ADVERTISEMENT

ಉದಾಸೀನ ಬೇಡ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಕೊರೊನಾ ವಿರುದ್ಧ ಸಮರಕ್ಕೆ ಸಂಕಲ್ಪ: ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:42 IST
Last Updated 28 ಮಾರ್ಚ್ 2020, 14:42 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ: ‘ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಕೈಗೊಳ್ಳಲಿರುವ ಕ್ರಮಗಳಲ್ಲಿ ಯಾರೂ ಉದಾಸೀನ ತೋರಬಾರದು. ಸನ್ನಿವೇಶವನ್ನು ಹಗುರವಾಗಿ ಪರಿಗಣಿಸದೆ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸೋಂಕು ಹರಡುವುದನ್ನು ತಡೆಯುವುದಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ‘ಕೊರೊನಾ ವೈರಸ್‌ ವಿರುದ್ಧದ ದೀರ್ಘ ಯುದ್ಧದಲ್ಲಿ ಎಲ್ಲರೂ ಸೇರಿ ಗೆಲ್ಲುವ ಸಂಕಲ್ಪ ಮಾಡಬೇಕು.ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಆರೋಗ್ಯ ಸಿಬ್ಬಂದಿ, ನಾಗರಿಕರು ಸೇರಿದಂತೆ ಸರ್ವರೂ ಇದಕ್ಕೆ ಸಹಕರಿಸಬೇಕು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ತಡೆಗಾಗಿ ಜನತೆಯಲ್ಲಿ ಕಳಕಳಿಯಿಂದ ಮನವಿ ಮಾಡಿದ್ದಾರೆ. ಸೋಂಕು ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ಅವರು ಮುಖ್ಯಮಂತ್ರಿ ಅವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ’ ಎಂದರು.

ADVERTISEMENT

‘ಮುಂಜಾಗ್ರತಾ ಕ್ರಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ. ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧೋಪಚಾರ, ವಾರ್ಡುಗಳ ವ್ಯವಸ್ಥೆ, ಸ್ವಚ್ಚತೆ, ಸ್ಯಾನಿಟೈಸರ್, ಮುಖಗವಸುಗಳು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆ, ವಿಶೇಷ ನಿಗಾ ಘಟಕಗಳಲ್ಲಿ ಲೋಪಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ತಪಾಸಣೆ ಬಿಗಿಗೊಳಿಸಿ: ‘ಜಿಲ್ಲೆಯನ್ನುಜಿಲ್ಲೆ ಸಂಪರ್ಕಿಸುವ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಬೇಕು. ಕಾಲುದಾರಿಗಳಲ್ಲಿಯೂ ಸಂಚಾರಕ್ಕೆ ಅವಕಾಶ ಸಿಗಬಾರದು. ಜನರು ಹಾಗೂ ವಾಹನ ಸಂಚಾರ ನಿರ್ಬಂಧಕ್ಕೆ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನರು ಮನೆಯಲ್ಲಿಯೇ ಇರಬೇಕು. ಅವರಿಗೆ ಔಷಧಿ, ದಿನಸಿ, ತರಕಾರಿ, ಹಾಲು, ಹಣ್ಣು ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳಿಗೆ ಕೊರತೆ ಕಾಡದಂತೆ ಖರೀದಿಸಲು ಅವಕಾಶ ನೀಡಬೇಕು. ಖರೀದಿ ಸಮಯವನ್ನು ದುರ್ಬಳಕೆ ಮಾಡಿಕೊಳ್ಳದಂತೆ ತಿಳಿವಳಿಕೆ ನೀಡಬೇಕು’ ಎಂದು ಸಲಹೆ ನೀಡಿದರು.

