ADVERTISEMENT

ಚಾಮರಾಜನಗರ | ಕುಸಿದ ಅಂತರ್ಜಲ; ಜಲ ಸಂರಕ್ಷಣೆಗೆ ಬೇಕಿದೆ ಒತ್ತು

ಎರಡು ವರ್ಷಗಳಿಗೆ ಹೋಲಿಸಿದರೆ, ಈ ಮಾರ್ಚ್‌ನಲ್ಲಿ ಗರಿಷ್ಠ ಮಟ್ಟಕ್ಕೆ ಕುಸಿದ ನೀರಿನ ಮಟ್ಟ

ಸೂರ್ಯನಾರಾಯಣ ವಿ
Published 8 ಏಪ್ರಿಲ್ 2024, 8:08 IST
Last Updated 8 ಏಪ್ರಿಲ್ 2024, 8:08 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸೋಮರಸನ ಕೆರೆಯಲ್ಲಿ ತಳ ಮುಟ್ಟಿದ ನೀರನ್ನು ಕುಡಿಯುತ್ತಿರುವ ಆನೆಗಳು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸೋಮರಸನ ಕೆರೆಯಲ್ಲಿ ತಳ ಮುಟ್ಟಿದ ನೀರನ್ನು ಕುಡಿಯುತ್ತಿರುವ ಆನೆಗಳು   

ಚಾಮರಾಜನಗರ: ಜಿಲ್ಲೆಯಲ್ಲಿ ರಣ ಬಿಸಿಲು ನೆತ್ತಿ ಸುಡುತ್ತಿದೆ. ಉಷ್ಣಾಂಶ 38–39 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ.  ದಶಕದ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಬಿಸಿಲನ್ನು ಕಂಡಿಲ್ಲ ಎಂದು ಹೇಳುತ್ತಾರೆ ಜಿಲ್ಲೆಯ ಜನ. ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿಹೋಗಿದೆ. ಬಹಳಷ್ಟು ಕೆರೆಕಟ್ಟೆಗಳು ಬರಿದಾಗಿವೆ. ಜನ ಜಾನುವಾರುಗಳಿಗೆ ಅಲ್ಲಲ್ಲಿ ನೀರು, ಮೇವಿನ ಕೊರತೆ ಕಾಡಲು ಆರಂಭಿಸಿದೆ.  

ಕಳೆದ ವರ್ಷ ಮುಂಗಾರು ಪೂರ್ವ, ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ನಿರೀಕ್ಷೆಯಷ್ಟು ಮಳೆಯಾಗದೇ ಇರುವುದರಿಂದ ಕೆರೆಕಟ್ಟೆಗಳು ಬೇಸಿಗೆಯ ಆರಂಭದಲ್ಲೇ ಬರಿದಾಗಿವೆ. ಕೆರೆ ತುಂಬಿಸುವ ಯೋಜನೆಗೆ ಬರುವ ವ್ಯಾಪ್ತಿಯ ಕೆಲವು ಕೆರೆಗಳಲ್ಲಿ ನೀರಿವೆ. ಇದ್ದರೂ ನೀರು ತಳಮಟ್ಟಕ್ಕೆ ತಲುಪಿದೆ.  

ಜಲ ಮೂಲಗಳಲ್ಲಿ ನೀರಿಲ್ಲದಿರುವುದರಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಕೊಳವೆಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ಹಲವು ಕೊಳವೆಬಾವಿಗಳು ನಿಷ್ಕ್ರಿಯವಾಗಿರುವುದರಿಂದ ಕೃಷಿಗೆ ತೊಂದರೆಯಾಗಿದೆ. ಕುಡಿಯುವ ಉದ್ದೇಶಕ್ಕೆ ಮಾತ್ರ ನೀರು ಬಳಸುವಂತಾಗಿದೆ. 

ADVERTISEMENT

ಜಿಲ್ಲಾ ಅಂತರ್ಜಲ ನಿರ್ದೇಶನಾಲಯ ಕಚೇರಿ ನೀಡಿರುವ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಕೃಷಿ ಉದ್ದೇಶದ 34,763 ಕೊಳವೆಬಾವಿಗಳಿವೆ (ಎಲ್ಲ ಕೊಳವೆ ಬಾವಿಗಳು ನೋಂದಣಿಯಾಗದಿರುವುದರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು).

ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ಏಳೆಂಟು ಸ್ಪ್ರಿಂಕ್ಲರ್‌ ಹಾರುತ್ತಿದ್ದ ಜಾಗದಲ್ಲಿ ಈಗ ಎರಡು ಮೂರು ಹಾರುತ್ತವೆ. ಹನಿ ನೀರಾವರಿ ಪದ್ಧತಿಯಲ್ಲೂ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ಹೀಗಾಗಿ, ಕೆಲವು ಕಡೆಗಳಲ್ಲಿ ತೋಟಗಾರಿಕಾ ಬೆಳೆಗಳು ಒಣಗುವುದಕ್ಕೆ ಆರಂಭಿಸಿವೆ. ಇರುವ ನೀರಿನಲ್ಲಿ ಬೆಳೆ ನಿರ್ವಹಣೆ ಮಾಡುತ್ತಿದ್ದು, ಒಂದೆರಡು ವಾರದಲ್ಲಿ ಮಳೆಯಾಗದಿದ್ದರೆ ಅಡಿಕೆಯಂತಹ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳುತ್ತಾರೆ ರೈತರು. 

15.39 ಮೀ.ಗೆ ಕುಸಿದ ಅಂತರ್ಜಲ: ಮಾರ್ಚ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಅಂತರ್ಜಲದ ಸರಾಸರಿ ಮಟ್ಟ 15.89 ಮೀಟರ್‌ಗೆ ಕುಸಿದಿದೆ (ನೆಲಮಟ್ಟದಿಂದ). 2022ರ ಮಾರ್ಚ್‌ ತಿಂಗಳಲ್ಲಿ ಇದು 14.89 ಮತ್ತು 2023ರಲ್ಲಿ 11.03 ಮೀಟರ್‌ ಇತ್ತು. 

ಅಂತರ್ಜಲದ ಕೊರತೆ ತೀವ್ರವಾಗಿ ಇರುವ ಗುಂಡ್ಲುಪೇಟೆಯಲ್ಲಿ ಅಂತರ್ಜಲವು ನೆಲ ಮಟ್ಟದಿಂದ 19.64 ಮೀಟರ್‌ ಆಳದಲ್ಲಿದೆ. ಈ ಮಟ್ಟವು ಫೆಬ್ರುವರಿಯಲ್ಲಿ 18.27 ಮೀಟರ್‌ ಹಾಗೂ ಜನವರಿಯಲ್ಲಿ 17.38 ಮೀಟರ್‌ ಇತ್ತು. 

2022ರಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಮಳೆಯಾಗಿದ್ದರಿಂದ ಕೆರೆಕಟ್ಟೆಗಳು ಹಲವು ಬಾರಿ ಕೋಡಿ ಬೀಳುವುದರ ಜೊತೆಗೆ ಕೆಟ್ಟು ಹೋಗಿದ್ದ ಕೊಳವೆ ಬಾವಿಗಳೆಲ್ಲ ಸಕ್ರಿಯವಾಗಿದ್ದವು. ಹಲವು ಕೊಳವೆಬಾವಿಗಳಲ್ಲಿ ನೀರು ತುಂಬಿ ಹೊರಗೆ ಹರಿಯುತ್ತಿತ್ತು. ಹೀಗಾಗಿ, ಕಳೆದ ವರ್ಷ ಬೇಸಿಗೆಯಲ್ಲೂ ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿರಲಿಲ್ಲ. ಕಡು ಬೇಸಿಗೆಯ ಏಪ್ರಿಲ್‌ ತಿಂಗಳಲ್ಲಿ ಅಂತರ್ಜಲದ ಮಟ್ಟ 11.27 ಮೀಟರ್‌ ಆಗಿತ್ತು.

