ADVERTISEMENT

ಅಂಗವಿಕಲರಿಗೂ ಸಿಗಲಿ ‘ಪ್ರವೇಶ’ ಸ್ವಾತಂತ್ರ್ಯ

ಸರ್ಕಾರಿ, ಖಾಸಗಿ ಕಚೇರಿ, ಬ್ಯಾಂಕ್‌, ಪೊಲೀಸ್ ಠಾಣೆ, ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲ ಸ್ನೇಹಿ ವಾತಾವರಣ ನಿರ್ಮಾಣವಾಗಲಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 6:18 IST
Last Updated 9 ಡಿಸೆಂಬರ್ 2024, 6:18 IST
ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂಗವಿಕಲ ಸ್ನೇಹಿ ರ‍್ಯಾಂಪ್ ವ್ಯವಸ್ಥೆ ಇಲ್ಲದಿರುವುದು
ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂಗವಿಕಲ ಸ್ನೇಹಿ ರ‍್ಯಾಂಪ್ ವ್ಯವಸ್ಥೆ ಇಲ್ಲದಿರುವುದು   

ಚಾಮರಾಜನಗರ: ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕ್‌, ವಾಣಿಜ್ಯ ಮಳಿಗೆ, ಪೊಲೀಸ್ ಠಾಣೆ, ಚಿತ್ರಮಂದಿರ, ಉದ್ಯಾನವನ ಸೇರಿದಂತೆ ಎಲ್ಲ ಕಚೇರಿಗಳಿಗೆ ಸಾಮಾನ್ಯರಂತೆ ಅಂಗವಿಕಲರೂ ತಡೆರಹಿತವಾಗಿ ಒಳ ಪ್ರವೇಶಿಸಲು ಅಂಗವಿಕಲ ಸ್ನೇಹಿ ಸೌಲಭ್ಯಗಳು ಇರಬೇಕು ಎಂಬ ಸರ್ಕಾರದ ನಿಯಮಗಳಿವೆ.

ಆದರೆ, ಜಿಲ್ಲೆಯಲ್ಲಿ ನಿಯಮಗಳು ಕಡತಗಳಿಗೆ ಮಾತ್ರ ಸೀಮಿತವಾಗಿದ್ದು ವಾಸ್ತವದಲ್ಲಿ ಅನುಷ್ಠಾನವಾಗಿಲ್ಲ. ಜಿಲ್ಲಾಡಳಿತ ಭವನ ಹೊರತುಪಡಿಸಿದರೆ ಬಹುಪಾಲು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಅಂಗವಿಕಲರ ಸ್ನೇಹಿ ವಾತಾವರಣ ಇಲ್ಲ. ಪರಿಣಾಮ ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು, ಅಧಿಕಾರಿಗಳ ಬಳಿ ದೂರು ದುಮ್ಮಾನ ಹೇಳಿಕೊಳ್ಳಲು ಸಾಧ್ಯವಾಗದೆ ಅಂಗವಿಕಲರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಜಿಲ್ಲೆಗೆ ಮಾದರಿಯಾಗಿರಬೇಕಾದ ಜಿಲ್ಲಾಕೇಂದ್ರ ಚಾಮರಾಜನಗರದಲ್ಲಿ ಅಂಗವಿಕಲರ ಸ್ನೇಹಿ ವಾತಾವರಣ ಇಲ್ಲ. ನಗರದ ಹೃದಯ ಭಾಗದಲ್ಲಿರುವ ನಗರಸಭೆಯ ಕಚೇರಿ ಮೊದಲ ಮಹಡಿಯಲ್ಲಿರುವುದರಿಂದ ಅಂಗವಿಕಲರು ಕಚೇರಿ ಪ್ರವೇಶಿಸುವುದು ದುಸ್ತರವಾಗಿದೆ.

ADVERTISEMENT

ಕಟ್ಟಡದ ಒಳಗೆ ಹೋಗಲು ಕಿರಿದಾದ ರ‍್ಯಾಂಪ್‌ ಇದ್ದರೂ ಅಧಿಕಾರಿಗಳು ಇರುವ ಕಚೇರಿ ಪ್ರವೇಶಿಸಲು ಮೆಟ್ಟಿಲು ಹತ್ತಲೇಬೇಕು. ಕನಿಷ್ಠ ಲಿಫ್ಟ್ ಸೌಲಭ್ಯವೂ ಇಲ್ಲ. ಕಾಲಿಲ್ಲದವರು ಕಚೇರಿಯಿಂದ ಅಧಿಕಾರಿಗಳು ಹೊರಬರುವವರೆಗೂ ದ್ವಾರದಲ್ಲಿ ನಿಂತು ಕಾಯಬೇಕು. ಇಲ್ಲವಾದರೆ ತೆವಳಿಕೊಂಡು ಮೆಟ್ಟಿಲು ಹತ್ತಬೇಕು.

