ, ಸಿಂಹಗಳನ್ನು ನೋಡಲು ಪ್ರವಾಸಿಗರು ಅರಣ್ಯದೊಳಗೇ ಬರಬೇಕಿಲ್ಲ, ಮೃಗಾಲಯಗಳಲ್ಲೂ ಪ್ರಾಣಿಗಳನ್ನು ವೀಕ್ಷಿಸಬಹುದು. ಸಫಾರಿ ಹೆಸರಿನಲ್ಲಿ ಪ್ರಾಣಿಗಳ ಆವಾಸಸ್ಥಾನದೊಳಗೆ ನುಗ್ಗಿ ಭಯ ಹುಟ್ಟುಹಾಕುವ, ಸಹಜ ಜೀವನಕ್ಕೆ ಅಡ್ಡಿಪಡಿಸಿದರೆ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತದೆ. ಇಂತಹ ಸಮಸ್ಯೆಗಳಿಗೆ ಕೃಷಿ ಪ್ರವಾಸೋದ್ಯಮ ಪರಿಹಾರದಂತೆ ಕಾಣುತ್ತಿದೆ ಎನ್ನುತ್ತಾರೆ.
ರೈತ ಶ್ರೀವತ್ಸ.
ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಆವಾಸ ಸ್ಥಾನ ಕ್ಷೀಣವಾಗುತ್ತಿದೆ. ಕೋರ್ ವಲಯದಲ್ಲಿ ಸಫಾರಿ ವಾಹನಗಳು ಸಂಚರಿಸುವುದರಿಂದ ಹುಲಿಗಳು ಸ್ವಚ್ಚಂದವಾಗಿ ಓಡಾಡಲು ಸಾಧ್ಯವಾಗದೆ ನಾಡಿನತ್ತ ನುಗ್ಗಿ ಬೆಳೆ ನಾಶ ಮಾಡಿ ಜನ ಜಾನುವಾರಗಳ ಮೇಲೆ ದಾಳಿ ಮಾಡುತ್ತಿವೆ. ದಾಳಿ ಭೀತಿಯಿಂದ ರೈತರು ಉದ್ಯಮಿಗಳಿಗೆ ಭೂಮಿ ಮಾರಾಟ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ, ಹಸಿರುಸೇನೆಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್‌.
ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವುದು (ಸಾಂದರ್ಭಿಕ ಚಿತ್ರ)

ಮಲೆ ಮಹದೇಶ್ವರ ಕಾವೇರಿ ವನ್ಯಧಾಮ ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಸಹಿತ ಅಪಾರ ಪ್ರಾಕೃತಿಕ ಸಂಪತ್ತು ಹೊಂದಿರುವ ಜಿಲ್ಲೆಯಲ್ಲಿ ಪರಿಸರ ಹಾಗೂ ವನ್ಯಜೀವಿ ಸಂಪತ್ತು ಉಳಿಯಲು ಕೃಷಿಪ್ರವಾಸೋದ್ಯಮ ಅಗತ್ಯ .

‘ಮಣ್ಣಿನೊಂದಿಗೆ ಬೆಸೆಯುವ ಬಾಂಧವ್ಯ’ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಲ್ಲಿ ಪ್ರಾಯೋಗಿಕವಾಗಿ ಕೃಷಿ ಪ್ರವಾಸೋದ್ಯಮ ಆರಂಭಿಸಲಾಗಿದೆ. ದೈನದಿಂನ ಕೆಲಸ ಕಾರ್ಯಗಳ ಒತ್ತಡದಲ್ಲಿ ಬೇಸತ್ತಿರುವ ನಗರವಾಸಿಗಳು ಹಳ್ಳಿಯ ಸೊಗಡು ಸವಿಯಲು ದಿನದ ಮಟ್ಟಿಗೆ ರೈತರಾಗಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಸ್ವತಃ ಜಮೀನಿಗಿಳಿದು ಕೃಷಿ ಮಾಡುತ್ತಾರೆ ಮಣ್ಣಿನ ಜೊತೆಗೆ ಸಾಂಗತ್ಯ ಬೆಳೆಸುತ್ತಾರೆ ಮಕ್ಕಳು ಹಣ್ಣು ಸೊಪ್ಪು ತರಕಾರಿ ಕಿತ್ತು ಸಂಭ್ರಮಿಸುತ್ತಾರೆ ದಣಿದ ಮನಸ್ಸುಗಳಿಗೆ ಶುದ್ಧ ಹಳ್ಳಿ ಭೋಜನ ಸವಿ ಉಣಬಡಿಸಲಾಗುತ್ತಿದೆ. 
–ಶೇಷ ಕುಮಾರ್‌ ಕೊಟೆಕೆರೆ ಫಾರ್ಮ್‌ ಮಾಲೀಕ 
‘ಹೊಲಗಳು ಕೃಷಿ ಪಾಠಶಾಲೆಗಳಾಗಲಿ’ ಹಾಲು ಡೇರಿಯಲ್ಲಿ ಉತ್ಪಾದನೆಯಾಗುತ್ತದೆ ಆಹಾರ ಧಾನ್ಯಗಳು ಕಾರ್ಖಾನೆಯಲ್ಲಿ ತಯಾರಾಗುತ್ತವೆ ಎಂದೇ ಇಂದಿನ ಮಕ್ಕಳು ನಂಬಿದ್ದಾರೆ. ಪ್ರಸ್ತುತ ಕೃಷಿ ವಿಶ್ವವಿದ್ಯಾಲಯಗಳಿಗಿಂತ ರೈತರ ಹೊಲಗಳು ಯುವ ಸಮುದಾಯಕ್ಕೆ ಪ್ರಾಯೋಗಿಕ ಕಾರ್ಯಕ್ಷೇತ್ರವಾಗಬೇಕು. ಸಾವಯವ ಸೊಪ್ಪು ತರಕಾರಿಗಳ ಮಹತ್ವ ತಿಳಿಯಬೇಕು. ಜಮೀನಿನಲ್ಲಿ ಕೃಷಿ ತರಬೇತಿ ಕೇಂದ್ರಗಳು ಹಾಗೂ ಕೃಷಿ ಪಾಠಶಾಲೆಗಳ ಸ್ಥಾಪನೆಗೆ ಅನುಮತಿ ನೀಡಬೇಕು.
ಹೊನ್ನೂರು ಪ್ರಕಾಶ್‌ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.