‘ದಿಗ್ಬಂಧನ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳುವುದನ್ನು ಸಹಿಸುವುದಿಲ್ಲ. ಜನರಿಗೆ ದೈನಂದಿನ ಅಗತ್ಯ ವಸ್ತುಗಳಿಗೆ ಕೊರತೆ ಉಂಟು ಮಾಡಿ ಅಭಾವ ಸೃಷ್ಟಿಸಬಾರದು. ಎಲ್ಲಾ ದಿನಸಿ ಹಾಗೂ ತರಕಾರಿ ಇತರೆ ಅವಶ್ಯಕ ವಸ್ತುಗಳ ಅಂಗಡಿಗಳ ಮುಂದೆ ದರಪಟ್ಟಿ ಪ್ರದಶಿಸಬೇಕು. ದಿನಸಿ, ಆಹಾರ ಪದಾರ್ಥಗಳು ಜಿಲ್ಲೆಗೆ ಅಗತ್ಯವಿರುವ ಪ್ರಮಾಣದಲ್ಲಿ ದಾಸ್ತಾನು ಇರಬೇಕು. ವರ್ತಕರಿಗೆ ಪಾಸ್ ನೀಡುವ ಮೂಲಕ ನೆರೆ ಜಿಲ್ಲೆಗಳಿಂದ ದಿನಸಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಖರೀದಿಸಲು ಅವಕಾಶ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನ್‌ಕುಮಾರ್,ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಮಹೇಶ್, ಸದಸ್ಯರಾದ ಕೆರೆಹಳ್ಳಿ ನವೀನ್, ಸಿ.ಎನ್. ಬಾಲರಾಜು,ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್‌ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ. ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ಉಪವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಚೆಕ್‌ಪೋಸ್ಟ್, ಆಸ್ಪತ್ರೆ, ನಿರಾಶ್ರಿತರ ಕೇಂದ್ರಕ್ಕೆ ಭೇಟಿ

ಸಭೆಯ ನಂತರ ಎಸ್‌.ಸುರೇಶ್‌ ಕುಮಾರ್ ಅವರು, ಚಾಮರಾಜನಗರ ಪಟ್ಟಣದಲ್ಲಿ ಆರಂಭಿಸಿರುವ ನಿರಾಶ್ರಿತರ ತಂಗುದಾಣಕ್ಕೆ ಭೇಟಿ ಕೊಟ್ಟು ಅಲ್ಲಿ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಳಿಕ ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕೈಗೊಳ್ಳಲಾಗಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರು. ಪ್ರತ್ಯೇಕ ವಾರ್ಡ್‌ಗಳು, ಔಷಧೋಪಚಾರ, ನೈರ್ಮಲ್ಯಕ್ಕಾಗಿ ಮಾಡಲಾಗಿರುವ ಸಿದ್ಧತೆಗಳನ್ನು ವೀಕ್ಷಿಸಿದರು.

ತದನಂತರ ಜ್ವರ ತಪಾಸಣಾ ಕೇಂದ್ರವನ್ನಾಗಿ ಆರಂಭಿಸಲು ನಿರ್ಧರಿಸಿರುವ ಪೇಟೆ ಪ್ರೈಮರಿ ಶಾಲಾ ಅವರಣಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ನಂತರ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಕರ್ನಾಟಕ-ಕೇರಳ ಗಡಿ ಭಾಗವಾದ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿ ನಡೆಸಲಾಗುತ್ತಿರುವ ತಪಾಸಣೆ ಕಾರ್ಯವನ್ನು ವೀಕ್ಷಿಸಿದರು. ಅವಶ್ಯಕ ಸಾಮಗ್ರಿ ಸಾಗಿಸುವ ವಾಹನಗಳಿಗೆ ಮಾಡಲಾಗುತ್ತಿರುವ ಸ್ಯಾನಿಟೈಜೇಷನ್ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಬಳಿಕ ಗುಂಡ್ಲುಪೇಟೆ ಪಟ್ಟಣದಲ್ಲಿ ಪ್ರಮುಖ ಅಧಿಕಾರಿಗಳ ಸಭೆಯನ್ನೂ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.