ಅವ್ಯವಸ್ಥೆಯ ಜಿಲ್ಲಾ ರಂಗಮಂದಿರ:

ಸಾಹಿತ್ಯ, ಸಂಸ್ಕೃತಿ, ರಂಗಚಟುವಟಿಕೆಗಳಿಗೆ ವೇದಿಕೆಯಾಗಿರುವ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದೊಳಗೆ ಅಂಗವಿಕಲರು ಪ್ರವೇಶಿಸಲು ಸಾಧ್ಯವೇ ಇಲ್ಲದಂತೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ರಂಗಮಂದಿರಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು, ಜಯಂತಿಗಳು, ಉತ್ಸವಗಳು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ‘ಕೈಕಾಲು ಗಟ್ಟಿ’ ಇರುವವರಿಗೆ ಮಾತ್ರ ಭಾಗವಹಿಸಲು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅಂಗವಿಕಲರು ರಂಗಮಂದಿರದೊಳಗೆ ಪ್ರವೇಶಿಸಲು ರ‍್ಯಾಂಪ್‌ ಮಾಡಿಲ್ಲ, ಒಳಗೆ ಲಿಫ್ಟ್‌ ವ್ಯವಸ್ಥೆಯೂ ಇಲ್ಲ. ತೀರಾ ಈಚೆಗೆ ನಿರ್ಮಾಣವಾಗಿರುವ ಕಟ್ಟಡದಲ್ಲಿ ಅಂಗವಿಕಲ ಸ್ನೇಹಿ ವಾತಾವರಣ ಇಲ್ಲದಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಟ್ಟಡದ ಹಿಂಬದಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಎರಡು ಮಹಡಿ ಮೇಲೆ ಇದ್ದು ಅಂಗವಿಕಲರು ಹತ್ತಲು ಸಾಧ್ಯ ಇಲ್ಲ. ವಯಸ್ಕರು ಸಹ ಮೆಟ್ಟಿಲು ಹತ್ತಲು ಏದುಸಿರು ಬಿಡಬೇಕು.

ಇನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಒಳ ಪ್ರವೇಶಿಸಲು ರ‍್ಯಾಂಪ್‌ ವ್ಯವಸ್ಥೆ ಇದ್ದರೂ ಎಸ್‌ಪಿ ಅವರನ್ನು ಭೇಟಿ ಮಾಡಲು ಮೆಟ್ಟಿಲು ಹತ್ತಬೇಕು. ನಗರದ ಬಹುತೇಕ ಪೊಲೀಸ್ ಠಾಣೆಗಳ ಒಳ ಪ್ರವೇಶಿಸಲು ರ‍್ಯಾಂಪ್ ಸೌಲಭ್ಯ ಇಲ್ಲ. ಮಾತು ಬಾರದವರು, ಕಿವಿ ಕೇಳದವರು ದೂರು ನೀಡಲು ನುರಿತ ಸಂಜ್ಞೆ ತಜ್ಞರ ನೆರವು ಸಿಗುವುದಿಲ್ಲ.

ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರ‍್ಯಾಂಪ್‌ ವ್ಯವಸ್ಥೆ ಇದ್ದರೂ ಬ್ಯಾಂಕಿನ ಒಳಗೆ ಅಂಗವಿಕಲರಿಗೆ ಆದ್ಯತೆ ಮೇರೆಗೆ ಸೇವೆಗಳು ದೊರೆಯುತ್ತಿಲ್ಲ ಎಂಬ ದೂರುಗಳಿವೆ. ಪ್ರತ್ಯೇಕ ಸರತಿ ಸಾಲು, ವಿಶೇಷ ಕೌಂಟರ್‌ ಇಲ್ಲದೆ ಸಾಮಾನ್ಯರು ನಿಲ್ಲುವ ಸಾಲಿನಲ್ಲಿಯೇ ಅಂಗವಿಕಲರು ನಿಲ್ಲಬೇಕಿದೆ. ಕೂರಲು ಪ್ರತ್ಯೇಕ ಆಸನಗಳ ವ್ಯವಸ್ಥೆಯೂ ಇಲ್ಲದೆ ನೆಲದ ಮೇಲೆ ಕೂರಬೇಕಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಅಂಗವಿಕಲರ ಸೀಟುಗಳು ಅತಿಕ್ರಮಣವಾಗುತ್ತಿದ್ದು ಕಾಡಿಬೇಡಿ ಬಿಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಬಸ್ ನಿರ್ವಾಹಕರು ಅಂಗವಿಕರಿಗೆ ಮೀಸಲಾದ ಸೀಟುಗಳನ್ನು ತೆರವುಗೊಳಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ, ದೂರದ ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆಗೆ ನಿತ್ಯದ ಕೆಲಸ ಕಾರ್ಯಗಳಿಗೆ ಬಸ್‌ಗಳಲ್ಲಿ ಹೋಗುವಾಗ ಸಮಸ್ಯೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಅಂಗವಿಕರಾದ ಚಾಮರಾಜನಗರದ ರಮೇಶ್‌.

ಶೇ 90ರಷ್ಟು ಕಚೇರಿಗಳಲ್ಲಿ ಸೌಲಭ್ಯ ಇಲ್ಲ:

ಕೊಳ್ಳೇಗಾಲ ನಗರದ ಶೇ 90ರಷ್ಟು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಅಂಗವಿಕಲರ ಸ್ನೇಹಿ ಸೌಲಭ್ಯಗಳು ಇಲ್ಲ. ಕಚೇರಿಗಳ ಒಳಗೆ ಸುಲಭವಾಗಿ ಪ್ರವೇಶಿಸಲು ಅಗತ್ಯವಾಗಿ ಬೇಕಿರುವ ರ‍್ಯಾಂಪ್‌ಗಳ ವ್ಯವಸ್ಥೆಯೇ ಇಲ್ಲ. ಪರಿಣಾಮ ಪ್ರತಿನಿತ್ಯ ಸರ್ಕಾರಿ ಕಚೇರಿಗೆ ಬರುವ ಅಂಗವಿಕಲರು ಒಳ ಪ್ರವೇಶಿಸಲು ಪರದಾಡುತ್ತಿದ್ದಾರೆ.

ಎಲ್ಲೆಲ್ಲಿ ಇಲ್ಲ:

ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿ, ನಗರಸಭೆ, ಪೊಲೀಸ್ ಠಾಣೆಗಳು, ತಾಲ್ಲೂಕು ಪಂಚಾಯಿತಿ, ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ ಸಹಿತ ಹಲವು ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಸ್ನೇಹಿ ಸೌಲಭ್ಯಗಳು ಇಲ್ಲ.

ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ವೈಯಕ್ತಿಕ ಕೆಲಸ ಕಾರ್ಯಗಳಿಗೆ ಅರ್ಜಿ ಹಾಕಲು, ಅಧಿಕಾರಿಗಳ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವ ಅಂಗವಿಕಲರು ಕಚೇರಿ ಪ್ರವೇಶಿಸಲಾಗದೆ ಹೊರಗೆ ಮೂಲೆಯಲ್ಲೋ, ಗೇಟಿನ ಬಳಿ ನಿಂತು ಅಧಿಕಾರಿಗಳು ಬರುವುದನ್ನೇ ಕಾಯಬೇಕು. 

ಮಧ್ಯಾಹ್ನದ ಭೋಜನಕ್ಕೆ ಅಥವಾ ಕಚೇರಿ ಕಾರ್ಯಗಳಿಗೆ ಅಧಿಕಾರಿಗಳು ಹೊರಗೆ ಬಂದಾಗ ಅಹವಾಲುಗಳನ್ನು ಹೇಳಿಕೊಳ್ಳಬೇಕು. ಕಚೇರಿಯೊಳಗಿರುವ ಶೌಚಾಲಯವನ್ನೂ ಬಳಸಲಾಗದೆ ಬಯಲಿನಲ್ಲಿ ಶೌಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೊದಲ ಮಹಡಿಯಲ್ಲಿ ತಹಶೀಲ್ದಾರ್ ಕಚೇರಿ:

ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿಯೇ ಅಂಗವಿಕಲ ಸ್ನೇಹಿ ವಾತಾವರಣ ಇಲ್ಲ. ತಹಸೀಲ್ದಾರ್ ಕಚೇರಿ ಮೊದಲ ಮಹಡಿಯಲ್ಲಿ ಇರುವ ಕಾರಣ ಅಂಗವಿಕಲರು ಸಮಸ್ಯೆ ಹೇಳಿಕೊಳ್ಳಲು, ಅಹವಾಲು, ದೂರು, ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಅಂಗವಿಕಲ ಸ್ನೇಹಿ ವಾತಾವರಣ:

ಯಳಂದೂರು ತಾಲ್ಲೂಕಿನ ಬಹುತೇಕ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಅಂಗವಿಕಲ ಸ್ನೇಹಿ ವಾತಾವರಣ ಇದೆ. ತಾಲ್ಲೂಕು ಕಚೇರಿ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂರಲು ಆಸನಗಳ ವ್ಯವಸ್ಥೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಹಾದಿ ಸುಗಮವಾಗಿದೆ. ಆದರೆ, ಅಂಚೆ ಕಚೇರಿ, ಬ್ಯಾಂಕ್‌ಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಅಂಗವಿಕಲ ಸ್ನೇಹಿ ವಾತಾವರಣ ಇಲ್ಲ.

ಜನ ಏನು ಹೇಳ್ತಾರೆ?

‘ಎಲ್ಲ ಇಲಾಖೆಗಳಿಗೆ ಸೂಚನೆ’

ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಜಿಲ್ಲಾಡಳಿತದಲ್ಲಿ ಅಂಗವಿಕಲ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ.

–ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾಧಿಕಾರಿ

‘ಸೌಲಭ್ಯಕ್ಕೆ ಪತ್ರ’

ಎಲ್ಲ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಅಂಗವಿಕಲರಿಗೆ ತಡೆರಹಿತ ಪ್ರವೇಶಕ್ಕೆ ರ‍್ಯಾಂಪ್‌ ಹಾಗೂ ವೀಲ್‌ಚೇರ್‌ಗಳ ವ್ಯವಸ್ಥೆ ಇರಬೇಕು. ಈ ಸಂಬಂಧ ಎಲ್ಲ ಇಲಾಖೆಗಳಿಗೂ ಪತ್ರ ಬರೆಯಲಾಗುವುದು.

–ಮೀನಾಕ್ಷಿ, ಜಿಲ್ಲಾ ಅಂಗವಿಲರ ಕಲ್ಯಾಣ ಅಧಿಕಾರಿ

‘ಮುಕ್ತ ವಾತಾವರಣ ಇರಲಿ’

ಸರ್ಕಾರಿ ಕಚೇರಿ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗ ಅಂಗವಿಕಲ ಸ್ನೇಹಿ ಸೌಲಭ್ಯಗಳು ಕಡ್ಡಾಯವಾಗಿ ನಿರ್ಮಿಸುವಂತೆ ಷರತ್ತು ಹಾಕಿ ಪರವಾನಗಿ ನೀಡಬೇಕು. ಇದರಿಂದ ಅಂಗವಿಕಲರೂ ಸಾಮಾನ್ಯರಂತೆ ಮುಕ್ತವಾಗಿ ಓಡಾಡಬಹುದು.

–ರಾಮಣ್ಣ, ಕೆಎಸ್‌ಆರ್‌ಟಿಸಿ ಅಂಗವಿಕಲ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ

‘ಸ್ಥಳೀಯ ಸಂಸ್ಥೆಗಳ ಅನುದಾನ ಬಳಕೆ’

ಪಟ್ಣಣ ಪಂಚಾಯಿತಿ 2019-20 ರಿಂದ 2024-25ನೇ ಸಾಲಿನವರೆಗೂ ರ‍್ಯಾಂಪ್‌ ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ಶೇ 5 ಹಣಕಾಸನ್ನು ಬಳಸಿಕೊಂಡು ಅಂಗವಿಕಲರ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಿಗೂ ಆರ್ಥಿಕ ಸವಲತ್ತು ನೀಡಿ ಅಭಿವೃದ್ಧಿಗೆ ಶ್ರಮಿಸಲಾಗಿದೆ.

–ಮಹೇಶ್ ಕುಮಾರ್, ಯಳಂದೂರು ಪ.ಪಂ ಮುಖ್ಯಾಧಿಕಾರಿ

‘ವ್ಯವಸ್ಥೆ ಬೇಕು’

ಅಂಗವೈಕಲ್ಯವುಳ್ಳವರು ಕನಿಷ್ಠ ಸರ್ಕಾರಿ ಕಚೇರಿಗಳಿಗೆ ಸುಲಭವಾಗಿ ಪ್ರವೇಶಿಸುವ ವ್ಯವಸ್ಥೆ ಮಾಡಬೇಕು.

