ADVERTISEMENT

ಸೋಲಿಗ ಸಂಸ್ಕೃತಿ ಪಸರಿಸುವ ಪದ್ಮ

ಜಾನಪದ, ಸೋಲಿಗರ ಗೀತೆಗಳನ್ನು ಹಾಡುವ ತಂಡ ಕಟ್ಟಿಕೊಂಡು ಪ್ರದರ್ಶನ

ರವಿ ಎನ್‌
Published 19 ನವೆಂಬರ್ 2019, 19:45 IST
Last Updated 19 ನವೆಂಬರ್ 2019, 19:45 IST
ಪದ್ಮ ಬಸವರಾಜು
ಪದ್ಮ ಬಸವರಾಜು   

ಚಾಮರಾಜನಗರ: ‘ಗೊರು ಗೊರು ಗೊರುಕನ’ ಎಂಬುದುಸೋಲಿಗರ ಹಾಡು. ಇದನ್ನು ಹಾಡುತ್ತಿದ್ದರೆ ಕೇಳುವುದೇ ಆನಂದ. ವಿಶಿಷ್ಟ ಸಂಸ್ಕೃತಿ ಹಾಗೂ ಭಾಷೆಯ ಸೊಗಡು ಹೊಂದಿರುವ ಸೋಲಿಗರ ಸೋಲಿಗರ ಹಾಡನ್ನು ಜನಪ್ರಿಯಗೊಳಿಸಬೇಕೆಂಬ ಹಂಬಲ ಹೊತ್ತಿದ್ದಾರೆಪದ್ಮ ಬಸವರಾಜು.

ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಯರಕನಗದ್ದೆ ಕಾಲೋನಿಯ ನಿವಾಸಿಯಾಗಿರುವ ಪದ್ಮ ಅವರ ತಂದೆ ಬಸವರಾಜು ಜಾನಪದ ಕಲಾವಿದರು. ಅನೇಕ ವರ್ಷಗಳಿಂದ ‘ಸೋಲಿಗ ಪುಸುಮಲೇತುಕಲಾ ಸಂಘ’ ಎಂಬ ತಂಡ ಕಟ್ಟಿಕೊಂಡು ಜಾನಪದ ಗೀತೆ, ಸೋಲಿಗ ಹಾಡುಗಳನ್ನು ಅಭ್ಯಾಸ ಮಾಡಿ, ಹಾಡುವುದರಲ್ಲಿ ಪಳಗಿದ್ದಾರೆ ಪದ್ಮ.

ಹಾಡುಗಾರಿಕೆ: ‘ಚಿಕ್ಕ ವಯಸ್ಸಿನಿಂದಲೂ ನನಗೆ ಸೋಲಿಗ ಹಾಡುಗಾರಿಕೆಎಂದರೆ ತುಂಬ ಇಷ್ಟ ಆದ್ದರಿಂದ ಓದಿನ ಕಡೆ ಹೆಚ್ಚು ಗಮನ ಹರಿಸಲಿಲ್ಲ.2015ರಲ್ಲಿಬೆಂಗಳೂರಿನಲ್ಲಿ ಹಂಸಲೇಖ ಅವರು ಸ್ಥಾಪಿಸಿರುವ ಸಂಸ್ಥೆಗೆ ಸೇರಿದೆ. ಆದರೆ, ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅದೇ ವರ್ಷ10 ಯುವತಿಯರ ‘ಗುಬ್ಬಿ ಆಲೆ ಕಲಾತಂಡ’ ಕಟ್ಟಿದೆ. ಈಗ ಆ ತಂಡದ ಮೂಲಕ ಸೋಲಿಗ ಯುವತಿಯರಿಗೆ ಹಾಡು ಹೇಳಿಕೊಡುತ್ತಿದ್ದೇನೆ’ ಎಂದು ಪದ್ಮ ಅವರು ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

ಸಮುದಾಯ ಭವನದಲ್ಲಿ ಅಭ್ಯಾಸ: ‘ಪ್ರತಿದಿನಬೆಟ್ಟದಲ್ಲಿರುವಗಿರಿಜನ ಸಮುದಾಯ ಭವನದಲ್ಲಿ ಬೆಳಿಗ್ಗೆ 7ಗಂಟೆಯಿಂದ 10.30ರ ವರೆಗೆ ಅಭ್ಯಾಸದಲ್ಲಿ ನಿರತರಾಗುತ್ತೇವೆ. ಎರಡು ಕಲಾ ತಂಡಗಳಿರುವುದರಿಂದ ಕಾರ್ಯಕ್ರಮಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ’ ಎನ್ನುತ್ತಾರೆ ಅವರು.