ಕಳೆದ ವರ್ಷ ಏಪ್ರಿಲ್‌ ತಿಂಗಳ ಕೊನೆಗೆ ಮಳೆಯಾಗಿದ್ದರಿಂದ ಮೇ ತಿಂಗಳಲ್ಲಿ ಭೂಮಿಯೊಳಗಿನ ನೀರಿನ ಮಟ್ಟದಲ್ಲಿ ಏರಿಕೆಯಾಗಿತ್ತು. 10.20 ಮೀಟರ್‌ ಆಳದಲ್ಲಿ ನೀರು ಸಿಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, 2022ರಲ್ಲಿ ಅಂತರ್ಜಲ ಮಟ್ಟ ಸ್ವಲ್ಪ ಕೆಳಗಿತ್ತು. ಆದರೆ, ಈ ಬಾರಿಯಷ್ಟು ಕಡಿಮೆಯಾಗಿರಲಿಲ್ಲ. 

ಕಬಿನಿ ಕಾಲುವೆ ನೀರು ಹರಿಯುವ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಈ ಸಲವೂ ಅಂತರ್ಜಲ ಮಟ್ಟ ಹೆಚ್ಚು ಕುಸಿದಿಲ್ಲ. ಆದರೆ, ಚಾಮರಾಜನಗರ ತಾಲ್ಲೂಕಿನಲ್ಲಿ ಗಣನೀಯವಾಗಿ ಕುಸಿದಿದೆ. ತಾಲ್ಲೂಕಿನಲ್ಲಿ 2023ರಲ್ಲಿ ವರ್ಷದ ಮೊದಲ ಮೂರು ತಿಂಗಳಲ್ಲಿ ಅಂತರ್ಜಲ ಮಟ್ಟ ಕ್ರಮವಾಗಿ 7.57 ಮೀಟರ್‌, 8.94 ಮೀಟರ್‌, 9.68 ಮೀಟರ್‌ ಆಗಿತ್ತು. ಈ ಬಾರಿ ಅದು 14.55 ಮೀ., 16.45 ಮೀ. ಮತ್ತು 18.39 ಮೀಟರ್‌ಗೆ ಕುಸಿದಿದೆ. 

‘ಚಾಮರಾಜನಗರ ತಾಲ್ಲೂಕಿನ ಪರಿಸ್ಥಿತಿಯೂ ಗುಂಡ್ಲುಪೇಟೆ ತಾಲ್ಲೂಕಿನಂತೆ ತೀವ್ರವಾಗಿದೆ. ಕೆಲವು ಕೆರೆಗಳಲ್ಲಿ ಇನ್ನೂ ನೀರಿರುವುದರಿಂದ ಸದ್ಯಕ್ಕೆ ತೀವ್ರವಾದ ಸಮಸ್ಯೆ ಕಾಣಿಸಿಕೊಂಡಿಲ್ಲ’ ಎಂದು ಹೇಳುತ್ತಾರೆ ಅಧಿಕಾರಿಗಳು.

ಜಲ ರಕ್ಷಣೆಗೆ ಬೇಕಿದೆ ಆದ್ಯತೆ‌: ಜಿಲ್ಲೆಯಲ್ಲಿ 2014–15ನೇ ಸಾಲಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಮೂಲದಿಂದ ಕೆರೆಗಳಿಗೆ ನೀರು ಹರಿಸುವ ಯೋಜನೆ ಅನುಷ್ಠಾನಗೊಂಡಿತು. ಆ ಬಳಿಕ ಬೇಸಿಗೆಯಲ್ಲಿ ಹಲವು ಗ್ರಾಮಗಳಲ್ಲಿ ನೀರಿನ ಕೊರತೆ ಗಣನೀಯವಾಗಿ ಕಾಡಿಲ್ಲ. ಈ ವರ್ಷ ಪರಿಸ್ಥಿತಿ ಗಂಭೀರವಾಗಿದೆ. ಜಲ ಸಂರಕ್ಷಣೆಯ ಬಗ್ಗೆ ಯೋಚನೆ ಮಾಡುವ ಸಮಯ ಬಂದಿದೆ ಎಂದು ಹೇಳುತ್ತಾರೆ ಪರಿಸರವಾದಿಗಳು, ಪ್ರಗತಿಪರ ರೈತರು.