–ಅಬ್ದುಲ್ ಮಲೀಕ್, ಕಾವಲು ಪಡೆ ಅಧ್ಯಕ್ಷ

‘ಹೆದ್ದಾರಿ ಬದಿ ಕಚೇರಿ– ಸಮಸ್ಯೆ’

ಕೆಲವು ಕಚೇರಿಗಳು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿದ್ದು ಎತ್ತರವಾದ ಪಾದಚಾರಿ ರಸ್ತೆ ನಿರ್ಮಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಕಚೇರಿಗೆ ತೆರಳಲು ಅಂಗವಿಕಲರಿಗೆ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಇತ್ತ ಆಸ್ಥೆ ವಹಿಸಲಿ.

–ಮಂಟಯ್ಯ. ಕೆಸ್ತೂರು

‘ಕುರ್ಚಿ, ಶೌಚಾಲಯ..’

ಕೆಲವು ಸರ್ಕಾರಿ ಕಚೇರಿಗಳಲ್ಲಿ ರ‍್ಯಾಂಪ್‌ಗಳಿದ್ದರೂ ಕಚೇರಿ ಒಳಗಡೆ ಕುರ್ಚಿಗಳ ವ್ಯವಸ್ಥೆ ಇಲ್ಲ. ಪ್ರತ್ಯೇಕ ಶೌಚಾಲಯ ಇಲ್ಲ.

–ದೇವರಾಜು, ದೇಶವಳ್ಳಿ.

‘ಸುಗಮ ಅನುದಾನ ಮೀಸಲು’

ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದ್ದು ವ್ಯಯಿಸಲಾಗುತ್ತಿದೆ.

–ರಮೇಶ್ ಬಾಬು,ತಹಶೀಲ್ದಾರ್

‘ಅಂಗವೈಕಲ್ಯ ಶಾಪ’

ಅಂಗವಿಕಲರಾಗಿ ಹುಟ್ಟುವುದು ಬೇಡ ಎನ್ನುವಷ್ಟು ಬೇಸರವಾಗಿದೆ. ಯಾವ ಕಚೇರಿಗಳಲ್ಲೂ ಅಂಗವಿಕಲರ ಸ್ನೇಹಿ ವಾತಾವರಣ ಇಲ್ಲ, ಅಂಗವಿಕಲರ ಪಾಡು ಪ್ರಾಣಿಗಳಿಗಿಂತಲೂ ಕಡೆಯಾಗಿದೆ.

–ರಂಗಸ್ವಾಮಿ, ಅಂಗವಿಕಲ

‘ಶೀಘ್ರ ರ‍್ಯಾಂಪ್ ವ್ಯವಸ್ಥೆ’

ಪ್ರತಿ ಸರ್ಕಾರಿ ಕಚೇರಿಗಳಲ್ಲೂ ಅಂಗವಿಕಲರಿಗೆ ವಿಶೇಷ ರ‍್ಯಾಂಪ್‌ ಸೇರಿದಂತೆ ಅನೇಕ ಸೌಲಭ್ಯಗಳು ಇರಬೇಕು. ಸೌಲಭ್ಯ ಇಲ್ಲದ ಕಚೇರಿಗಳನ್ನು ಗುರುತಿಸಿ ಶೀಘ್ರ ವ್ಯವಸ್ಥೆ ಮಾಡಲಾಗುವುದು.

– ಮಹೇಶ್, ಉಪ ವಿಭಾಗಾಧಿಕಾರಿ

‘ಸರ್ಕಾರ ವಿಫಲ’

ಅಂಗವಿಕರ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ, ಆದರೆ ಅಂಗವಿಕಲರಿಗೆ ಸೌಲಭ್ಯಗಳು ತಲುಪಿಸುವಲ್ಲಿ ವಿಫಲವಾಗಿದೆ.

–ನಾಗರಾಜು, ಕೊಳ್ಳೇಗಾಲ

ಅಂಗವಿಕಲ ಸ್ನೇಹಿ ಸೌಳಭ್ಯ ಇಲ್ಲದ ಚಾಮರಾಜನಗರ ನಗರಸಭೆಯ ಕಟ್ಟಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.