ADVERTISEMENT

ನಾಲೆಗಳ ಸ್ಥಿತಿಗತಿ ವೀಕ್ಷಣೆ, ಅಧಿಕಾರಿಗಳೊಂದಿಗೆ ಸಭೆ

ಸರಣಿ ಕಾರ್ಯಕ್ರಮಗಳಲ್ಲಿ ಭಾಗಿಯಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 15:30 IST
Last Updated 8 ಜನವರಿ 2020, 15:30 IST
ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗುಂಡೆಸತದ ಮೂಲಕ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿದರು
ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗುಂಡೆಸತದ ಮೂಲಕ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿದರು   

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ಜಿಲ್ಲಾಕೇಂದ್ರದಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಮಂಗಳವಾರ ರಾತ್ರಿಯೇ ನಗರಕ್ಕೆ ಬಂದಿದ್ದ ಅವರು, ಬೆಳಿಗ್ಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರೊಂದಿಗೆ ತಾಲ್ಲೂಕಿನ ಅಟ್ಟುಗೂಳಿಪುರ ಉಪವಿಭಾಗ ವ್ಯಾಪ್ತಿಯ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಡಿ ಬರುವ ನದಿನಾಲೆಗಳು ಮತ್ತು ವಿತರಣಾ ನಾಲೆಗಳು ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಂದಕವಾಡಿ, ಕೋಡಿಮೋಳೆ, ಸಿದ್ಧಯ್ಯನಪುರ ವ್ಯಾಪ್ತಿಯಲ್ಲಿ ಬರುವ ನಾಲೆಗಳನ್ನು ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಗತ್ಯ ನಿರ್ವಹಣೆ ಕುರಿತು ಸೂಚನೆ ನೀಡಿದರು.ಮುರಳಿ ಹಳ್ಳಿ ನಾಲೆ, ಸರಗೂರು ನಾಲೆ, ಕುಂಬೇಶ್ವರ ಉಪಕಾಲುವೆ, ಚಿಕ್ಕಹೊಳೆ ಎಡದಂಡೆ ಕಾಲುವೆ, ಬಂಡಿಗೆರೆ ಕಾಲುವೆಗಳಲ್ಲಿ ಕೈಗೊಂಡಿರುವ ಹೂಳು ತೆಗೆಯುವಿಕೆ ಮತ್ತು ಜಂಗಲ್ ತೆರವುಗೊಳಿಸಿರುವ ಕೆಲಸಗಳ ಪರಿಶೀಲನೆ ನಡೆಸಿದರು.

ADVERTISEMENT

ನಾಲೆಗಳಿಗೆ ಬಾಕಿ ಉಳಿದಿರುವ ನಿರ್ವಹಣಾ ಕಾಮಗಾರಿಯನ್ನು ಕಾಲುವೆಗೆ ನೀರು ಹರಿಸುವ ಮೊದಲು ಪೂರ್ಣಗೊಳಿಸಬೇಕು. ಜನವರಿ 15ರೊಳಗೆ ಎಲ್ಲ ಕಾಮಗಾರಿಗಳನ್ನು ಮುಗಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಚೇರಿ ಉದ್ಘಾಟನೆ: ನಂತರ ನಗರದ ಚೆನ್ನೀಪುರಮೋಳೆ ಹೊಸ ಬಡಾವಣೆಯ ಗುರುರಾಘವೇಂದ್ರ ಚಿತ್ರಮಂದಿರ ಪಕ್ಕದಲ್ಲಿ ನಿರ್ಮಿಸಿರುವ ಚಾಮರಾಜನರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ನೂತನ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.₹98.38 ಲಕ್ಷ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ.

ಕ್ರೀಡಾಕೂಟಕ್ಕೆ ಚಾಲನೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸುರೇಶ್‌ ಕುಮಾರ್‌ ಚಾಲನೆ ನೀಡಿದರು.ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಬೇಡ್ಕರ್‌ ಭವನದಲ್ಲಿ ನಡೆದ‌ಅಂಗವಿಕಲರಿಗೆ ವಿವಿಧ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮದಲ್ಲೂ ಭಾಗಿಯಾದರು.

ಮಧ್ಯಾಹ್ನದ ನಂತರಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊಳ್ಳೇಗಾಲದ ಪ್ರಗತಿಪರ ಸಂಘಟನೆಗಳೊಂದಿಗೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮತ್ತು ಮಹದೇಶ್ವರ ಬೆಟ್ಟದಲ್ಲಿ ಜರುಗುವ ಶಿವರಾತ್ರಿ, ಯುಗಾದಿಜಾತ್ರಾ ಮಹೋತ್ಸವ ಕುರಿತ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಸಭೆ ನಡೆಸಿದರು.