ಮಳೆಗಾಲದಲ್ಲಿ ಹರಿದು ಹೋಗಿ ವ್ಯರ್ಥವಾಗುವ ನೀರನ್ನು ಹಿಡಿದಿಟ್ಟು, ಭೂಮಿಗೆ ಮರುಪೂರಣ ಮಾಡುವ, ಮಳೆ ನೀರಿನ ಸಂಗ್ರಹದಂತಹ ಪ್ರಯತ್ನಗಳು ಜಾರಿಗೆ ಬರಬೇಕಾದ ಅನಿವಾರ್ಯತೆಯನ್ನು ಈಗಿನ ಪರಿಸ್ಥಿತಿ ಹುಟ್ಟುಹಾಕಿದೆ ಎಂಬ ಅಭಿಪ್ರಾಯವನ್ನು ಭೂವಿಜ್ಞಾನಿಗಳು, ಕೆರೆ ಸಂರಕ್ಷಣೆ ಹೋರಾಟಗಾರರು, ಪರಿಸರ ಪ್ರೇಮಿಗಳು ವ್ಯಕ್ತಪಡಿಸುತ್ತಿದ್ದಾರೆ.    

ಪೂರಕ ಮಾಹಿತಿ: ಬಿ.ಬಸವರಾಜು, ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ.

ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನಹಳ್ಳಿ ಕೆರೆ ಸಂಪೂರ್ಣವಾಗಿ ಬರಿದಾಗಿದೆ
ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿರುವ ಕೆರೆಯಲ್ಲಿ ನೀರು ತಳ ಮುಟ್ಟಿದೆ

ಜನರು ಏನಂತಾರೆ?

ಕೆರೆಗಳನ್ನು ತುಂಬಿಸಬೇಕಾಗಿದೆ 2010–11–12ರಲ್ಲಿ ಈ ರೀತಿಯ ಬಿಸಿಲು ಜಿಲ್ಲೆಯಲ್ಲಿ ಕಂಡು ಬಂದಿತ್ತು. ಅಂತರ್ಜಲ ಮಟ್ಟವೂ ಕುಸಿದಿತ್ತು. 2014–15ರಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ಬಂದ ಬಳಿಕ ಕೆರೆಗಳು ಭರ್ತಿಯಾದ ಪ್ರದೇಶದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆಬಾವಿಗಳನ್ನು ಹೊಂದಿರುವ ರೈತರ ಬೆಳೆಗಳು ಉಳಿದಿದ್ದವು. ಈ ಬಾರಿಯೂ ಕೆರೆಗಳ ಸುತ್ತಮುತ್ತಲಿನ ರೈತರಿಗೆ ಹೆಚ್ಚು ತೊಂದರೆಯಾಗಿಲ್ಲ. ಕೆರೆಗಳನ್ನು ತುಂಬಿಸಿದರೆ ಬೇಸಿಗೆಯಲ್ಲಿ ರೈತರು ಬರದಿಂದ ಬಚಾವಾಗಬಹುದು. ಹೀಗಾಗಿ ಸರ್ಕಾರ ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚು ಪ್ರಾಮುಖ್ಯ ನೀಡಬೇಕು. 

-ಕಾಳನಹುಂಡಿ ಗುರುಸ್ವಾಮಿ  

ಕೆರೆಗಳಿಗೆ ನೀರು ತಂಬಿಸುವ ಹೋರಾಟ ಸಮಿತಿ ಅಧ್ಯಕ್ಷ  ಜಲ ಮರುಪೂರಣ ಅಗತ್ಯ ಕೆರೆಕಟ್ಟೆಗಳನ್ನು ಉಳಿಸಬೇಕಿದೆ. ದುರಾದೃಷ್ಟವಶಾತ್ ಎಲ್ಲ ಕಡೆಗಳಲ್ಲೂ ಕೆರೆಗಳ ಜಾಗ ಒತ್ತುವರಿಯಾಗುತ್ತಿವೆ. ಇದು ಆತಂಕಕಾರಿ ಬೆಳವಣಿಗೆ. ಮಳೆಗಾಲದಲ್ಲಿ ನೀರಿಂಗಿಸುವ ಕೆಲಸ ಮಾಡಬೇಕು. ನೀರು ಹರಿಯುವ ಜಾಗದಲ್ಲಿ ಹಳ್ಳ ಗುಂಡಿಗಳನ್ನು ತೋಡಿ ನೀರಿನ ಹರಿಯುವಿಕೆ ನಿಧಾನಗೊಳಿಸಬೇಕು. ಗುಡ್ಡ ಖಾಲಿ ಜಾಗದಲ್ಲಿ ಹರಿಯುವ ನೀರನ್ನು ಭೂಮಿಗೆ ಇಳಿಯುವಂತೆ ಮಾಡಬೇಕು. ನಿರಂತರವಾಗಿ ಈ ಕೆಲಸ ನಡೆದರೆ ಅಂತರ್ಜಲ ಮಟ್ಟ ಹೆಚ್ಚಲಿದೆ. ಬೇಸಿಗೆಯಲ್ಲಿ ನೀರಿನ ಅಭಾವವನ್ನು ತಪ್ಪಿಸಬಹುದು.

