ADVERTISEMENT

ಸಿನಿಮಾಗಳಿಂದ ಸಮಾಜಕ್ಕೆ ಸಂದೇಶ ನೀಡಿದ ವಿಷ್ಣು ; ಡಿವೈಎಸ್‌ಪಿ ಸ್ನೇಹಾ ರಾಜ್

ಕನ್ನಡ ನೆಲ ಜಲ ಸಾಂಸ್ಕೃತಿಕ ವೇದಿಕೆಯಿಂದ ವಿಷ್ಣು ನೆನಪಿನೋತ್ಸವ: ರಾಜ್ಯ ಮಟ್ಟದ ಪದಬಂಧ ಸ್ಪರ್ಧೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 5:42 IST
Last Updated 31 ಡಿಸೆಂಬರ್ 2025, 5:42 IST
ಚಾಮರಾಜನಗರದ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆಯ ವತಿಯಿಂದ ದಿ.ಡಾ.ವಿಷ್ಣುವರ್ಧನ್ 16ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ವಿಷ್ಣು ಪದಬಂಧ ಸ್ಪರ್ಧೆಯನ್ನು ಡಿವೈಎಸ್‌ಪಿ ಸ್ನೇಹಾ ರಾಜ್ ಉದ್ಘಾಟಿಸಿದರು
ಚಾಮರಾಜನಗರದ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆಯ ವತಿಯಿಂದ ದಿ.ಡಾ.ವಿಷ್ಣುವರ್ಧನ್ 16ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ವಿಷ್ಣು ಪದಬಂಧ ಸ್ಪರ್ಧೆಯನ್ನು ಡಿವೈಎಸ್‌ಪಿ ಸ್ನೇಹಾ ರಾಜ್ ಉದ್ಘಾಟಿಸಿದರು   

ಚಾಮರಾಜನಗರ: ನಟ ವಿಷ್ಣುವರ್ಧನ್‌ ಸಿನಿಮಾಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದು ನಗರ ಡಿವೈಎಸ್‌ಪಿ ಸ್ನೇಹಾ ರಾಜ್ ಹೇಳಿದರು.

ನಗರದ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆಯ ವತಿಯಿಂದ ದಿ.ಡಾ.ವಿಷ್ಣುವರ್ಧನ್ ಅವರ 16ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ವಿಷ್ಣು ಪದಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿಷ್ಣುವರ್ಧನ್ ನಟರಾಗಿ  ಅಭಿನಯದ ಮೂಲಕವೇ ಜೀವನ ಸಂದೇಶಗಳನ್ನು ನೀಡಿದ್ದಾರೆ. ಹಲವರ ಬದುಕು ಬದಲಾಗಲು ಕಾರಣರಾಗಿದ್ದಾರೆ ಎಂದರು.

ಸಾರ್ವಜನಿಕರು ಪ್ರತಿದಿನ ಹೊಸ ಪದಗಳನ್ನು ಕಲಿಯಬೇಕು, ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಒಮ್ಮೆ ಸಂಪಾದಿಸಿದ ಜ್ಞಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಯಾರೂ ಕಬಳಿಸಲು ಸಾಧ್ಯವಿಲ್ಲ. ಪುಸ್ತಕಗಳ ಓದಿನ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಮಾತನಾಡಿ, ನಟನೆ ಜತೆಗೆ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ವಿಷ್ಣುವರ್ಧನ್‌ ಸರಳತೆ, ಪ್ರೀತಿ, ವಿಶ್ವಾಸದ ಗುಣಗಳ ಜೊತೆಗೆ ಆಧ್ಯಾತ್ಮಿಕತೆಯನ್ನು ರೂಢಿಸಿಕೊಂಡಿದ್ದರು ಎಂದರು.

ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ಯತೀತ ವ್ಯಕ್ತಿಯಾಗಿದ್ದ ವಿಷ್ಣುವರ್ಧನ್‌ ಅವರಿಗೆ ಎಲ್ಲ ವರ್ಗಗಳ ಅಭಿಮಾನಿಗಳಿದ್ದಾರೆ. ದೈಹಿಕವಾಗಿ ಅಗಲಿ 16 ವರ್ಷಗಳು ಕಳೆದರೂ ಚಿತ್ರಗಳ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಇಂದಿಗೂ ಜನಬೆಂಬಲ ದೊರೆಯುವುದು ವಿಷ್ಣು ನಟನೆಗಿರುವ ಶಕ್ತಿ ಎಂದರು.

ರಾಜ್ಯ ಮಟ್ಟದ ಪದಬಂಧ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪದಬಂಧ ರಚನೆ ಮಾಡಿದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬಳಿಕ ವಿಷ್ಣು ರಸಮಂಜರಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಕೀಲ ಅರುಣ್ ಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ವೃಷಭೇಂದ್ರಪ್ಪ, ರೈತ ಹೋರಾಟಗಾರ ಆಲೂರು ಮಲ್ಲು, ಉದ್ಯಮಿ ಶ್ರೀನಿಧಿ ಕುದರ್, ಗಾಯಕ ಸುರೇಶ್ ನಾಗ್ ಹಾಗೂ ಮಹೇಶ್, ಸುಗಂಧರಾಜ್, ಕೂಸಣ್ಣ, ರಾಮಸಮುದ್ರ ವೇಣುಗೋಪಾಲ್, ವಕೀಲರಾದ ಮಲ್ಲು, ಅನಂದ ಭಗೀರಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.