ಸಂಜೆ ವಾರ್ತಾ ಇಲಾಖೆಯು ಯಡಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗಾಂಧಿ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದರು. ನಂತರ ವೈದ್ಯಕೀಯ ಕಾಲೇಜಿನ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಪರಿಶೀಲನೆ ನಡೆಸಿ, ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್ ಮಹೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್ ಶೋಭ, ಉಪಾಧ್ಯಕ್ಷ ಜಿ.ಬಸವಣ್ಣ, ಜಿಲ್ಲಾಪ‍ಂಚಾಯಿತಿ ಸದಸ್ಯರಾದ ಸಿ.ಎನ್.ಬಾಲರಾಜು, ಆರ್‌.ಬಾಲರಾಜು, ಕೆರೆಹಳ್ಳಿ ನವೀನ್‌, ರಮೇಶ್‌,ಜಿಲ್ಲಾಧಿಕಾರಿ ಬಿ.ಬಿ ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್. ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್, ಉಪವಿಭಾಗಾಧಿಕಾರಿ ನಿಖಿತ ಚಿನ್ನಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಆನೆಮಡುವಿನಕೆರೆ ತುಂಬಿಸುವ ಯೋಜನೆ ಪರಿಶೀಲನೆ

ತಾಲ್ಲೂಕಿನ ಆನೆಮಡುವಿನ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯನ್ನೂ ಸುರೇಶ್‌ ಕುಮಾರ್‌ ಅವರು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ಉಡಿಗಾಲ ಸಮೀಪದ ಜಮೀನಿನಲ್ಲಿ ನಿರ್ಮಿಸಲಾಗಿರುವ ತೊಟ್ಟಿಗೆ ಪೈಪ್‌ ಮೂಲಕ ನೀರು ಹರಿದು ಬರುತ್ತಿರುವುದನ್ನು ವೀಕ್ಷಿಸಿದ ಸಚಿವರು, ಅಲ್ಲಿ ಪೂಜೆಯನ್ನೂ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ‘ 20 ಕೆರೆಗಳಿಗೆ ನೀರು ತುಂಬಿಸುವ ಆಲಂಬೂರು ಏತ ಯೋಜನೆಯಲ್ಲಿ ಆನೆಮಡುವಿನ ಕೆರೆ ಬಿಟ್ಟುಹೋಗಿತ್ತು. ನಂತರ ಅದನ್ನು ಸೇರ್ಪಡೆಗೊಳಿಸಿ, ₹1.20 ಕೋಟಿ ವೆಚ್ಚದಲ್ಲಿ ತಮ್ಮಡಹಳ್ಳಿ ಕೆರೆಯಿಂದ ನೀರು ಹರಿಸುವ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯ ಮೂಲಕ ಕೈಗೆತ್ತಿಕೊಳ್ಳಲಾಗಿತ್ತು. ಅರ್ಧದವರೆಗೆ ಪೈಪ್‌ಲೈನ್‌ನಲ್ಲಿ ನೀರು ತಂದು, ನಂತರ ಆರು ಕಿ.ಮೀ ದೂರದವರೆಗೆ ಗುರುತ್ವಾಕರ್ಷಣೆಯಲ್ಲಿ ನೀರು ಹರಿದು ಕೆರೆ ಸೇರುತ್ತಿದೆ’ ಎಂದು ಹೇಳಿದರು.

‘ಈ ಭಾಗದ ಜನರಿಗೆ ಅಗತ್ಯವಿದ್ದ ಯೋಜನೆ ಇದು. ಕಡಿಮೆ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿದೆ. ರೈತರಿಗೆ ಇದರಿಂದ ಅನುಕೂಲವಾಗಿದೆ’ ಎಂದು ಹೇಳಿದರು.

ಉದ್ಘಾಟನಾ ರಾಜಕೀಯಕ್ಕೆ ನಾನಿಲ್ಲ: ಯೋಜನೆ ಉದ್ಘಾಟನೆ ವಿಚಾರವಾಗಿ ಆಗಿರುವ ಗೊಂದಲಕ್ಕೂ ನನಗೂ ಸಂಬಂಧವಿಲ್ಲ. ಉದ್ಘಾಟನಾ ರಾಜಕೀಯಕ್ಕೆ ನಾನಿಲ್ಲ. ನಾನಿಂದು ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ಪೂಜೆ ಸಲ್ಲಿಸಿದ್ದೇನಷ್ಟೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.