–ವಲ್ಲಿಯಮ್ಮಾಳ್ ಅನಿಷಾ ಸಾವಯವ ಕೃಷಿ ಸಂಸ್ಥೆ ಮಾರ್ಟಳ್ಳಿ ಹನೂರು ತಾಲ್ಲೂಕು

ಕೆರಕಟ್ಟೆಗಳು ಖಾಲಿ ತಾಲ್ಲೂಕಿನ ಕೆರೆ ಕಟ್ಟೆ ಮತ್ತು ತೊರೆಗಳಲ್ಲಿ ನೀರು ತಳಸೇರಿದೆ. ಇದರಿಂದ ಕೊಳವೆ ಬಾವಿಗಳ ನೀರಿನ ಮಟ್ಟ ಕುಸಿದಿದೆ. ಮುಂಜಾನೆ ಹೆಚ್ಚು ನೀರು ಹರಿಸುವ ಕೊಳವೆಬಾವಿಗಳು ಮಧ್ಯಾಹ್ನದ ನಂತರ ತಳ ಮುಟ್ಟುತ್ತವೆ. ಇದರಿಂದ ಬೆಳೆಗಳಿಗೆ ನೀರು ಪೂರೈಸಲು ಸಮಸ್ಯೆ ಎದುರಿಸುವಂತಾಗಿದೆ. ಕೊಳವೆ ಬಾವಿಗಳ ಸುತ್ತಮುತ್ತ ಇದ್ದ ಕೆರೆ ಅಣೆಕಟ್ಟೆಯಲ್ಲಿ ನೀರು ಕುಸಿದಿರುವುದರಿಂದ ಈ ಸಮಸ್ಯೆ ಎದುರಾಗಿದೆ.

–ದೊರೆಸ್ವಾಮಿ ಗೌಡಹಳ್ಳಿ ಯಳಂದೂರು ತಾಲ್ಲೂಕು

ಜಲ ಸಂರಕ್ಷಣೆಗೂ ಬೇಕಿದೆ ಗಮನ ಮರಗಿಡಗಳ ಸಂರಕ್ಷಣೆಯ ಬಗ್ಗೆ ನಾವು ಹೆಚ್ಚು ಮಾತನಾಡುತ್ತೇವೆ. ನಗರದಲ್ಲಿ ಈ ಪ್ರಮಾಣದ ಬಿಸಿಲು ನನ್ನ ಅನುಭವಕ್ಕೆ ಇಲ್ಲಿವರೆಗೆ ಬಂದಿಲ್ಲ. ಮಧ್ಯಾಹ್ನ ಮನೆಯಿಂದ ಹೊರಗಡೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಅಲ್ಲಲ್ಲಿ ನೀರಿನ ಕೊರತೆ ಕಾಡುತ್ತಿದೆ. ಗಿಡಮರ ಸಂರಕ್ಷಣೆಯ ನಡುವೆ ನಾವು ಜಲ ಸಂರಕ್ಷಣೆಯ ಬಗ್ಗೆಯೂ ಮಾತನಾಡಬೇಕಿದೆ. ನಾವು ನೀರನ್ನು ಮಿತಿಗಿಂತ ಹೆಚ್ಚು ಪೋಲುಮಾಡುತ್ತಿದ್ದೇವೆ. ಹಿತ ಮಿತ ನೀರು ಬಳಕೆ ಬಗ್ಗೆ ಜಾಗೃತಿ ಮೂಡುವುದರ ಜೊತೆಗೆ ಮಳೆ ನೀರು ಇಂಗಿಸುವ ನಿಟ್ಟಿನಲ್ಲೂ ಯೋಚನೆ ಮಾಡಬೇಕಿದೆ. 

