ADVERTISEMENT

ಮಾನವ– ವನ್ಯಪ್ರಾಣಿ ಸಂಘರ್ಷ ತಡೆಗೆ ಎಐ ತಂತ್ರಜ್ಞಾನ

ಚಾಮರಾಜನಗರ: ರೈತರೊಂದಿಗೆ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 20:05 IST
Last Updated 2 ನವೆಂಬರ್ 2025, 20:05 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಚಾಮರಾಜನಗರ: ‘ಮಾನವ–ವನ್ಯಜೀವಿ ಸಂಘರ್ಷ ತಡೆಗೆ ಬಂಡೀಪುರ ಅರಣ್ಯದೊಳಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಡ್ರೋನ್‌ ಕ್ಯಾಮೆರಾ ಅಳವಡಿಸ ಲಾಗುವುದು. ಕಾಡುಪ್ರಾಣಿಗಳು ನಾಡಿನತ್ತ ಬಾರದಂತೆ ಕ್ರಮ ಕೈಗೊಳ್ಳಲು ಕಮಾಂಡಿಂಗ್ ಸೆಂಟರ್ ತೆರೆಯಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಮೈಸೂರು ಜಿಲ್ಲೆ ಸರಗೂರು ವ್ಯಾಪ್ತಿಯಲ್ಲಿ ಹುಲಿ ದಾಳಿ ಪ್ರಕರಣಗಳು ನಡೆಯುತ್ತಿರುವ ಕಾರಣದಿಂದ, ಸೂಕ್ತ ಪರಿಹಾರ ಕೈಗೊಳ್ಳುವಂತೆ ಜನರಿಂದ ಒತ್ತಾಯ ಕೇಳಿಬಂದಿತ್ತು. ಜನಾಕ್ರೋಶಕ್ಕೆ ಮಣಿದ ಸಚಿವರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.

‘ಸಂಘರ್ಷ ತಡೆಗೆ ಸ್ಥಳೀಯರು ಹಾಗೂ ರೈತರ ಸಲಹೆ ಸಹಕಾರ ಪಡೆಯಲಾಗುವುದು. ಸಂಘರ್ಷ ತಡೆ ಸಮಿತಿಗೂ ಸ್ಥಳೀಯರನ್ನು ಸೇರಿಸಿಕೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ADVERTISEMENT

‘ಅರಣ್ಯದೊಳಗೆ ಅಕ್ರಮ ರೆಸಾರ್ಟ್‌, ಹೋಂಸ್ಟೇಗಳ ನಿರ್ಮಾಣ, ಗಣಿಗಾರಿಕೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡಿಲ್ಲ. ಅಕ್ರಮಗಳ ಕುರಿತು ದೂರುಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘1972ರಲ್ಲಿ ಬಂಡೀಪುರದಲ್ಲಿ 12 ಹುಲಿಗಳಿದ್ದವು. ಪ್ರಸ್ತುತ 153ಕ್ಕೂ ಹೆಚ್ಚು ಹುಲಿಗಳಿವೆ. ಹುಲಿಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ವಿಸ್ತರಣೆಯಾಗದ ಪರಿಣಾಮ ಮಾನವ– ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ರಾಜ್ಯದಲ್ಲಿ ವನ್ಯಜೀವಿ ದಾಳಿಯಿಂದ ಪ್ರತಿ ವರ್ಷ ಸರಾಸರಿ 55ರಿಂದ 60 ಮಂದಿ ಸಾವಿಗೀಡಾಗುತ್ತಿದ್ದಾರೆ. 2021-22ರಲ್ಲಿ 41, 2022-23ರಲ್ಲಿ 57, 2023-24ರಲ್ಲಿ 65, 2024-25ರಲ್ಲಿ 46, 2025-26ರಲ್ಲಿ 30 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್‌.ಎಂ. ಗಣೇಶ್‌ಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಮತ್ತಷ್ಟು ಟ್ರಿಪ್‌ ಕಡಿತಕ್ಕೆ ಕ್ರಮ’

‘ಬಂಡೀಪುರದಲ್ಲಿ ಸಫಾರಿ ಟ್ರಿಪ್ ಕಡಿತ ಮಾಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಕಡಿತಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ‘ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಸಮಯ ಕಳೆಯದೇ ಸಂಘರ್ಷಪೀಡಿತ ಗ್ರಾಮಗಳಿಗೆ ತೆರಳಿ ಸಮಸ್ಯೆ ಬಗೆಹರಿಸಬೇಕು. ಪ್ರಸ್ತುತ ಪಶುಸಂಗೋಪನಾ ಇಲಾಖೆಯಿಂದ ಪಶುವೈದ್ಯರ ಸೇವೆ ಎರವಲು ಪಡೆಯಲಾಗುತ್ತಿದ್ದು ವನ್ಯಜೀವಿ ವೈದ್ಯರ ಕೇಡರ್ ಸೃಷ್ಟಿಸಿ ನೇರ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.