ಇಲಾಖೆಗಳ ಉತ್ತೇಜನ: ‘ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿಭಾಗವಹಿಸಿರುವುದರಿಂದಕನ್ನಡ ಮತ್ತು ಸಂಸ್ಕೃತಿ ಮತ್ತು ಸಮಾಜ ಕಲ್ಯಾಣ ಇಲಾಖೆ ನಮ್ಮನ್ನು ಗುರುತಿಸಿಕಾರ್ಯಕ್ರಮಗಳನ್ನು ನೀಡುತ್ತಿದೆ. 2014ರಲ್ಲಿ ಸ್ವೀಡನ್‌ಗೆ ಹೋಗಿದ್ದೆವು. ಇದೇ ಡಿಸೆಂಬರ್‌ ಕೊನೆ ವಾರದಲ್ಲಿ ಲಂಡನ್‌ಗೆ ಹೋಗುವ ಅವಕಾಶ ದೊರಕಿದೆ’ ಎಂದು ಖುಷಿಯಿಂದ ಹೇಳಿಕೊಂಡರು.

ಆರ್ಥಿಕ ಸದೃಢತೆ: ಸೋಲಿಗರ ಹಾಡುಗಳನ್ನು ಜನರು ಕುತೂಹಲದಿಂದ ಕೇಳುತ್ತಾರೆ. ಎಲ್ಲರೂ ಮೆಚ್ಚುತ್ತಾರೆ. ಖಾಸಗಿ, ಸರ್ಕಾರಿ ಕಾರ್ಯಕ್ರಮಗಳಿಗೆ ಪ್ರತ್ಯೇಕ ಸಂಭಾವನೆ ಇದೆ .ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಹಾಗೂ ತಂಡದ ಕಲಾವಿದರಿಗೆ ಅನುಗುಣವಾಗಿ ಸಂಭಾವನೆ ಸಿಗುತ್ತದೆ. ಸರ್ಕಾರದ ಮಟ್ಟದಲ್ಲಿ ನಮ್ಮಂತಹ ಕಲಾವಿದರನ್ನು ಗುರುತಿಸಬೇಕು. ಇದರಿಂದ ಬಡ ಕಲಾವಿದರು ಆರ್ಥಿಕವಾಗಿ ಸದೃಢರಾಗಬಹುದು’ ಎನ್ನುತ್ತಾರೆ ಅವರು.

ಸೋಲಿಗರ ಸಂಸ್ಕೃತಿ ಹರಡುವ ಆಶಯ

‘ಪ್ರತಿಭಾ ಕಾರಂಜಿಯಂತಹ ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸ ಮಾಡಿಕೊಂಡು ಇಂದು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನೀಡುವಂತಹ ಧೈರ್ಯ ಬಂದಿದೆ. ಹಾಡುಗಳ ಪ್ರಕಾರಗಳಲ್ಲಿ ನಮ್ಮ ಸೋಲಿಗರ ಹಾಡು ನನಗೆ ಇಷ್ಟ. ಸೋಲಿಗ ಯುವತಿಯರನ್ನು ಮುಖ್ಯವಾಹಿನಿಗೆ ತರುವ ಜೊತೆ ಜೊತೆಗೆ ನಮ್ಮ ವಿಶಿಷ್ಟ ಸಂಸ್ಕೃತಿಯ ಹಾಡನ್ನು ಎಲ್ಲೆಡೆ ಪಸರಿಸಬೇಕು ಎನ್ನುವ ಮಹದಾಸೆ ಇದೆ’ ಎನ್ನುತ್ತಾರೆ ಪದ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.