– ಸಿ.ಎಂ.ವೆಂಕಟೇಶ್‌ ಪರಿಸರ ಪ್ರೇಮಿ ಚಾಮರಾಜನಗರ

‘ಮಳೆ ನೀರು ಸಂಗ್ರಹಕ್ಕೆ ಒತ್ತುಕೊಡಿ’
ಅಂತರ್ಜಲ ಸ್ಥಿತಿಗತಿ ಬಗ್ಗೆ ಪ್ರತಿಕ್ರಿಯಿಸಿದ ಅಂತರ್ಜಲ ನಿರ್ದೇಶನಾಲಯದ ಜಿಲ್ಲಾ ಕಚೇರಿಯ ಹಿರಿಯ ಭೂ ವಿಜ್ಞಾನಿ ಆರ್‌.ಧನಲಕ್ಷ್ಮಿ ‘ಬರ ಪರಿಸ್ಥಿತಿ ಇರುವುದರಿಂದ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದೆ. ಐದು ತಾಲ್ಲೂಕುಗಳಿಗೆ ಹೋಲಿಸಿದರೆ ಗುಂಡ್ಲುಪೇಟೆಯಲ್ಲಿ ಹೆಚ್ಚು ಕುಸಿದಿದೆ. ನಂತರದ ಸ್ಥಾನದಲ್ಲಿ ಚಾಮರಾಜನಗರ ತಾಲ್ಲೂಕು ಇದೆ. ಹನೂರು ಭಾಗದಲ್ಲೂ ಅಂತರ್ಜಲದ ಮಟ್ಟ ಗಣನೀಯವಾಗಿ ಕುಸಿದಿದೆ. 2014–15ರ ಮೊದಲು ಇಂತಹ ಪರಿಸ್ಥಿತಿ ಉದ್ಭವವಾಗಿತ್ತು. ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಂಡ ನಂತರ ಆ ಭಾಗದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿತ್ತು. ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಚಾಮರಾಜನಗರ ತಾಲ್ಲೂಕಿನ ಎರಡು ಕೆರೆಗಳ ವ್ಯಾಪ್ತಿಯಲ್ಲಿ ನಾವು ಅಧ್ಯಯನ ಕೈಗೊಂಡಿದ್ದೆವು. ಆ ಭಾಗದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ 1.5–2 ಇಂಚಿನಿಂದ 2.5–3 ಇಂಚುಗಳಷ್ಟು ಏರಿಕೆಯಾಗಿತ್ತು’ ಎಂದು ವಿವರಿಸಿದರು.  ‘ಕೆರೆ ತುಂಬಿಸುವ ಯೋಜನೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚು ಕುಸಿದಿಲ್ಲ. ರೈತರು ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ನೀರು ಇಂಗಿಸಲು ಕ್ರಮ ಕೈಗೊಳ್ಳಬೇಕು. ಜಮೀನಿನ ಖಾಲಿ ಜಾಗದಲ್ಲಿ ಗುಂಡಿಗಳನ್ನು ನಿರ್ಮಿಸುವುದು ತೊಟ್ಟಿ ನಿರ್ಮಾಣ ಕೆರೆಗಳ ನಿರ್ಮಾಣದಂತಹ ಕೆಲಸಗಳನ್ನು ಕೈಗೊಂಡು ಮಳೆಗಾಲದಲ್ಲಿ ಅವುಗಳಲ್ಲಿ ನೀರು ಸಂಗ್ರಹವಾಗುವಂತೆ ಮಾಡಬೇಕು. ಇಂತಹ ಪ್ರಯತ್ನಗಳು ಭವಿಷ್ಯದಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲಿವೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.